ʼಅಂಗೈ ಹುಣ್ಣಿಗೆ ಕನ್ನಡಿ ಅವಶ್ಯಕತೆ ಇಲ್ಲʼ. ಹಾಗಾಗಿ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕದಲ್ಲಿ ಉಂಟಾದ ಪ್ರವಾಹ ವನ್ನು ಕಣ್ಣಾರೆ ವೀಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ, ಸಮೀಕ್ಷೆ ಎಂದೆಲ್ಲ ಕಾಲಹರಣ ಮಾಡದೆ ಸಂಪೂರ್ಣವಾಗಿ ಹಸಿ ಬರಗಾಲವೆಂದು ಘೋಷಣೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಆರ್ಥಿಕ ನೆರವು ನೀಡಬೇಕು.
ಮಹಾರಾಷ್ಟ್ರದಿಂದ ಹರಿದು ಬಂದ ಭೀಮಾ ನದಿ ನೀರು ಮತ್ತು ಭಾರೀ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಉಂಟಾದ ಪ್ರವಾಹ ಈಗ ತಗ್ಗತೊಡಗಿದೆ. ನೀರಿನ ಮಟ್ಟ ಕಡಿಮೆಯಾಗಿದ್ದರೂ, 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ನಾಶವಾಗಿದೆ. 117 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, ಸಾವಿರಾರು ಕುಟುಂಬಗಳಿಗೆ ಸೂರಿಲ್ಲದಾಗಿದೆ. ಸರ್ಕಾರದಿಂದ ಪರಿಹಾರ ಕ್ರಮಗಳು ಆರಂಭವಾಗಿದ್ದರೂ ಕೂಡ ಅವು ತಾತ್ಕಾಲಿಕವಾಗಿದ್ದು, ಸಮರ್ಪಕವಾಗಿಲ್ಲ ಎಂಬ ದೂರು ಕೇಳಿಬರತೊಡಗಿದೆ.
ಮಹಾರಾಷ್ಟ್ರದ ಅಣೆಕಟ್ಟುಗಳ ನೀರು ಬಿಡುಗಡೆಯಿಂದಾಗಿ ಮುಖ್ಯವಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳು ಕೃಷಿ ಭೂಮಿ, ಮನೆಗಳು, ರಸ್ತೆಗಳು ಹಾನಿಗೊಳಗಾಗಿವೆ.
ಜೋಳ, ಕಪ್ಪು ಎಳ್ಳು, ಸಜ್ಜೆ, ತೊಗರಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಶೇ.95ರಷ್ಟು ಬೆಳೆಗಳು ನಾಶವಾಗಿವೆ. 80ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಸುಮಾರು 5,000ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ. ಪ್ರವಾಹದ ನೀರಿನ ಮಟ್ಟ ಸಾಮಾನ್ಯ ಹರಿವಿಗೆ ಬಂದಿದ್ದು, ರಕ್ಷಣಾ ಕಾರ್ಯಗಳು(NDRF) ಕಡಿಮೆಯಾಗಿವೆ. ಆದರೆ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ರೋಗಗಳು ಮತ್ತು ಆರ್ಥಿಕ ನಷ್ಟ ಮುಂದುವರೆದಿದೆ.
