ಅಪಘಾತ ಎಸಗಿ, ಪರಿಹಾರ ಕೊಡದೆ ನಿರ್ಲಕ್ಷ್ಯ ಧೋರಣೆ ತೋರಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಅನ್ನು ನ್ಯಾಯಾಲಯವು ವಶಕ್ಕೆ ಪಡೆದಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ವಕೀಲರ ತಂಡವು ಚನ್ನರಾಯಪಟ್ಟಣದಲ್ಲಿ ವಶಕ್ಕೆ ಪಡೆದುಕೊಂಡಿದೆ.
2023ರಲ್ಲಿ ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒಂದು ಅಪಘಾತಕ್ಕೆ ತುತ್ತಾಗಿತ್ತು. ಇದರಲ್ಲಿ ಹಾಸನ ಮೂಲದ ರೇಣುಕಪ್ಪ ಮತ್ತು ರವಿ ಕಿರಣ್ ಎಂಬವರು ಮೃತಪಟ್ಟಿದ್ದರು. ಆದರೆ, ಅವರ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಪರಿಹಾರ ನೀಡಿರಲಿಲ್ಲ. ಮೃತರ ಕುಟುಂಬಗಳು ಪರಿಹಾರಕ್ಕಾಗಿ ಚನ್ನರಾಯಪಟ್ಟಣ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರು ಮೃತರ ಕುಟುಂಬಗಳಿಗೆ ಒಟ್ಟು 32.5 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೆಎಸ್‌ಆರ್‌ಟಿಸಿಗೆ ಆದೇಶಿಸಿತ್ತು.
ಆದರೆ, ಕೆಎಸ್‌ಆರ್‌ಟಿಸಿ ಪರಿಹಾರ ಪಾವತಿ ಮಾಡಿರಲಿಲ್ಲ. ಹೀಗಾಗಿ, ಮೃತರ ಕುಟುಂಬಗಳು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದವರು. ಮೃತರ ಕುಟಂಬಗಳಲ್ಲಿ ಒಬ್ಬರಾದ ನಾಗರತ್ಮಮ್ಮ ಎಂಬವರು 2025ರ ಡಿಸೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಚನ್ನರಾಯಪಟ್ಟಣ ನ್ಯಾಯಾಲಯವು, ಅಪಘಾತಕ್ಕೀಡಾಗಿದ್ದ ಬಸ್‌ಅನ್ನು ಜಪ್ತಿ ಮಾಡಲು ಆದೇಶಿಸಿತ್ತು.
ನ್ಯಾಯಾಲಯದ ಆದೇಶದಂತೆ ಮೂವರು ವಕೀಲರ ತಂಡವು, ಶೃಂಗೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಅನ್ನು ಚನ್ನರಾಯಪಟ್ಟಣ ಬಳಿ ತಡೆದು, ಪ್ರಯಾಳಿಕರನ್ನು ಕೆಳಗಿಳಿಸಿ, ಬಸ್‌ಅನ್ನು ಜಪ್ತಿ ಮಾಡಿದ್ದಾರೆ.
ಆದರೆ, ನಡುರಸ್ತೆಯಲ್ಲೇ ತಮ್ಮನ್ನು ಇಳಿಸಿದ್ದಕ್ಕಾಗಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ, ಇದೇ ರೀತಿ ಪರಿಹಾರ ವಿಳಂಬದ ಕಾರಣಕ್ಕಾಗಿ ಶಿವಮೊಗ್ಗದ ಸಾಗರದಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್‌ಅನ್ನು ಜಪ್ತಿ ಮಾಡಲಾಗಿತ್ತು.





