ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದ ಹೃದಯಭಾಗದಲ್ಲಿರುವ ಕೋಟೆ ವೃತ್ತದ ಐತಿಹಾಸಿಕ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಪುಟ್ಟು ಆಂಜಿನಪ್ಪ ವೈಯುಕ್ತಿಕವಾಗಿ ₹5 ಲಕ್ಷಗಳ ದೇಣಿಗೆ ನೀಡಿದ್ದಾರೆ.
ಇತಿಹಾಸಕಾರರ ಪ್ರಕಾರ ಶಿಡ್ಲಘಟ್ಟದ ಮೊದಲ ದೇವಾಲಯವೆಂದು ಗುರುತಿಸಲ್ಪಡುವ ಈ ದೇವಾಲಯವನ್ನು ಅಬ್ಲೂಡು ಕೆಂಪೇಗೌಡರ ಪತ್ನಿ ಅಲಸೂರಮ್ಮ ಹಾಗೂ ಮಗ ಶಿವನೇಗೌಡರು ಕ್ರಿಶ 500 ರಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಮೊಘಲರ ದಾಳಿಗೆ ತುತ್ತಾಗಿ ಶಿಥಿಲವಾಗಿದ್ದ ದೇವಾಲಯ ಎರಡು ಬಾರಿ ನವೀಕರಣಗೊಂಡಿದ್ದು ಇದೀಗ ಮೂರನೆಯ ಬಾರಿಗೆ ಪುನರುಜ್ಜೀವ ಗೊಳ್ಳಲು ಸಜ್ಜಾಗುತ್ತಿದ್ದು, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ ಕೋಟೆಯ ದ್ವಾರದಲ್ಲಿ ನಿಂತಿರುವ ಈ ದೇವಾಲಯವು ಶಿಡ್ಲಘಟ್ಟದ ಪೌರಾಣಿಕತೆ ಹಾಗೂ ನಗರ ನಿರ್ಮಾಣದ ಸಂಕೇತವಾಗಿದೆ.
ಈ ನವೀಕರಣ ಯೋಜನೆಗೆ ಭಕ್ತರಿಂದ ತನು-ಮನ-ಧನದ ನೆರವು ಲಭಿಸುತ್ತಿದ್ದು, ಪುಟ್ಟು ಆಂಜಿನಪ್ಪನವರಿಂದ ಬಂದ ಐದು ಲಕ್ಷ ನೆರವು, ನಿಜಾರ್ಥದಲ್ಲಿ ದೇವಾಲಯದ ಪುನರ್ ಜೀವಕ್ಕೆ ಪ್ರಾಣವಾಗಿದೆ. ದೇವರ ಸೇವೆ ಎಂಬ ಧರ್ಮ, ಜನರ ಸೇವೆ ಎಂಬ ಕರ್ತವ್ಯ ಈ ಇಬ್ಬರ ನಡುವೆ ಸೇತುವೆಯಾಗಿ, ಆಂಜಿನಪ್ಪನವರು ತಮ್ಮ ಆತ್ಮೀಯ ಶ್ರದ್ಧೆಯೊಂದಿಗೆ ಈ ಕೊಡುಗೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅಲಿಪುರ ಗ್ರಾಮದಲ್ಲಿ ಅದ್ದೂರಿ ಮೊಹರಂ ಆಚರಣೆ
ಇಡೀ ಶಿಡ್ಲಘಟ್ಟದಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮಾಭಿವೃದ್ಧಿ ಕ್ಷೇತ್ರಗಳಾದ್ಯಂತ ಆಳವಾದ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪುಟ್ಟು ಆಂಜಿನಪ್ಪ ಈಗ ದೇವಾಲಯ ಪುನರ್ ನಿರ್ಮಾಣ ಕಾರ್ಯಕ್ಕೂ ಕೈಜೋಡಿಸಿದ್ದಾರೆ. ತಾಲೂಕಿನ ಹಲವಾರು ಹಳ್ಳಿಗಳಲ್ಲಿಯೂ ಅವರು ದೇವಸ್ಥಾನಗಳ ನಿರ್ಮಾಣಕ್ಕೆ ನೆರವಿನ ಹಸ್ತ ನೀಡಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟ್ ಅಧ್ಯಕ್ಷ ಡಾಲ್ಫಿನ್ ನಾಗರಾಜ್, ಖಜಾಂಚಿ ಅನಿಲ್, ರೂಪಸಿ ರಮೇಶ್, ಶ್ರೀನಾಥ್, ಬಳೆ ರಘು, ಚಿಕ್ಕಮನಿಯಪ್ಪ, ಗ್ಯಾಸ್ ಮುರಳಿ, ಮಯೂರ ಸರ್ಕಲ್ ರಾಜ್ ಕುಮಾರ್, ಮುರಳಿ, ಕನ್ನಡಪರ ರಾಮಾಂಜಿ, ಶ್ರೀನಿವಾಸ್ ಚಿನ್ನಿ, ದಾಮೋದರ್, ಸಾಧಿಕ್, ತುಮ್ಮನಹಳ್ಳಿ ವೆಂಕಟೇಶ್, ಬೂದಳ ವರದರಾಜ್, ವಾರುಹುಣಸೆಹಳ್ಳಿ ಮಂಜುನಾಥ್ ಸೇರಿದಂತೆ ಅನೇಕರು ಹಾಜರಿದ್ದರು.