ಒಂದೂವರೆ ತಿಂಗಳಿನಿಂದ ಸತತವಾಗಿ ಮಳೆ ಸುರಿದಿದ್ದು, ಡೋಣ್ ನದಿಯಿಂದ ಉಕ್ಕಿಹರಿದ ಪ್ರವಾಹಕ್ಕೆ ರೈತರ ಬೆಳೆಗಳು ಮುಳುಗಡೆಯಾಗಿರುವುದು ಜಗಜ್ಜಾಹೀರಾಗಿದೆ. ಆದರೂ ಜಿಲ್ಲಾಡಳಿತ ಮತ್ತೆ ಸಮೀಕ್ಷೆ ಮಾಡುವ ಮಾತನಾಡುತ್ತಿದೆ. ಇದು ರೈತರಲ್ಲಿ ಬೇಸರ ತರಿಸಿದೆ. ರೈತರು ಸುಳ್ಳು ಹೇಳಿ ಸರ್ಕಾರದಿಂದ ಹಣ ಪಡೆದು ತಿನ್ನುವಷ್ಟು ಸಂಕುಚಿತ ಮನಸಿನವರಲ್ಲ. ಒಳ್ಳೆಯ ಇಳುವರಿ ಬಂದು ಸೂಕ್ತ ಬೆಲೆ ಸಿಕ್ಕಿದರೆ ರೈತರು ಯಾರ ಬಳಿಯೂ ಕೈ ಚಾಚಿ ನಿಲ್ಲುವುದಿಲ್ಲ ಎನ್ನುವುದನ್ನು ಅಧಿಕಾರಿಗಳು ಮತ್ತು ಅಧಿಕಾರಸ್ಥರು ಅರ್ಥಮಾಡಿಕೊಳ್ಳಬೇಕಿದೆ.
“ಸರ್ಕಾರ ಸೂಕ್ತ ಪರಿಹಾರ ನೀಡಿದರೆ ರೈತರು ಹಿಂಗಾರಿನ ಬೆಳೆಗಳಾದ ಜೋಳ, ಗೋಧಿ, ಕಡಲೆಯಂತಹ ಬೆಳೆಗಳನ್ನು ಬೆಳೆದು ಜೀವನಕ್ಕೆ ಆಧಾರ ಮಾಡಿಕೊಳ್ಳುತ್ತಾರೆ. ಇದರಿಂದ ಒಂದು ವರ್ಷದ ಗಂಜಿಗಾದರೂ ಅನುಕೂಲವಾಗುತ್ತದೆ. ಪ್ರತಿ ಬೆಳೆಗಳಿಗೂ ಸೂಕ್ತ ಪರಿಹಾರ ಕೊಡಬೇಕು. ಸರ್ಕಾರ ಸಾರಾಸಗಟಾಗಿ ಘೋಷಿಸಿರುವ ಪರಿಹಾರದಿಂದ ಏನೂ ಮಾಡಲು ಸಾಧ್ಯವಿಲ್ಲ. ಒಂದು ದಿನದ ಸಂತೆ ಖರ್ಚಿಗೆ ಆಗುವ ಹಣವನ್ನು ಸರ್ಕಾರ ರೈತರ ಪರಿಹಾರವಾಗಿ ಘೋಷಿಸಿದೆ. ರೈತರ ಹಾಗೂ ಬಡ ಕುಟುಂಬಗಳ ಹಿತ ಕಾಪಾಡುವ ಮುಖ್ಯಮಂತ್ರಿಗಳಿಂದ ಇಂತಹ ಘೋಷಣೆಯನ್ನು ನಿರೀಕ್ಷಿಸಿರಲಿಲ್ಲ. ಪ್ರತಿ ಒಂದು ಎಕರೆ ಒಣ ಬೇಸಾಯದಲ್ಲಿ ತೊಗರಿ ಬೆಳೆಗೆ ₹25,000ದಂತೆ ಪರಿಹಾರ ಘೋಷಣೆ ಮಾಡಬೇಕು. ನೀರಾವರಿ ಬೆಳೆಗಳಿಗೆ 35ರಿಂದ 40 ಸಾವಿರ ಪರಿಹಾರ ನೀಡಬೇಕು. ಯಾಕೆಂದರೆ ಎಲ್ಲದರ ಬೆಲೆ ಇವತ್ತು ದುಬಾರಿಯಾಗಿದೆ. ಬೇಸಾಯ ಅಷ್ಟು ಸುಲಭವಾಗಿಲ್ಲ. ರೈತ ಕೇವಲ ಬಂಡವಾಳ ಹಾಕುತ್ತಿದ್ದಾನೆಯೇ ಹೊರತು ಯಾವುದೇ ರೀತಿಯ ಲಾಭ ಪಡೆಯುತ್ತಿಲ್ಲ. ಈ ಬಾರಿಯಂತೂ ಹೊಲ ಹಸನು ಮಾಡುವುದಕ್ಕೆ ಎಷ್ಟು ಹಣ ಖರ್ಚು ಮಾಡಬೇಕಾಗುತ್ತದೆಯೋ ತಿಳಿಯದಾಗಿದೆ” ಎಂಬುದು ಸಂತ್ರಸ್ತರ ನೋವಿನ ನುಡಿಯಾಗಿದೆ.