ರಾಷ್ಟ್ರಗಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೊರಡಿಸಿರುವ ಇತ್ತೀಚಿನ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.
ಸಂವಿಧಾನದ ವಿಧಿ 51A(ಅ) ಪ್ರಕಾರ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ. ಸಂವಿಧಾನ ಸಭೆಯಲ್ಲಿ ನಡೆದ ಸಮಗ್ರ ಚರ್ಚೆಯ ನಂತರ ರಾಷ್ಟ್ರಗಾನದ ವಿಷಯವಾಗಿ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್ ಅವರು ನೀಡಿದ ಹೇಳಿಕೆಯನ್ನು ಅಂಗೀಕರಿಸಲಾಗಿತ್ತು. ಅದರಂತೆ ರಾಷ್ಟ್ರಗಾನದ ಕೇವಲ ಎರಡು ಚರಣಗಳನ್ನು ಮಾತ್ರ ಅಧಿಕೃತವಾಗಿ ಹಾಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ಆದರೆ, ಇತ್ತೀಚಿನ ಆದೇಶದ ಮೂಲಕ ಕೇಂದ್ರ ಸರ್ಕಾರವು ಉಳಿದ ನಾಲ್ಕು ಚರಣಗಳನ್ನು ಸೇರಿಸಲು ಯತ್ನಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಸಂವಿಧಾನ ಸಭೆಯು ಆ ನಾಲ್ಕು ಚರಣಗಳು ಭಾರತೀಯ ಗಣರಾಜ್ಯದ ಧರ್ಮನಿರಪೇಕ್ಷ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿತ್ತು ಎಂಬುದನ್ನೂ ಹೇಳಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುರುದ್ದೇಶದಿಂದ ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆಯ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸಲು ಮುಂದಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ. ಇಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಚಿಹ್ನೆಗಳೊಂದಿಗೆ ರಾಜಕೀಯ ಆಟವಾಡಬಾರದು ಎಂದು ಹೇಳಿರುವ ಪಕ್ಷವು, ಸಂವಿಧಾನದ ಭಾವವನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಈ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. ಈ ಕುರಿತು ಪಕ್ಷ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





