ಕರಾವಳಿ ಜಿಲ್ಲೆಯ ಹವಾಮಾನ, ಮಣ್ಣು ಮತ್ತು ತೇವಾಂಶ ಗೇರು ಬೆಳೆಗಾರಿಕೆಗೆ ಅನುಕೂಲವಾಗಿರುವುದರಿಂದ, ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡಿನ ಕಾಸರಗೋಡು ಪ್ರದೇಶಗಳು ದಶಕಗಳಿಂದ ಗೇರು ಉತ್ಪಾದನೆಯ ಪ್ರಮುಖ ಕೇಂದ್ರಗಳಾಗಿವೆ. ಗೇರು ಬೆಳೆ ಉತ್ತಮವಾಗಿರಲು ಪ್ರಖರ ಬಿಸಿಲು ಅತ್ಯಗತ್ಯ. ಇದೇ ಕಾರಣಕ್ಕೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಗೇರು ಕೃಷಿ ವ್ಯಾಪಕವಾಗಿದೆ. ಆದರೆ ಹೂ ಬೀಳುವ ಸಮಯದಲ್ಲಿ ಇಬ್ಬನಿ ಅಥವಾ ಮೋಡ ಕವಿದ ವಾತಾವರಣವಿದ್ದರೆ ಹೂಗಳು ಕರಟಿಬಿಡುವ ಸಂಭವ ಹೆಚ್ಚಾಗಿರುತ್ತದೆ. ಈ ಬಾರಿ ಕರಾವಳಿಯಲ್ಲಿ ಹವಾಮಾನ ಏರಿಳಿತ ಕಂಡುಬಂದಿದ್ದು, ಬೆಳೆ ಬೆಳವಣಿಗೆಗೆ ಅಡ್ಡಿಯಾಗಿ, ಗೇರು ಉತ್ಪಾದನೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ. ನವೆಂಬರ್ ತಿಂಗಳು ನಡೆಯುತ್ತಿದ್ದರು ಸಹ ಮಳೆ ನಿಲ್ಲದಿರುವುದು ಗೇರು ಬೆಳಗಾರರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಈ ವರ್ಷ ಏಕಕಾಲದಲ್ಲಿ ಮಳೆ–ಬಿಸಿಲು–ತೇವಾಂಶ ಮಿಶ್ರಿತ ಹವಾಮಾನ ಚಾಲ್ತಿಯಲ್ಲಿದ್ದರಿಂದ ಹಲವೆಡೆ ಗೇರು ತೋಟಗಳಲ್ಲಿ ಫಲೋತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಕರಾವಳಿಯಲ್ಲಿ ಈ ಬಾರಿ 25% ರಿಂದ 40% ರಷ್ಟು ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಗೇರು ತೋಟಗಳು ಈ ಬಾರಿ ಭಾರೀ ಸಂಕಷ್ಟ ಎದುರಿಸಿದರೂ, ರೈತರು ಮತ್ತು ತಜ್ಞರು ಗೇರು ಬೆಳೆಗೆ ಇನ್ನೂ ಭವಿಷ್ಯವಿದೆ ಎಂದು ನಂಬಿದ್ದಾರೆ. ವಿಜ್ಞಾನಾಧಾರಿತ ಕೃಷಿ ವಿಧಾನಗಳು, ಮಾರುಕಟ್ಟೆ ಸುರಕ್ಷತೆ ಹಾಗೂ ಸರಕಾರದ ಬೆಂಬಲ ದೊರಕಿದರೆ, ಕರಾವಳಿಯ ಗೇರು ಮುಂದಿನ ವರ್ಷಗಳಲ್ಲಿ ಮತ್ತೆ ಚೇತರಿಸಿಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

25 ವರ್ಷಗಳಿಂದ ಗೇರು ಕೃಷಿ ಮಾಡುತ್ತಿರುವ ರೈತ ಚಂದ್ರಶೇಖರ್ ಉಡುಪ ಕೇಂಚನೂರು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿ, “ಒಂದು ಕಾಲದಲ್ಲಿ ಉತ್ತಮ ಗೇರು ಬೆಳೆಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ಪಡೆದ ನಾನು, ಈಗ ನಿದ್ದೆಯಲ್ಲೂ ಗೇರು ಬೇಡ ಎನ್ನುವ ಪರಿಸ್ಥಿತಿ ಬಂದಿದೆ. 1965ರಿಂದ ನಮ್ಮ ಕುಟುಂಬ ಗೇರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಇಂದಿಗೂ 40ಕ್ಕೂ ಅಧಿಕ ತಳಿಗಳ ಗೇರುಗಳನ್ನು ಬೆಳೆಯುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಹವಾಮಾನ ವೈಪರೀತ್ಯ ಗೇರು ಕೃಷಿಯನ್ನು ಸಂಪೂರ್ಣವಾಗಿ ಕುಸಿತದ ದಾರಿಗೆ ತಳ್ಳಿದೆ” ಎಂದು ಹೇಳಿದರು.