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿಜಯಪುರ ಜಿಲ್ಲೆ ಮೊದಲಿನಿಂದಲೂ ಬರಗಾಲ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಪ್ರತಿ ವರ್ಷ ರೈತರಿಗೆ ಒಂದಲ್ಲ ಒಂದು ರೀತಿಯ ಸಂಕಷ್ಟ ಎದುರಾಗುತ್ತಲೇ ಇದೆ. ಒಂದೊಂದು ಬಾರಿ ಮಳೆ ಕೈಕೊಟ್ಟು ಬಿತ್ತಿದ ಬೆಳೆಗಳೆಲ್ಲವೂ ಒಣಗಿ ಹೋಗುತ್ತವೆ. ಆದರೆ ಈ ಬಾರಿ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಮಳೆ ಸುರಿದ ಕಾರಣ ಬಿತ್ತನೆ ಮಾಡಿರುವ ಎಲ್ಲ ಬೆಳೆಗಳೂ ಸಂಪೂರ್ಣ ಜಲಾವೃತವಾಗಿವೆ” ಎಂದು ಹೇಳಿದರು.
“ರೈತರು ಇಡೀ ವರ್ಷ ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ಮುಂಗಾರಿನ ಯಾವುದೇ ಬೆಳೆ ಕೈ ಸೇರಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಡೀ ಬೆಳೆ ನೀರಿನಲ್ಲಿ ಕೊಳೆಯಲಾರಂಭಿಸಿವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ರೈತರಿಗೆ ಒಂದೇ ಒಂದು ಕಾಳು ಫಸಲು ಸಿಗುವುದಿಲ್ಲ. ಆಳು-ಕಾಳು, ಔಷಧಿ, ಬೀಜ ಗೊಬ್ಬರ ಅಂತ ಸಾಕಷ್ಟು ಖರ್ಚುಗಳು ಬರುತ್ತವೆ. ಎಲ್ಲದರ ಬೆಲೆಯೂ ಕೂಡ ಗಗನಕ್ಕೇರಿದೆ. ಆದರೆ, ರೈತರು ಬೆಳೆದಂತಹ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಹೀಗಾಗಿ ರೈತರು ಎಷ್ಟೇ ಬೆಳೆದರೂ ಕೂಡ ಸಾಲದಿಂದ ಮುಕ್ತರಾಗುತ್ತಿಲ್ಲ ಹೀಗಿರುವಾಗ ರೈತರು ಬದುಕುವುದಾದರೂ ಹೇಗೆ?” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬೆಳೆ ಸಮೀಕ್ಷೆಯಲ್ಲಿಯೇ ಅಧಿಕಾರಿಗಳು ಕಾಲಹರಣ ಮಾಡದಂತೆ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಯಾಕೆಂದರೆ ʼಅಂಗೈ ಹುಣ್ಣಿಗೆ ಕನ್ನಡಿ ಅವಶ್ಯಕತೆ ಇಲ್ಲʼ. ಹಾಗಾಗಿ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕದಲ್ಲಿ ಉಂಟಾದ ಪ್ರವಾಹ ವನ್ನು ಕಣ್ಣಾರೆ ವೀಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ, ಸಮೀಕ್ಷೆ ಎಂದೆಲ್ಲ ಕಾಲಹರಣ ಮಾಡದೆ ಸಂಪೂರ್ಣವಾಗಿ ಹಸಿ ಬರಗಾಲವೆಂದು ಘೋಷಣೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಆರ್ಥಿಕ ನೆರವು ನೀಡಬೇಕು.
ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು
ಪ್ರವಾಹ ಪೀಡಿತ ಪ್ರದೇಶಗಳಲ್ಲಿ 80ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಪುನರ್ವಸತಿ ಮನೆ/ ಭೂಮಿ ನಷ್ಟಕ್ಕೆ 2,296 ತಾಲೂಕುಗಳಲ್ಲಿ ಪರಿಹಾರ ಸಿದ್ಧತೆ, ರಸ್ತೆ/ವಿದ್ಯುತ್ ಮತ್ತು ಜಂಟಿ ಸರ್ವೇ ನಂತರ ಫಂಡ್ ಬಿಡುಗಡೆ ಸೇರಿದಂತೆ ಇತರ ಏರ್‌ಲಿಫ್ಟ್ ಸರ್ವೆ, ಆರೋಗ್ಯ ತಂಡಗಳು(ರೋಗ ನಿರ್ವಹಣೆ), 7 ಆರೋಗ್ಯ ಕ್ಯಾಂಪ್‌ಗಳು, ಕ್ಲೋರಿನ್ ಡ್ರಾಪ್‌ಗಳಂತಹ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಕಾರ್ಯಗಳನ್ನು ಮುಂದುವರಿಸಿ’ ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಸರ್ಕಾರದ ತ್ವರಿತ ಕ್ರಮಗಳು ರೈತರಿಗೆ ಆಶಾದಾಯಕವಾಗಿದ್ದು, ಕಳೆದ ವರ್ಷಗಳೊಂದಿಗೆ ಹೋಲಿಸಿದರೆ ಈ ಬಾರಿ ಮುಂಜಾಗೃತೆ ಮತ್ತು ರೆಸ್ಕ್ಯೂ ತಂಡಗಳ ಸಿದ್ಧತೆ ಉತ್ತಮವಾಗಿದ್ದವು. ಆದರೆ ಸರ್ಕಾರ ₹1,200 ಕೋಟಿ ತುರ್ತು ಸಹಾಯ ನೀಡಿದರೂ, ₹3,000 ಕೋಟಿ ನಷ್ಟಕ್ಕೆ ಇದು ಅಪರ್ಯಾಪ್ತವಾಗಿದೆ. ವಿಳಂಬ, ಸಮೀಕ್ಷೆಯ ಕೊರತೆ ಮತ್ತು ದೀರ್ಘಕಾಲೀನ ಕ್ರಮಗಳ ಕೊರತೆಯಿಂದ ರೈತರ ಕಷ್ಟ ಪರಿಹಾರವಾಗಿಲ್ಲ.
ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದಂತೆ ನೀಡುವ ಪರಿಹಾರದ ಜತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8,500 ರೂಪಾಯಿ ವಿಶೇಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.
“NDRF ಮಾನದಂಡಗಳ ಪ್ರಕಾರ, ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಬೆಳೆಗಳಿಗೆ ₹8,500, ನೀರಾವರಿ ಬೆಳೆಗಳಿಗೆ ₹17,000 ಮತ್ತು ದೀರ್ಘಕಾಲಿಕ ಬೆಳೆಗಳಿಗೆ ₹22,500ದಷ್ಟು ಬೆಳೆಹಾನಿ ಪರಿಹಾರವನ್ನು ಕೇಂದ್ರದಿಂದ ನೀಡಲಾಗುತ್ತದೆ. ಇದರ ಜತೆಗೆ ರಾಜ್ಯ ಸರ್ಕಾರವು ಮಂಡಳಿಯಾದ್ಯಂತ ಹೆಚ್ಚುವರಿಯಾಗಿ ₹8,500 ಪರಿಹಾರ ಸೇರಿಸುತ್ತದೆ. ಇದರಿಂದ ಮಳೆಯಾಶ್ರಿತ ಬಾಳೆಗಳಿಗೆ ₹17,000, ನೀರಾವರಿ ಬೆಳೆಗಳಿಗೆ ₹25,500 ಮತ್ತು ದೀರ್ಘಕಾಲಿಕ ಬೆಳೆಗಳಿಗೆ ₹31,000 ಪರಿಹಾರ ದೊರೆಯುತ್ತದೆ” ಎಂದು ಸಿದ್ದರಾಮಯ್ಯ ಹೇಳಿದ್ದರು.
