ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಬುಲ್ಡೋಜರ್ ದಾಳಿ ನಡೆಸಿರುವ ಬಿಜೆಪಿ ಆಡಳಿತದ ಕೃತ್ಯ ಅತ್ಯಂತ ಅಮಾನುಷವಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ತೀವ್ರವಾಗಿ ಖಂಡಿಸಿದೆ.
ದಕ್ಷಿಣ ಜಿಲ್ಲೆಯ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಬಿಜೆಪಿ ಆಡಳಿತ ನಡೆಸಿದ ಬುಲ್ಡೋಜರ್ ದಾಳಿಯನ್ಳಿನು ಖಂಡಿಸಿದ ಜಿಲ್ಲಾ ಸಮಿತಿಯು ಪತ್ರಿಕೆ ಹೇಳಿಕೆ ನೀಡಿದ್ದು, “ಪಾಲಿಕೆ ವಶಪಡಿಸಿಕೊಂಡ ಸಂತ್ರಸ್ತೆ ಎಲ್ಲಾ ವಸ್ತುಗಳನ್ನು ಕೂಡಲೇ ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಕೂಡಲೇ ಪರಿಹಾರ ನೀಡಬೇಕು, ಕಾನೂನುಬಾಹಿರ ಬುಲ್ಡೋಜರ್ ದಾಳಿಯನ್ನು ತಕ್ಷಣ ನಿಲ್ಲಿಸಬೇಕು. ದಾಳಿಗೆ ಕಾರಣಕರ್ತರಾದ ಮೇಯರ್, ಕಮಿಷನರ್ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, “13 ವರ್ಷಗಳ ಹಿಂದೆ ಇದೇ ಬಿಜೆಪಿ ಆಡಳಿತ ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಟೈಗರ್ ಕಾರ್ಯಾಚರಣೆ ನಡೆಸಿದರೆ, ಇಂದು ಉತ್ತರಪ್ರದೇಶದ ಯೋಗಿ ಆಡಳಿತದ ಕುಖ್ಯಾತಿ ಮಾದರಿಯ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವುದು ದೌರ್ಜನ್ಯದ ಪರಮಾವಧಿಯಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಿ ತಾನು ಮಾಡಿದ ಮಹಾಪರಾಧವನ್ನು ಮುಚ್ಚಿಟ್ಟು, ಬೀದಿಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತದೆಂಬ ಸುಳ್ಳನ್ನು ಬಿಚ್ಚಿಟ್ಟು ಮಂಗಳೂರಿನ ನಾಗರಿಕರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಆಡಳಿತ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಲಿದೆ” ಎಂದಿದ್ದಾರೆ.
“ಕಳೆದ 13 ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ, ಮುದ್ರಿಸಿದ ಗುರುತುಚೀಟಿಯನ್ನು ನೀಡಲಿಲ್ಲ, ಆಗಿಂದಾಗ್ಗೆ ಕರೆಯಬೇಕಾಗಿದ್ದ ಹಾಗೂ ಪ್ರತಿಯೊಂದನ್ನು ತೀರ್ಮಾನ ಮಾಡಬೇಕಾಗಿದ್ದ ಪಟ್ಟಣ ವ್ಯಾಪಾರ ಸಮಿತಿ (TVC)ಯ ಸಭೆಯನ್ನು ಕಳೆದ ಒಂದೂವರೆ ವರ್ಷದಲ್ಲಿ ಕರೆಯಲೇ ಇಲ್ಲ. ಇದ್ಯಾವುದನ್ನು ಮಾಡದೆ ಏಕಾಏಕಿ ದಾಳಿ ನಡೆಸಿ, ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಹಕ್ಕುಗಳ ಸಂರಕ್ಷಣಾ ಕಾಯಿದೆಗೆ ವಿರುದ್ಧವಾಗಿ ನಡೆದುಕೊಂಡ ಮನಪಾದ ಬಿಜೆಪಿ ಆಡಳಿತದ ನಡೆ ಅತ್ಯಂತ ಕ್ರೂರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿ ಯೋಜನೆಯ ಹೆಸರಿನಲ್ಲಿ ಹಣ ವಸೂಲಿ: ಪಿಡಿಒ ಶಂಶುದ್ದೀನ್ ವಿರುದ್ಧ ಆರೋಪ
“ಬೀದಿಬದಿ ವ್ಯಾಪಾರಸ್ಥರ ಮೇಲೆ ಮನಪಾ ಆಡಳಿತ ನಡೆಸುವ ದೌರ್ಜನ್ಯವನ್ನು ನಿಲ್ಲಿಸಲು ಕೂಡಲೇ ದ.ಕ.ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು. ದಾಳಿ ನಡೆಸಲು ಪ್ರಚೋದನೆ ನೀಡಿರುವ ಮೇಯರ್ ಕಮಿಷನರ್ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವಶಪಡಿಸಿಕೊಂಡ ವಸ್ತುಗಳನ್ನು ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಸೂಕ್ತ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಬೇಕಾದೀತು” ಎಂದು ಎಚ್ಚರಿಕೆ ನೀಡಿದರು.