“ಕರಾವಳಿಯಲ್ಲಿ ಕಳೆದ ಮೂರು ವರ್ಷಗಳಿಂದ ನವೆಂಬರ್–ಡಿಸೆಂಬರ್‌ವರೆಗೂ ಮಳೆ, ನಂತರ ತಕ್ಷಣ ಚಳಿ ಮತ್ತು ಬಳಿಕ ತೀವ್ರ ಬಿಸಿಲು ಎಂಬ ಅಸ್ತಿರ ಹವಾಮಾನ ಕ್ರಮ ಕಂಡುಬರುತ್ತಿದೆ. ಈ ವ್ಯತ್ಯಾಸದಿಂದ ಗೇರು ಹೂವು ಸರಿಯಾಗಿ ಕಾಯಿ ಕಚ್ಚದೇ ನಷ್ಟ ಹೆಚ್ಚಾಗಿದೆ. ಹಿಂದೆ 1 ಎಕರೆಯಲ್ಲಿ 18–20 ಕ್ವಿಂಟಲ್ ಬೀಜ ಸಿಕ್ಕಿದರೆ, ಇಂದು ಒಂದರಿಂದ ಒಂದೂವರೆ ಕ್ವಿಂಟಲ್ ಗೆ ಬಂದು ನಿಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಗೇರು ಕೃಷಿ ವಾಣಿಜ್ಯ ಬೆಳೆ ಎಂದು ಕರೆಯಲ್ಪಡುವುದಾದರೂ ಮಾರುಕಟ್ಟೆಯಲ್ಲಿ ಗೇರು ಬೀಜಗಳಿಗೆ ಸೂಕ್ತ ಧಾರಣೆ ಇಲ್ಲ. ಬಹುರಾಷ್ಟ್ರೀಯ ಕಂಪನಿಗಳು 40–50 ರೂದಲ್ಲಿ ಕಚ್ಚಾ ಬೀಜವನ್ನು ರಫ್ತಿಗೆ ಖರೀದಿ ಮಾಡುತ್ತಾರೆ. ನಮ್ಮ ಸ್ಥಳೀಯ ಬೀಜಕ್ಕೆ ಯಾರು ಬೆಲೆ ನೀಡುವುದಿಲ್ಲ. ಮಾರುಕಟ್ಟೆಯಲ್ಲಿ 80–100 ರೂಗೆ ಕೊಟ್ಟರೆ ಹೇಗೆ ಬದುಕೋದು? ಕನಿಷ್ಠ 200 ರೂ ಬೆಲೆ ಸಿಕ್ಕರೆ ಬೆಳೆಗಾರ ಉಸಿರಾಡಬಹುದು” ಎಂದು ಹೇಳಿದರು.