ಕರ್ನಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ 30 ದಿನಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಜೂನ್‌ನಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದ ಸುಮಾರು 5.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟ ಸಂಭವಿಸಿದೆ. ಈ ನಷ್ಟವನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದ್ದು, ಪರಿಹಾರದ ಹಣ ಸಿದ್ಧವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಮತ್ತೊಂದು ಸುತ್ತಿನ ಪ್ರವಾಹ ಬಂದು, ಸುಮಾರು 7.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿ ಬೆಳೆನಷ್ಟ ಸಂಭವಿಸಿದೆ. ಈ ಹಾನಿ ಮುಖ್ಯವಾಗಿ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಂಡುಬಂದಿದೆ. ಈ ಜಿಲ್ಲೆಗಳು ತಮ್ಮ ನಷ್ಟದ ಪ್ರಮಾಣವನ್ನು ಮರು ಸಮೀಕ್ಷೆ ಮಾಡಿ, ಪರಿಷ್ಕರಿಸುತ್ತಿದ್ದು, ಈಗಾಗಲೇ ಈ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಯುತ್ತಿದೆ. ಈ ಬೆಳೆಗಳಿಗೆ ಸುಮಾರು 10 ದಿನಗಳಲ್ಲಿ ಬೆಳೆಹಾನಿ ಪರಿಹಾರದ ಹಣ ವಿತರಣೆ ಆರಂಭವಾಗಲಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು l ರಾಜ್ಯ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 7 ಕೋಟಿ 12ಲಕ್ಷ ಬಿಡುಗಡೆ
ಕಂದಾಯ ಸಚಿವರು ಈಗಾಗಲೇ ಒಂದು ಹಂತದ ಪರಿಹಾರ ವಿತರಣೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಸಂತ್ರಸ್ತ ರೈತ ಹಾಗೂ ಕೆಪಿಆರ್‌ಎಸ್ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿಯವನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಸರ್ಕಾರ ಹಂತ ಹಂತವಾಗಿ ಸಮೀಕ್ಷೆ ಮಾಡಿ ಪರಿಹಾರ ನೀಡಲು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಏನೂ ಉಳಿದಿಲ್ಲ. ಭೀಮಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ಸಂಪೂರ್ಣ ತೊಗರಿ ಬೆಳೆ ನಾಶವಾಗಿದ್ದು, ಮನೆಗಳು, ಅಂಗನವಾಡಿ, ಶಾಲೆ ಕಾಲೇಜುಗಳೆಲ್ಲವೂ ಮುಳುಗಡೆಯಾಗಿವೆ. ಹೀಗಿರುವಾಗ ಸರ್ಕಾರ ಸಮೀಕ್ಷೆ ನಡೆಸಲು ಏನು ಉಳಿದಿದೆ. ವೈಮಾನಿಕೆ ವೀಕ್ಷಣೆ ಮೂಲಕ ಅವರೇ ಎಲ್ಲವನ್ನೂ ನೋಡಿದ್ದಾರೆ. ಮತ್ತೆ ಸಮೀಕ್ಷೆ ಮಾಡಬೇಕೆಂದು ಹೇಳುವುದರಲ್ಲಿ ಏನಾದರೂ ತಿರುಳು ಇದೆಯೇ? ʼಕುಣಿಲಾರದವರು ನೆಲ ಡೊಂಕು ಅಂದ್ರುʼ ಅನ್ನೋ ಹಾಗೆ ರೈತರಿಗೆ ಕೊಡುವ ಇಚ್ಛಾಶಕ್ತಿ ಇಲ್ರೀ….. ಈ ಸರ್ಕಾರಕ್ಕೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಜನಪರ ನಾಯಕರೇ ಆಗಿದ್ದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು. ರೈತರು ಸಂಕಷ್ಟದಲ್ಲಿರುವಾಗ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರವನ್ನು ಘೋಷಣೆ ಮಾಡಬೇಕು” ಎಂದು ಸವಾಲು ಹಾಕಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್‌ಡಿಬಿ ಎನ್ನುವ ಒಂದು ಮಂಡಳಿಯನ್ನು ಮಾಡಿದ್ದಾರೆ. ಆ ಮಂಡಳಿಗೆ 5 ಸಾವಿರ ಕೋಟಿ ರೂಪಾಯಿ ಕೊಡ್ತಿವಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಆ ಹಣ ಯಾರಿಗೆ ತಲುಪುತ್ತಿದೆ? ನಾಯಿ ನಾಲಗೆಯಂಗೆ ರಸ್ತೆ ಮಾಡಿ ಎದ್ದು ಹೋಗೋ ಎಂಜಿನಿಯರ್‌ಗಳು, ಮಂತ್ರಿ ಮಹನೀಯರುಗಳ ಮನಡೆ ತುಂಬುವಂತಹ ಕೆಲಸ ಮಾಡ್ತರೆ. ಇದಕ್ಕೆ ಕೆಕೆಆರ್‌ಡಿಬಿ ಹಣ ಬಳಕೆ ಆಗ್ತದೆ. ಇದನ್ನು ಅವರಿಗಾಗಿಯೇ ಮೀಸಲಿಟ್ಟಿರುವಂತಹ ಹಣ. ಆದ್ರೆ ಅದೇ ಹಣದಲ್ಲಿ 3 ಸಾವಿರ ಕೋಟಿ ಹಣ ತೆಗೆದು ಅದನ್ನು ರೈತರಿಗೆ ಕೊಡಿ, ಯಾಕೆ ಕೊಡೋದಿಲ್ಲ? ಅಥವಾ ಆ ಹಣದಲ್ಲಿ ರೈತರಿಗೆ ಉಚಿತವಾಗಿ ಬೀಜ ಗೊಬ್ಬರ ಕೊಡಿಸಲಿ, ಹಿಂಗಾರು ಬೆಳೆಗಳನ್ನಾದರೂ ಬಿತ್ತನೆ ಮಾಡಿಕೊಳ್ತೇವೆ. ಆದ್ರೆ ಸರ್ಕಾರಕ್ಕೆ ರೈತರಿಗೆ ಅನುಕೂಲ ಮಾಡಿಕೊಡುವ ಮನಸೇ ಇಲ್ಲ” ಎಂದು ಆರೋಪಿಸಿದರು.
“ರೈತರ ಬಗ್ಗೆ ಅವರಿಗೆ ಕಾಳಜಿ ಇರುವುದಾದರೆ, ಅವರ ಖಾತೆಗೆ ಮೊದಲು ಪರಿಹಾರದ ಹಣವನ್ನು ಹಾಕಲಿ. ಈ ಮೂಲಕ ರೈತರ ಮೇಲಿರುವ ಇಚ್ಛಾಶಕ್ತಿಯನ್ನು ತೋರಿಸಲಿ. ಅದುಬಿಟ್ಟು, ʼಒಬ್ಬರ ಮೇಲೆ ಒಬ್ಬರ ಹಾಕಿ, ಒಬ್ಬರು ಬಂಡಿ ಹೊಡಿ ಅಂದʼ ಅನ್ನಂಗೆ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಾಗ ಕೂಸು ನಗ್ಗಿಹೋಗಿತ್ತು ಅನ್ನಂಗೆ, ಈ ಸರ್ಕಾರಗಳ ಕೆಸರೆರಚಾಟಕ್ಕೆ ರೈತರು ಬಲಿಯಾಗುವಂತಾಗಿದೆ” ಎಂದರು.
