ಬೀದರ್ ನಗರದ ಪಾಪನಾಶ ಕೆರೆಯನ್ನು ನಗರಸಭೆ ಸಿಬ್ಬಂದಿ ಸಂಪೂರ್ಣ ಸ್ವಚ್ಛಗೊಳಿಸಿದರು.
ʼಪಾಪನಾಶ ಕೆರೆಗೆ ಕಲುಷಿತ ನೀರು : ಮೀನುಗಳ ಸಾವುʼ ಎಂಬ ಶೀರ್ಷಿಕೆ ಅಡಿ ʼಈದಿನ.ಕಾಮ್ʼ ಬುಧವಾರ (ಫೆ.19) ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪರಿಣಾಮ ಎಚ್ಚೆತುಕೊಂಡ ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಅವರು ವರದಿಯಾದ ಗಂಟೆಯೊಳಗೆ ಪೌರಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿ ಕೆರೆಯಲ್ಲಿ ಶೇಖರಣೆಯಾದ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ.
ನಗರಸಭೆ ವತಿಯಿಂದ ವಾರಕ್ಕೊಮ್ಮೆ ಪಾಪನಾಶ ಕೆರೆ ಸ್ವಚ್ಛಗೊಳಿಸಲಾಗುತ್ತಿದೆ. ಪಾಪನಾಶಿನಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೂ, ಹಣ್ಣು, ಬಾಳೆದಿಂಡು, ಕಬ್ಬು ಹಾಗೂ ಅಲಂಕಾರಿಕ ವಸ್ತುಗಳನ್ನು ಕೆರೆಯಂಗಳದಲ್ಲಿ ಚೆಲ್ಲಿದ ಪರಿಣಾಮ ಮೀನುಗಳು ಸಾವನ್ನಪ್ಪಿದ್ದು, ಈ ಸ್ಥಳವನ್ನು ಪರಿಶೀಲಿಸಿ ವರದಿ ನೀಡುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆʼ ಎಂದು ಪೌರಾಯುಕ್ತ ಶಿವರಾಜ್ ರಾಠೋಡ್ ಅವರು ಸಿಎಂ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ʼಐತಿಹಾಸಿಕ ಪಾಪನಾಶಿನಿ ಶಿವಲಿಂಗ ದೇವಸ್ಥಾನದ ಬಳಿಯ ಪಾಪನಾಶ ಕೆರೆಗೆ ಕಲುಷಿತ ನೀರು ಹರಿದು ಅಪಾರ ಸಂಖ್ಯೆಯ ಮೀನುಗಳು ಸಾವನ್ನಪ್ಪಿವೆ. ಇದರಿಂದ ಕೆರೆ ಸುತ್ತಲೂ ದುರ್ವಾವಾಸನೆ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೆರೆ ಸಂರಕ್ಷಣೆಗೆ ಮುಂದಾಗಬೇಕುʼ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಾಪನಾಶ ಕೆರೆಗೆ ಕಲುಷಿತ ನೀರು : ಮೀನುಗಳ ಸಾವು
ಈ ಕುರಿತು ʼಈದಿನ.ಕಾಮ್ ʼ ಸಚಿತ್ರ, ವಿಡಿಯೊ ಸಮೇತ ವಿವರವಾಗಿ ಸುದ್ದಿ ಪ್ರಕಟಿಸಿ ಸಿಎಂ ಕಚೇರಿಯ ʼಎಕ್ಸ್ʼ ಖಾತೆಗೆ ಟ್ಯಾಗ್ ಮಾಡಲಾಗಿತ್ತು. ವರದಿಯ ಹಿನ್ನೆಲೆ ಸ್ಪಂದಿಸಿದ ಮುಖ್ಯಮಂತ್ರಿಗಳ ಕಾರ್ಯಾಲಯದ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಈ ಬಗ್ಗೆ ತಕ್ಷಣವೇ ಕ್ರಮಕೈಗೊಂಡು ಅನುಪಾಲನಾ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಸಿಬ್ಬಂದಿಯಿಂದ ಕೆರೆ ಸ್ವಚ್ಛಗೊಳಿಸಿ ಪೋಟೊಗಳೊಂದಿಗೆ ವರದಿ ಸಲ್ಲಿಸಿದ್ದಾರೆ.