“ಗೇರು ಬೆಳೆ ನಷ್ಟವಾದರೂ ಯಾವುದೇ ಕ್ರಾಪ್ ಇನ್ಸೂರನ್ಸ್ ಯೋಜನೆ ಗೇರು ಬೆಳೆಗಾರರಿಗೆ ರಕ್ಷಣೆಯಾಗುವುದಿಲ್ಲ. ಸರ್ಕಾರದ ಸಂಶೋಧನಾ ಕೇಂದ್ರಗಳು ಉತ್ತಮ ತಳಿಗಳನ್ನು ಪರಿಚಯಿಸಿದರೂ, ಹವಾಮಾನ ವಿರೋಧದಿಂದ ಫಲಿತಾಂಶ ಸಿಗುವುದಿಲ್ಲ. ಎಲ್ಲರೂ ‘ಬೆಳೆಯಿರಿ’ ಎಂದು ಪ್ರೋತ್ಸಾಹ ಕೊಡುತ್ತಾರೆ. ಆದರೆ ನಷ್ಟವಾದಾಗ ಯಾರೂ ಬರೋದಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಪ್ರಸ್ತುತ ಗೇರು ಹಣ್ಣು ಧಾರಣೆ ಇಲ್ಲದೆ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆ. ಗೋವಾ ಮಾದರಿಯಲ್ಲಿ ನಮ್ಮಲ್ಲೂ ಎಥನಾಲ್ ಘಟಕ ಬಂದರೆ ಹಣ್ಣು ನಷ್ಟ ಕಡಿಮೆಯಾಗಬಹುದು. ಅಬಕಾರಿ ಇಲಾಖೆಯಲ್ಲಿ ಸುಧಾರಣೆ ತರಬೇಕು” ಎಂದು ಅಭಿಪ್ರಾಯಪಟ್ಟರು.
“ಸರ್ಕಾರ ಗೇರು ಬೀಜಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮುಂದಾಗಬೇಕು. ಕಚ್ಚಾ ಗೇರು ಬೀಜಕ್ಕೆ ಕನಿಷ್ಠ ₹200 ಧಾರಣೆ ನಿಗದಿ ಮಾಡಬೇಕು. ಗೇರು ಬೆಳೆಗಾರರಿಗೆ ವಿಶೇಷ ಕ್ರಾಪ್ ಇನ್ಸೂರನ್ಸ್ ಜಾರಿ ಮಾಡಬೇಕು. ಕರಾವಳಿ–ಮಲೆನಾಡಿನ ಗೇರು ಬೆಳೆಗಾರರನ್ನು ಸಂಘಟಿಸಿ ಸಮಗ್ರ ಚರ್ಚೆ ನಡೆಸಬೇಕು. ಗೇರು ಹಣ್ಣಿಗೆ ಮಾರುಕಟ್ಟೆ ಕಲ್ಪಿಸಲು ಎಥನಾಲ್ ಘಟಕಗಳಂತಹ ಪರ್ಯಾಯ ಕೈಗಾರಿಕೆಗಳನ್ನು ಸ್ಥಾಪಿಸಬೇಕು” ಎಂದು ಸಲಹೆ ನೀಡಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಗುಲ್ವಾಡಿ ಕ್ಯಾಶೂ ಇಂಡಸ್ಟ್ರೀ ವ್ಯವಸ್ಥಾಪಕ ಜಿ ಎಂ ಇಸ್ಮಾಯಿಲ್, “25 ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ಒಂದು ಕಾಲದಲ್ಲಿ ಸ್ಥಳೀಯವಾಗಿ ಸಾಕಷ್ಟು ಗೇರು ಬೀಜಗಳು ಸಿಗುತ್ತಿದ್ದವು. ಆ ಸಮಯದಲ್ಲಿ ಫ್ಯಾಕ್ಟರಿಗಳೂ ಕಡಿಮೆ ಇದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಫ್ಯಾಕ್ಟರಿಗಳು ಹೆಚ್ಚಾಗಿದ್ದು ಪರಸ್ಪರ ಸ್ಪರ್ಧೆ ನಡೆಯುತ್ತಲಿದೆ. ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳು ಸಿಗುವುದೇ ಕಷ್ಟವಾಗಿದೆ. ಈ ಕೊರತೆಯನ್ನು ನೀಗಿಸಲು ನಾವು ಸೌತ್ ಆಫ್ರಿಕಾದಿಂದ ಗೇರು ಬೀಜಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಅಲ್ಲಿಂದ ತಂದರೂ ಇಲ್ಲಿಯ ಮಾರುಕಟ್ಟೆಯಲ್ಲಿ ಬೀಜಗಳು ಕಡಿಮೆಯೇ. ಕಚ್ಚಾ ವಸ್ತುವಿನ ಬೆಲೆ ಜಾಸ್ತಿ. ಆದರೆ, ಇಲ್ಲಿ ಮಾರಾಟಕ್ಕೆ ಬರುವ ಗೇರು ಬೀಜಗಳಿಗೆ ರೇಟ್ ಕಡಿಮೆ. ಫ್ಯಾಕ್ಟರಿಯನ್ನು ಸಾಗಿಸಲು ತುಂಬಾ ಕಷ್ಟವಾಗುತ್ತಿದೆ” ಎಂದು ಹೇಳಿದರು..
“ಒಂದು ಕಡೆ ಬ್ಯಾಂಕ್‌ಗಳಿಗೆ ಸಮಯಕ್ಕೆ ಸರಿಯಾಗಿ ಓಡಿ ಪಾವತಿ ಮಾಡಬೇಕಾದ ಒತ್ತಡ. ಮತ್ತೊಂದು ಕಡೆ ಮಾರುಕಟ್ಟೆ ಕುಸಿತ. ಈ ಎರಡರ ನಡುವೆ ಸಂಸ್ಥೆಯನ್ನು ಮುನ್ನಡೆಸೋದು ತುಂಬಾ ಕಷ್ಟಕರವಾಗಿದೆ. ಇಂದಿನ ದಿನಗಳಲ್ಲಿ ಗೇರು ಕೃಷಿ ಮಾಡುವವರು ಕಡಮೆಯಾಗಿದ್ದಾರೆ. ಅವರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ಸಿಗುವುದೇ ಇಲ್ಲ. ಸರ್ಕಾರ ಸೂಕ್ತ ಬೆಂಬಲ ನೀಡಿದರೆ ಕೃಷಿಕರೂ ಮುನ್ನಡೆಸಬಹುದು, ಉದ್ದಿಮೆದಾರರೂ ಉಳಿಯಬಹುದು ಮತ್ತು ತೆರಿಗೆಗಳಲ್ಲಿ ರಿಯಾಯಿತಿ ನೀಡಿದರೆ ನಮ್ಮಂತಹ ಸಣ್ಣ ಉದ್ದಿಮೆದಾರರು ಬದುಕಿ ಉಳಿಯಬಹುದು. ಇಲ್ಲದಿದ್ದರೆ ಮುಂದಿನ ದಿನಗಳು ತುಂಬಾ ಕಷ್ಟ” ಎಂದು ಹೇಳಿದರು.