ʼಈಗಾಗಲೇ ಒಂದು ಹಂತದ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದೆʼ ಎನ್ನುವ ಕಂದಾಯ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿ, “ಯಾರಿಗೂ ನಯಾ ಪೈಸೆ ಸಿಕ್ಕಿಲ್ರೀ….. ಹಳೆಯ ಬೆಳೆವಿಮೆ ಹಣವನ್ನು ಮೊನ್ನೆ ಹಾಕಿದ್ದಾರೆ. ಅದನ್ನೇ ಈಗ ಪರಿಹಾರ ಹಾಕಿದ್ದೇವೆ ಎನ್ನುತ್ತಿದ್ದಾರೆ. ಈಗ ಮುಳುಗಡೆ ಸಂತ್ರಸ್ತರಿಗೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಾಗೂ ಈ ಪ್ರದೇಶಕ್ಕೆ ಹಸಿ ಬರಗಾಲ ಘೋಷಣೆ ಮಾಡುವುದಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಇದಕ್ಕೆ ಒಪ್ಪಲು ತಯಾರಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆಗೆ ಹೋಗುವಂತಹ ಮಕ್ಕಳು ಬಡವರು ಮತ್ತು ರೈತರ ಮಕ್ಕಳೇ ಆಗಿರುವ ಕಾರಣ ಎರಡನೇ ಹಂತದ ಶುಲ್ಕವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಆದ ಕಾರಣ ಖಾಸಗಿ ಶಾಲಾ ಶುಲ್ಕವನ್ನು ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
ಸರ್ಕಾರ ಪರಿಹಾರ ಘೋಷಣೆ ಮಾಡಿ, ತ್ವರಿತ ಪರಿಹಾರ ಕ್ರಮ ಕೈಗೊಂಡಿರುವುದನ್ನೇ ಹೇಳುತ್ತ ಸಂತೃಪ್ತಿ ಪಟ್ಟುಕೊಳ್ಳದೆ, ನೀಡಿರುವ ಭರವಸೆ ಹುಸಿಯಾಗದಂತೆ ಮತ್ತು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಮನೆ ಕಳೆದುಕೊಂಡವರಿಗೆ ಕೂಡಲೇ ಮನೆ ನಿರ್ಮಾಣ ಮಾಡಿಕೊಡಬೇಕು. ಜಲಾವೃತವಾಗಿರುವ ಅಂಗನವಾಡಿ ಮತ್ತು ಶಾಲೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಕೆಲಸವಾಗಬೇಕು. ಮುಳುಗಡೆಯ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದೇ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜಿಸಬೇಕು.
ಸರ್ಕಾರದಿಂದ ಪರಿಹಾರ ಘೋಷಣೆಯಾದರೂ ಕೂಡ ರೈತರು ಕಳೆದುಕೊಂಡಿರುವ ಬೆಳೆಗಳಿಗೆ ಸಮರ್ಪಕವಾದ ಪರಿಹಾರ ತಲುಪುವುದಿಲ್ಲ. ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಹಾವೇರಿಯಂತಹ ಕೆಲವು ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ವರ್ಷದಿಂದಲೂ ಪುನರ್ವಸತಿ ಪರಿಹಾರ ನೀಡಿಲ್ಲ.
ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೂಡಲೇ ಹಸಿ ಬರಗಾಲ ಘೋಷಣೆ ಮಾಡಬೇಕು. ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸೂಕ್ತವಾದ ತುರ್ತು ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ಉಚಿತವಾಗಿ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ನಾಶವಾದ ಪರಿಣಾಮ ದಿನೇ ದಿನೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸಾಲ ಮನ್ನಾ ಮಾಡಬೇಕು. ರೈತರ ಸಂಕಷ್ಟಗಳಿಗೆ ಸರ್ಕಾರ ಕಿವಿಗೊಡುವ ಮೂಲಕ ಕಣ್ಣೀರೊರೆಸುವ ಕರಗಳಾಗಬೇಕು.





