ಬಾಕಿ ಶುಲ್ಕವನ್ನು ಪಾವತಿಸದೆ ಟಿಸಿ(ವರ್ಗಾವಣೆ ಪ್ರಮಾಣ ಪತ್ರ) ನೀಡಲು ಒಪ್ಪದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿ ತಾಯಿಯ ತಾಳಿ ಹಾಗೂ ಕಿವಿಯ ಬಂಗಾರದ ಓಲೆ ಬಿಚ್ಚಿಸಿಕೊಂಡಿರುವ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದ್ದು, ಬಳಿಕ ಪೋಷಕರ ಬಳಿ ಕ್ಷಮೆ ಕೇಳಿದ ಕಾಲೇಜು ಆಡಳಿತ ಮಂಡಳಿ ಅವರ ಬಂಗಾರವನ್ನು ಹಿಂದಿರುಗಿಸಿದೆ.
ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾವೇರಿ ಬೇರೆ ಕಾಲೇಜಿಗೆ ಸೇರಿಕೊಳ್ಳಲು ಟಿಸಿ ನೀಡುವಂತೆ ಆಡಳಿತ ಮಂಡಳಿಯ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿನ ಚೇರಮನ್ ಡಾ ಸಿಬಿ ಚಿನಿವಾಲ ಅವರು, ಬಾಕಿಯನ್ನು ಒಮ್ಮಗೇ ಪಾವತಿಸಿ ಟಿಸಿ ಪಡೆಯುವಂತೆ ಸೂಚಿಸಿದ್ದರು. ಟಿಸಿ ಪಡೆಯಲು ಶುಲ್ಕ ಬಾಕಿ ಶುಲ್ಕ ಪಾವತಿಸಲು ಹಣವಿಲ್ಲದ ಕಾರಣ ಕಾಲೇಜಿನ ಚೇರಮನ್ ಡಾ ಸಿಬಿ ಚಿನಿವಾಲ ವಿದ್ಯಾರ್ಥಿನಿ ತಾಯಿಯ ತಾಳಿ ಹಾಗೂ ಓಲೆಯನ್ನು ಒತ್ತೆಯಾಗಿಟ್ಟುಕೊಂಡ ಆರೋಪ ಕೇಳಿಬಂದಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಲಿ ತಾಳಿ ಮತ್ತು ಕಿವಿಯ ಓಲೆಯನ್ನು ವಾಪಸ್ ನೀಡಿರುವುದಾಗಿ ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ವಿದ್ಯಾರ್ಥಿನಿಯ ತಂದೆ ಹನಮಂತಪ್ಪ ವಾಲಿಕಾರ್ ಅವರನ್ನು ಸಂಪರ್ಕಿಸಿದ್ದು, “ನಮ್ಮ ಮಗಳು ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಅಲ್ಲಿ ಶುಲ್ಕ ಹೆಚ್ಚಿರುವ ಕಾರಣ ನಮ್ಮಿಂದ ಶುಲ್ಕ ಭರಿಸಲು ಆಗುವುದಿಲ್ಲ ಎಂದ ಕಾರಣ, ನನ್ನ ಮಗಳು ಟಿಸಿ ಪಡೆಯಲು ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಕಾಲೇಜು ಚೇರ್‌ಮನ್ ಡಾ ಚಿನಿವಾಲ ಉಳಿದ ಹಣವನ್ನು ಪಾವತಿಸಲು ಆಗುವುದಿಲ್ಲವೆಂದರೆ ನಿಮ್ಮ ಬಳಿ ಇರುವ ಬಂಗಾರವನ್ನೆಲ್ಲ ಕೊಡಿ ಎಂದು ಒತ್ತಾಯಿಸಿದ್ದರು. ಇದರಿಂದಾಗಿ ಕಾವೇರಿಯ ತಾಯಿ ತಾಳಿಸರ, ಬೆಂಡೋಲೆ ಎಲ್ಲವನ್ನೂ ಬಿಚ್ಚಿಕೊಟ್ಟಿದ್ದು, ಬಳಿಕ ಟಿಸಿ ಪಡೆದಿದ್ದರು. ಈ ಸುದ್ದಿ ಗೊತ್ತಾಗಿ ಕಾಲೇಜು ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆಯೇ ತಾಳಿ ಮತ್ತು ಓಲೆವನ್ನು ವಾಪಸ್ ನೀಡಿದ್ದಾರೆ” ಎಂದು ಹೇಳಿದರು.