ಕೃಷಿಕ ಕೋಟ ನಾಗೇಂದ್ರ ಪುತ್ರನ್ ಮಾತನಾಡಿ, “ಹಿಂದೆ ಸರ್ಕಾರದಿಂದ ಸಿಗುತ್ತಿದ್ದ ಸಬ್ಸಿಡಿಗಳನ್ನು ಉಪಯೋಗಿಸಿಕೊಳ್ಳಲು ಕರಾವಳಿಯಲ್ಲಿ ಎಕರಗಟ್ಟಲೆ ಗೇರು ಕೃಷಿ ಮಾಡುತ್ತಿದ್ದರು. ಆದರೆ ಈಗ ಗೇರು ಬೆಳೆಯ ಬದಲು ಮ್ಯಾಜಿಯಂ ಮತ್ತು ಅಕೇಶಿಯಾ ಗಿಡಗಳನ್ನು ವ್ಯಾಪಕವಾಗಿ ನೆಡಲಾಗುತ್ತಿದೆ. ಮ್ಯಾಜಿಯಂ ಮತ್ತು ಅಕೇಶಿಯಾ ಗಿಡಗಳು ಕೇವಲ 5 ವರ್ಷಗಳಲ್ಲಿ ಕಟಾವಿಗೆ ರೆಡಿಯಾಗುತ್ತವೆ ಮತ್ತು ನಂತರ ದಾಂಡೇಲಿ ಪ್ರದೇಶದ ಪೇಪರ್ ಫ್ಯಾಕ್ಟರಿಗಳಿಗೆ ಸಾಗಿಸುತ್ತಾರೆ. ಕೃಷಿಕರಿಗೆ ತಕ್ಷಣದ ಆದಾಯ ಸಿಗುವುದರಿಂದ ಈ ಪರ್ಯಾಯ ಬೆಳೆ ಹೆಚ್ಚು ಜನಪ್ರಿಯವಾಗುತ್ತಿದೆ. ನಾವು ಚಿಕ್ಕವರಿದ್ದಾಗ ಕರಾವಳಿ ಪ್ರದೇಶ ಎಲ್ಲೆಡೆ ಗೇರು ಮರಗಳು ಕಾಣಿಸುತ್ತಿದ್ದವು. ಈಗ ಗೇರು ಕೃಷಿ ಕಡಿಮೆಯಾಗುತ್ತಿದೆ. ಇಲ್ಲಿ ಗೇರು ಬೀಜಗಳನ್ನು ಇತರೆ ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರತಿಕ್ರಿಯಿಸಿ, “ಕರಾವಳಿ ಜಿಲ್ಲೆಗಳಲ್ಲಿ ಗೇರು ಕೃಷಿಯ ಉತ್ಪಾದನೆ ಕಳೆದ ಕೆಲವು ವರ್ಷಗಳಿಂದ ಸ್ಪಷ್ಟವಾಗಿ ಕುಸಿತಗೊಂಡಿದೆ. ಈಗ ನಮ್ಮ ಉತ್ಪಾದನೆಯಲ್ಲಿ ಕೇವಲ 20% ಮಾತ್ರ ಸಿಗುತ್ತಿದೆ. ಫ್ಯಾಕ್ಟರಿಗೂ ಇಷ್ಟೇ ಪ್ರಮಾಣ ಬರುತ್ತಿದೆ. ಮೊದಲು ಗೇರು ಕೃಷಿಯಿಂದ ಉತ್ತಮ ಲಾಭ ಸಿಗುತ್ತಿತ್ತು, ಆದರೆ ಈಗ ಉತ್ಪಾದನೆ ಗಮನಾರ್ಹವಾಗಿ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಸಮಯ, ಗಾಳಿ ಇವೆಲ್ಲ ಬದಲಾಗುತ್ತಿದೆ. ನವೆಂಬರ್‌ನಲ್ಲಿ ಹೂ ಬಿಡುವ ಸಮಯ. ಆದರೆ ಮಳೆ ಹೆಚ್ಚಾದಾಗ ಹೂವೇ ಬಿದ್ದುಹೋಗುತ್ತವೆ” ಎಂದು ಹೇಳಿದರು.

