ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಆರೋಪಿ ಮೂಲತ: ಕೇರಳದ ಎರ್ನಾಕುಲಂ ಮಟ್ಟಂಚೇರಿಯ ಹಾಗೂ ಇದೀಗ ದೇರಳಕಟ್ಟೆಯಲ್ಲಿ ನೆಲೆಸಿರುವ ಮುಹಮ್ಮದ್ ಅರ್ಶದ್ ಖಾನ್(29) ಎಂದು ತಿಳಿದು ಬಂದಿದೆ.
ಈತನ ಬಳಿಯಿದ್ದ ರೂ. 10, 85,000 ಮೌಲ್ಯದ ನಿಷೇದಿತ ಮಾದಕ ವಸ್ತು ಎಂಡಿಎಂಎ, ಹೈಡೋವಿಡ್ ಗಾಂಜಾ, ಎಂಡಿಎಂಎ ಮಾತ್ರೆ ಮತ್ತು ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಜತೆಗೆ ಹಲವು ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ʼಕೊಂದವರು ಯಾರು?ʼ ಆಂದೋಲನ; ಮಹಿಳಾ ಆಯೋಗಕ್ಕೆ ಹಕ್ಕೊತ್ತಾಯ ಸಲ್ಲಿಕೆ
ಆರೋಪಿಯು ಎಂಡಿಎಂಎ ವನ್ನು ಬೆಂಗಳೂರಿನಿಂದ ಖರೀದಿಸಿ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ದೇರಳಕಟ್ಟೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.