“ನಾವು ಈಗಾಗಲೇ 10 ಸಾವಿರ ರೂಪಾಯಿ ಕಟ್ಟಿದ್ದೆವು. ನನ್ನ ಮಗಳೇ ಕಟ್ಟಿದ್ದಾಳೆ, ನಮಗೆ ತಿಳಿಸದೆಯೇ ಆ ಕಾಲೇಜಿಗೆ ಸೇರಿಕೊಂಡಿದ್ದಳು. 4 ವರ್ಷ ಅಗ್ರೀಮೆಂಟ್ ಅಂತೆ, ಒಟ್ಟು 3.60 ಲಕ್ಷ ಹಣವನ್ನು ಕಟ್ಟಬೇಕಂತೆ. ನಮ್ಮಂತ ಕೂಲಿಕಾರರಿಗೆ ಅದು ಸಾಧ್ಯವೇ?” ಎಂದರು.
ಕಳೆದ ವರ್ಷ ಗದಗದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು, ಹೋಗಿರಲಿಲ್ಲ. ಈ ಕಾಲೇಜಿನಲ್ಲಿ ಎರಡೇ ತಿಂಗಳು ಕಾಲೇಜಿಗೆ ಹೋಗಿರುವುದು 90 ಸಾವಿರ ಕೊಡಬೇಕಾಗಿತ್ತಂತೆ. ಆದರೆ, ಕಾಲೇಜು ಸಿಬ್ಬಂದಿ ನಾಲ್ಕು ವರ್ಷದ ಹಣ ಕಟ್ಟಿ ಅಂದರು. ನಮ್ಮ ಬಳಿ ಹಣ ಇರಲಿಲ್ಲ. ನಾನಿನ್ನು ಓದುವುದಿಲ್ಲ, ನನಗೆ ಟಿಸಿ ಕೊಡಿಸಿ ಬನ್ನಿ ಅಂತ ಕರೆದಳು. ಕಾಲೇಜಿಗೆ ಹೋಗಿ ನಾವು ಎರಡು ಮೂರು ಬಾರಿ ಕೇಳಿದರೂ ಅವರು ಟಿಸಿ ಕೊಟ್ಟಿರಲಿಲ್ಲ. ಟಿಸಿ ಕೇಳುವುದಕ್ಕೆ ಹೋದಾಗ ಹಣ ಕೇಳಿದ್ದರು. ನಾವು ಕೂಲಿ ಮಾಡಿ ಜೀವನ ಮಾಡೋರು ಹಣವಿಲ್ಲ ಅಂದಾಗ ಬಂಗಾರ ನೋಡಿ ಬಂಗಾರ ಕೇಳಿದರು. ನನ್ನ ಮಗಳು ಏನಾದ್ರೂ ಹೆಚ್ಚುಕಮ್ಮಿ ಮಾಡಿಕೊಂಡರೆ ಏನು ಮಾಡುವುದೆಂದು ಯೋಚಿಸಿ ನನ್ನ ಹೆಂಡತಿ ಬಂಗಾರ ಕೊಟ್ಟಳು. ಬಳಿಕವೇ ಮಾರ್ಕ್ಸ್ ಕಾರ್ಡ್, ಟಿಸಿ ಕೊಟ್ಟಿದ್ದಾರೆ” ಎಂದು ತಿಳಿಸಿದರು.