“ಉಡುಪಿ, ಕುಂದಾಪುರ ಸೇರಿದಂತೆ ಉಡುಪಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಗೇರು ಬೆಳೆ ಬೆಳೆದರೂ, ಕಾರವಾರದಿಂದ ಪುತ್ತೂರು–ಸುಳ್ಯವರೆಗೂ ಕೃಷಿಕರು ಇದ್ದಾರೆ. ಆದರೆ ಹೆಚ್ಚಿನ ಕೃಷಿಕರು ಈಗ ಅಡಿಕೆ ಬೆಳೆಯತ್ತ ತಿರುಗಿದ್ದು, ಕೆಲವರು ಗುಡ್ಡೆ ಪ್ರದೇಶಗಳನ್ನು ಖಾಲಿ ಬಿಟ್ಟುಬಿಡುತ್ತಿದ್ದಾರೆ. ಗೇರು ಬೆಳೆ ಬೆಳೆಸಲು ಯಾವುದೇ ಸಬ್ಸಿಡಿ ಇಲ್ಲ. ಆದರೂ ನಾವು ಕೃಷಿಕರಿಗೆ ಉತ್ತೇಜನ ಕೊಡುತ್ತಿದ್ದೇವೆ. ಉಳ್ಳಾಲ–ಪುತ್ತೂರು ಪ್ರದೇಶಗಳಲ್ಲಿ ತೋಟಗಾರಿಕೆ ಇಲಾಖೆ ಒಂದಕ್ಕೆ ₹50ರಂತೆ ಗೇರು ಗಿಡಗಳನ್ನು ವಿತರಿಸುತ್ತದೆ. ಖಾಸಗಿ ನರ್ಸರಿಗಳಲ್ಲೂ ಗಿಡಗಳು ಲಭ್ಯವಿದೆ. ಸುಮಾರು 18 ತಳಿಗಳ ಗೇರು ಲಭ್ಯವಿದ್ದು, ವಿಶೇಷವಾಗಿ ಉಳ್ಳಾಲ ತಳಿಗಳು ಉತ್ತಮ ಫಲ ನೀಡುತ್ತವೆ. ಕೆಲವು ತಳಿಗಳು ಮೂರು ವರ್ಷಕ್ಕೊಮ್ಮೆ ಫಲಕೊಡುವ ಗುಣ ಹೊಂದಿವೆ. ಅಡಿಕೆ ತೋಟ ನೋಡಿದಂತೆ ಗೇರು ತೋಟವನ್ನೂ ನೋಡಿಕೊಳ್ಳಬೇಕು. ಅಷ್ಟೇನು ಖರ್ಚು ಇಲ್ಲ, ಗೊಬ್ಬರ ಬೇಡ. ಗಿಡ ಬರುವವರೆಗೆ ಚೆನ್ನಾಗಿ ನೋಡಿಕೊಂಡರೆ ಸಾಕು. ಇದು ಎವರ್ ಗ್ರೀನ್ ಬೆಳೆ. ಇತರ ಬೆಳೆಗಳ ಜೊತೆ ಬೆಳೆಸಬಹುದು” ಎಂದು ಹೇಳಿದರು.
ಉಡುಪಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಮಾತನಾಡಿ, “ಕರಾವಳಿ ಜಿಲ್ಲೆಗಳಲ್ಲಿ ಗೇರು ಕೃಷಿ ವ್ಯಾಪಕವಾಗಿ ಹರಡಿಕೊಂಡಿದ್ದರೂ, ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 15,148 ಹೆಕ್ಟೆರ್ (ಸುಮಾರು 3,870 ಎಕರೆ) ಪ್ರದೇಶದಲ್ಲಿ ಗೇರು ಬೆಳೆದಿದ್ದು, ಈ ಪೈಕಿ ಸುಮಾರು 8,000 ಹೆಕ್ಟೆರ್ ಪ್ರದೇಶ ಅರಣ್ಯ ಇಲಾಖೆ ಆಧೀನದಲ್ಲಿದೆ. ಈ ಭೂಮಿಯಲ್ಲಿ ಕರ್ನಾಟಕ ಕ್ಯಾಶ್ಯೂ ಡೆವಲಪ್‌ಮೆಂಟ್ ಕಾರ್ಪೋರೇಷನ್ (KCDC) ಗೇರು ಬೆಳೆ ಉಪಯೋಗಿಸುತ್ತಿದೆ. ಉಳಿದ 50% ಪ್ರದೇಶದಲ್ಲಿ ವೈಯಕ್ತಿಕ ರೈತರು ಗೇರು ಬೆಳೆಸುತ್ತಿದ್ದಾರೆ. ರೈತರಿಂದ ಗೇರು ಬೆಳೆ ವ್ಯಾಪಾರಿಕ ದೃಷ್ಟಿಯಿಂದ ಬೆಳೆಸುವ ಪ್ರವೃತ್ತಿ ಕಡಿಮೆ. ಬಹುತೇಕ ರೈತರಿಗೆ ಗೇರು ಪ್ರಾಥಮಿಕ ಬೆಳೆ ಅಲ್ಲ. ಸಣ್ಣ ಪ್ರಮಾಣದ ಜಾಗಗಳಲ್ಲಿ, ಮುಖ್ಯವಾಗಿ ನೀರಿನ ಕೊರತೆಯಿರುವ ಅಥವಾ ಅಡಿಕೆ ಬೆಳೆ ಯೋಗ್ಯವಾಗದ ಪ್ರದೇಶಗಳಲ್ಲಿ ಗೇರು ಗಿಡಗಳನ್ನು ಪರ್ಯಾಯ ಬೆಳೆ ರೀತಿಯಲ್ಲಿ ನೆಡಲಾಗುತ್ತದೆ. ಆದರೆ ಗಿಡ ನೆಟ್ಟ ನಂತರ ಅದರ ನಿರ್ವಹಣೆಗೆ ನೀರು, ಗೊಬ್ಬರ, ಕೀಟನಾಶಕ ಸ್ಪ್ರೇ ಮುಂತಾದ ಅಗತ್ಯ ಸೇವೆಗಳು ದೊರೆಯದಿರುವುದು ಸಾಮಾನ್ಯ. ಗೇರು ಬೆಳೆಯಲ್ಲಿ ಚಿಗುರು ಬರುವ ಸಮಯದಲ್ಲಿ ಕಡ್ಡಾಯವಾಗಿ ಸ್ಪ್ರೇ ಮಾಡಬೇಕಾದರೂ, ಇದು ಹೆಚ್ಚಿನ ರೈತರಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಪರಿಣಾಮವಾಗಿ ಗಿಡಗಳಿಂದ ಬರುವ ಇಳುವರಿ ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣ ಮಾತ್ರ ಲಭ್ಯವಾಗುತ್ತಿದೆ. ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪ್ರತಿ ಹೆಕ್ಟರ್‌ಗೆ 1.69 ಮೆಟ್ರಿಕ್ ಟನ್ ಇಳುವರಿ ಎಂದು ಉಲ್ಲೇಖಿಸಲಾಗಿದೆ. ಒಂದೊಂದು ಗಿಡಕ್ಕೆ ಸರಾಸರಿ 4–5 ಕಿಲೋ ಇಳುವರಿ ದಾಖಲಾದರೂ, ಯೋಗ್ಯ ನಿರ್ವಹಣೆ ಮಾಡಿದಲ್ಲಿ ಪ್ರತಿ ಗಿಡದಿಂದ 10–15 ಕಿಲೋವರೆಗೆ ಬೀಜ ದೊರೆಯುವ ಸಾಧ್ಯತೆ ಇದೆ” ಎಂದು ಹೇಳಿದರು.

