ಮೈಸೂರಿನ ಬೋಗಾದಿಯಲ್ಲಿರುವ ಬನವಾಸಿ ತೋಟದಲ್ಲಿ ‘ಅರಿವಿನ ಚಾವಡಿ’ ಎರಡು ದಿನಗಳ ಶಿಬಿರದಲ್ಲಿ ‘ಸಾಂಸ್ಕೃತಿಕ ಹೋರಾಟ’ ವಿಚಾರವಾಗಿ ಮಾತನಾಡಿದ ಸಾಹಿತಿ ಹಾಗೂ ಚಿಂತಕರಾದ ರಹಮತ್ ತರೀಕೆರೆ, ‘ಆಲೋಚನೆಗಳ ಮೇಲೆ ಪ್ರಭಾವ ಬೀರುವುದು, ಬದುಕಿನ ಮೇಲೆ ಪ್ರಭಾವಿಸುವ ಕೆಲಸ ಸಾಂಸ್ಕೃತಿಕ ಹೋರಾಟ’ ಎಂದು ಹೇಳಿದರು.
“ಸಾಂಸ್ಕೃತಿಕ ಹೋರಾಟ ಆಚರಣೆ, ರೂಢಿ, ಪದ್ಧತಿ, ಕಲೆ, ಧರ್ಮ ಇತ್ಯಾದಿಗಳನ್ನ ಒಳಗೊಂಡರು, ಆಸ್ಪಷ್ಟತೆ ಅದೇ ಮಟ್ಟದಲ್ಲಿದೆ. ಭಾಷೆಯಲ್ಲಿನ ಅಸ್ಪೃಸ್ಯತೆ ಮಾತಿನ ಹೇರಿಕೆಯಲ್ಲಿ, ಬದುಕಿನ ಮೇಲೆ ಪ್ರಭಾವಿಸುವಲ್ಲಿ, ಅದೇ ಸತ್ಯ ಎನ್ನುವ ದಾಟಿಯಲ್ಲಿ ತೆರೆದುಕೊಳ್ಳುತ್ತಿದೆ. ಹೇಳುವುದನ್ನ ಅದೇ ಎನ್ನುವ ದಾಟಿಯಲ್ಲಿ ಒತ್ತಿ ಹೇಳುತ್ತಾ, ಅದನ್ನೇ ರಾಜಕೀಯ ಲಾಭವಾಗಿ ಆಯಾ ಆಯಾಮಗಳಲ್ಲಿ ಕಾಲಾನುಸಾರ ಬದಲಾಯಿಸುವ ಮಾರ್ಮಿಕತೆ ಒಳಗೊಂಡಿದೆ”.
“ಆಲೋಚನಾ ಕ್ರಮದ ಮೇಲೆ ಹೇರಿಕೆ, ಯಾರದ್ದೋ ಕೇಡುಗಳು ಮೌಲ್ಯವಾಗುವುದು ತೀರಾ ಅಪಾಯ. ಅವರವರ ಯೋಚನೆಗಳನ್ನ ಸಾಂಸ್ಕೃತಿಕ ಒಳನೋಟದಲ್ಲಿ ಹೇರಿ, ಅದರಿಂದ ಲಾಭ ಮಾಡಿಕೊಳ್ಳುವ ವಿಷವರ್ತುಲ ನಮ್ಮ ಸುತ್ತಲಿನಲ್ಲಿ, ನಮಗರಿವಿರದಂತೆ ಆವರಿಸಿ ನಿಂತಿದೆ. ಅದನ್ನ ಸರಿ, ತಪ್ಪು ಎನ್ನುವಾಗ ಹೇಳಿಕೆಯನ್ನೇ ಉಲ್ಲಂಘನೆ ಎನ್ನುವಂತೆ ಬಿಂಬಿಸುವ ತಂತ್ರಗಾರಿಕೆ ಬಹಳ ದೊಡ್ಡಮಟ್ಟದ್ದಲ್ಲಿ ಕಾಣಸಿಗುತ್ತಿದೆ”.
“ಜನರ ಆಲೋಚನೆಗಳ ಮೇಲೆ ಗದಾಪ್ರಹಾರ ನಡೆಸಿ ಅರಿವಿಗೆ ಬಾರದಂತೆ ತಮ್ಮತನವನ್ನ ಹೇರುತ್ತಾ, ರಾಜಕೀಯ ಲಾಭಗಳಿಸುವ ವ್ಯವಸ್ಥೆ ಸಾಂಸ್ಕೃತಿಕ ಹೋರಾಟದ ಭಾಗವಾಗಿದೆ. ಮನಸ್ಸನ್ನು ಗುಲಾಮಗಿರಿಗೆ ತಳ್ಳುವ, ಹೇಳುವ ಮಾತನ್ನು ನಂಬಿಸುವಂತೆ ಮಾಡುವ ಮಾತುಗಳೇ ಅಸ್ತ್ರವನ್ನಾಗಿಸುವುದು ತಂತ್ರಗಾರಿಕೆಯ ರೂಪವಾಗಿದೆ” ಎಂದು ವಿಶ್ಲೇಷಿಸಿದರು.
“ಸಂಸ್ಕೃತಿಯನ್ನ ಅಸ್ತ್ರವಾಗಿ ಬಳಸುತ್ತಾ, ಮನುಸ್ಯನನ್ನೇ ಪರಿಕರವಾಗಿ ಬಳಸುವ ತಂತ್ರ ಸಾಂಸ್ಕೃತಿಕ ಹೋರಾಟದ ಮಜಲುಗಳಲಿ ಕಾಣಬಹುದಾಗಿದೆ. ಸಮಾಜದಲ್ಲಿ ಬಣ್ಣ, ಆಹಾರ ವ್ಯವಸ್ಥೆಯನ್ನು ತುಚ್ಚಿಕರಿಸಿ ಅದರಿಂದ, ಶ್ರಮದ ಶೋಷಣೆಯ ಮೂಲಕ ಆರ್ಥಿಕವಾಗಿ ಲಾಭ ಮಾಡುವುದು. ಆಚರಣೆಯ ಪ್ರತಿಪಾದನೆ, ಸಂಸ್ಕೃತಿಯಲ್ಲಿ ಕೀಳಾಗಿ ಕಾಣುವುದನ್ನು ಉನ್ನತಿಕರಿಸಿ ಅಂದಿನ ಕಾಲದಲ್ಲಿ ಪ್ರತಿರೋಧ ಒಡ್ಡಿದ್ದು ಬಸವಣ್ಣ. ಶರಣರ ಸಹಭೋಜನ, ಅಂತರ್ಜಾತಿ ವಿವಾಹ, ಸಮಾಜಕ್ಕೆ ಪೂರಕವಾದ ನಿಲುವುಗಳು ಬದಲಾವಣೆಗೆ ಪುಷ್ಠಿ ನೀಡಿವೆ”.
ಈ ಸುದ್ದಿ ಓದಿದ್ದೀರಾ? ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಸಂಸ್ಕೃತಿಯೇ ಭಾಷೆ. ನಾವುಗಳು ಇನ್ನಿಲ್ಲದ ಹೇರಿಕೆಗಳು, ಪ್ರಭಾವಿಸುವುದನ್ನು ಪ್ರತಿರೋಧದಲ್ಲಿ ಶಕ್ತಿ ವ್ಯಯಿಸುತ್ತಿದ್ದೇವೆ. ಎದುರಾಳಿಗಳ ಮೇಲೆ ಹೆಚ್ಚಿನ ಸಮಯದ ದಾಳಿ, ಸಮಯದ ವ್ಯರ್ಥಕ್ಕೆ ಕಾರಣವಾಗಿದೆ. ವೈಚಾರಿಕತೆ ಇರಬೇಕು. ಆದರೇ, ಅತಿ ವೈಚಾರಿಕತೆ ಸಮಾಜದ ಮೇಲೆ ಪ್ರತಿಕೂಲ ವಾತಾವರಣ ನಿರ್ಮಿಸಿದೆ. ಸಂಸ್ಕೃತೀಕರಣದಿಂದ ಸಾಂಸ್ಕೃತಿಕ ಚಲನೆ ಅಪಾಯಮಟ್ಟದಲ್ಲಿದೆ. ಕೋಮುವಾದಕ್ಕೆ ಜಾಗತೀಕರಣದ ನಂಟಿದೆ ಎಂದು ಅಭಿಪ್ರಾಯಪಟ್ಟರು.