“ಒಂದು ಗಂಟೆ ಕಾಲ ಅವರು ನನ್ನ ಪತ್ನಿಯ ಬಂಗಾರ ಇಟ್ಟುಕೊಂಡಿದ್ದರು. ನಂತರ ಅವರ ತಪ್ಪಿನ ಅರಿವಾಗಿ, ನನ್ನ ಪತ್ನಿಯ ಬಳಿ ಕ್ಷಮೆ ಕೇಳಿ, ಚೇಂಬರ್‌ಗೆ ಕರೆದೊಯ್ದು ಚಹಾ ಕುಡಿಸಿ, ನಮ್ಮದು ತಪ್ಪಾಗಿದೆ, ಇನ್ಮುಂದೆ ಹೀಗಾಗುವುದಿಲ್ಲ, ನಮ್ಮನ್ನು ಕ್ಷಮಿಸಿಬಿಡಿ ಅಂತ ಹೇಳಿ ಬಂಗಾರವನ್ನು ವಾಪಸ್ ಕೊಟ್ಟಿದ್ದಾರೆ” ಎಂದು ಹೇಳಿದರು.
ಕ್ಷಮೆ ಕೇಳಿದ್ದಕ್ಕೆ ನಾವೂ ಕೂಡ ಕ್ಷಮಿಸಿ, ಮುಂದೆ ಯಾವುದೇ ಮಕ್ಕಳಿಗೆ ಹೀಗೆ ಆಗಬಾರದು ಅಂತ ಹೇಳಿ ಒಂದು ಲೆಟರ್ ಬರೆದುಕೊಟ್ಟು ಬಂದಿದ್ದೇವೆ. ಈಗ ಯಾವುದೇ ರೀತಿಯ ಸಮಸ್ಯೆ ಇಲ್ಲ, ಸಮಸ್ಯೆ ಬಗೆ ಹರಿದಿದೆ. ಆದರೆ ನನ್ನ ಮಗಳಿಗೆ ಒಂದು ವರ್ಷ ಹಿನ್ನಡೆಯಾಯಿತು. ಮುಂದಿನ ವರ್ಷಕ್ಕೆ ಮತ್ತೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕರೆ ಸೇರಿಕೊಳ್ಳುತ್ತಾಳೆ” ಎಂದರು.
ಈ ಸುದ್ದಿ ಓದಿದ್ದೀರಾ? ಮದ್ದೂರು ಘಟನೆ ಬಗ್ಗೆ ಕ್ರಮ ಕೈಗೊಂಡರೂ ಬಿಜೆಪಿ ಸಭೆ ನಡೆಸುವುದರಲ್ಲಿ ಅರ್ಥವಿದೆಯೇ: ಎನ್ ಚಲುವರಾಯಸ್ವಾಮಿ
ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ, ದೌರ್ಜನ್ಯಗಳ ಹಿನ್ನೆಲೆಯಲ್ಲಿ ಬಡ ಕುಟುಂಬಳ ಮಕ್ಕಳು ಉನ್ನತ ವಿದ್ಯಾಭ್ಯಾಸಗಳ ಕನಸುಗಳನ್ನು ಭಗ್ನಗೊಳಿಸಿಕೊಳ್ಳುವಂತ ದುಃಸ್ಥಿತಿ ಬಂದೊದಗಿದೆ. ಕೂಲಿಕಾರರ ಮಕ್ಕಳನ್ನು ಪುನಃ ಶೋಷಣೆಗೆ ಒಳಪಡಿಸುವುದು ಒಂದು ವ್ಯವಸ್ಥೆಯ ಹುನ್ನಾರವೇ ಆಗಿದೆ ಎನ್ನಬಹುದು.
ಸರ್ಕಾರಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸಿದರೆ ಶಿಕ್ಷಕರ ಕೊರತೆ ಇರುತ್ತದೆ, ಮೂಲಭೂತ ಸೌಕರ್ಗಳೇ ಇರುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿ ವಿದ್ಯಾಭ್ಯಾಸ ಮುಂದುವರೆಸಿದರೆ ತಮ್ಮನ್ನೇ ತಾವು ಮಾರಿಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ.