“ರೈತರಿಗೆ ಗೇರು ಬೆಳೆಗಾಗಿ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಮೂಲಕ ಒಟ್ಟು ₹30,000 ಸಬ್ಸಿಡಿ ಲಭ್ಯವಿದೆ. ಒಂದು ಹೆಕ್ಟರ್ ಪ್ರದೇಶದಲ್ಲಿ ನಾಟಿ ಮಾಡಿದಲ್ಲಿ, ಮೊದಲನೇ ವರ್ಷ ₹18,000, ಎರಡನೇ ಮತ್ತು ಮೂರನೇ ವರ್ಷಕ್ಕೆ ತಲಾ ₹6,000 ರಷ್ಟು ಸಹಾಯಧನ ನೀಡಲಾಗುತ್ತದೆ. ನಾಲ್ಕನೇ ವರ್ಷದಿಂದ ಗಿಡಗಳು ವಾಣಿಜ್ಯ ಇಳುವರಿ ನೀಡಲು ಪ್ರಾರಂಭಿಸುತ್ತವೆ. ಡ್ರಿಪ್ ಇರಿಗೇಷನ್ ಅಳವಡಿಸಿದ ರೈತರಿಗೆ 90% ಸಬ್ಸಿಡಿ ಇದೆ. ಇದು ಭಾರತ ಸರ್ಕಾರ ನಿಗದಿಪಡಿಸಿರುವ ಯೂನಿಟ್ ವ್ಯಾಲ್ಯೂ ಆಧಾರಿತವಾಗಿದ್ದು, ಗೇರು ಬೆಳೆ ಸ್ಪೇಸಿಂಗ್ ಹಾಗೂ ಯೂನಿಟ್ ಕಾಸ್ಟ್ ಆಧಾರದಲ್ಲಿ ವ್ಯತ್ಯಾಸವಾಗುತ್ತದೆ” ಎಂದು ಹೇಳಿದರು.

ಗೇರು ಬೆಳೆಯ ವ್ಯಾಪ್ತಿ ದೊಡ್ಡದಿದ್ದರೂ, ರೈತರಲ್ಲಿ ಬೆಳೆ ನಿರ್ವಹಣೆಯ ಮೇಲಿನ ಆಸಕ್ತಿ ಮತ್ತು ಶಿಸ್ತಿನ ಕೊರತೆ ಕಂಡುಬರುತ್ತಿದೆ. ಲಭ್ಯವಿರುವ ಸಬ್ಸಿಡಿ ಸೌಲಭ್ಯಗಳು ಮತ್ತು ಗೇರು ಮರಗಳ ಹೆಚ್ಚಿನ ಇಳುವರಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳದಿರುವುದು ಉತ್ಪಾದನಾ ಕುಸಿತಕ್ಕೆ ಕಾರಣವಾಗಿದೆ. ಸರಿಯಾದ ನಿರ್ವಹಣೆ, ನೀರಾವರಿ ಮತ್ತು ಪೋಷಕಾಂಶಗಳ ಸಮರ್ಪಕ ಬಳಕೆಯ ಮೂಲಕ ಗೇರು ಕೃಷಿಯನ್ನು ಕರಾವಳಿ ರೈತರಿಗೆ ಲಾಭದಾಯಕ ಬೆಳೆಯನ್ನಾಗಿ ಪರಿವರ್ತಿಸಬಹುದಾಗಿದೆ.
ಕರಾವಳಿಯ ಗೇರು ಕೃಷಿ ತನ್ನ ಪರಂಪರೆಯಷ್ಟೇ ಆರ್ಥಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಸವಾಲುಗಳು ಹೆಚ್ಚಾದರೂ, ವಿಜ್ಞಾನಾಧಾರಿತ ನಿರ್ವಹಣೆ, ಮಾರುಕಟ್ಟೆ ಬೆಂಬಲ, ಮತ್ತು ತಂತ್ರಜ್ಞಾನಗಳ ಬಳಕೆಯಿಂದ ಗೇರು ಕೃಷಿ ಮುಂದಿನ ದಿನಗಳಲ್ಲಿ ಮತ್ತೆ ಸಶಕ್ತವಾಗುವ ಸಾಧ್ಯತೆ ಇದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




