ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಉಡುಪಿ ಜಿಲ್ಲೆಯ ಕಾಪು ತಾಲೂಕುಗಳ ಗಡಿಯಲ್ಲಿರುವ ಪಲಿಮಾರು ಹಾಗೂ ಬಳ್ಕುಂಜೆ ಗ್ರಾಮಗಳಿಗೆ ಕೊಂಡಿಯಾಗಿ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯನ್ನು ಸಂಚಾರಕ್ಕೆ ಮುಚ್ಚಿ ಎರಡು ವರ್ಷ ಕಳೆದರೂ ದುರಸ್ತಿಯನ್ನೂ ನಡೆಸಿಲ್ಲ, ಹೊಸ ಸೇತುವೆ ನಿರ್ಮಾಣದ ಪ್ರಕ್ರಿಯೆಯೂ ಆರಂಭಗೊಂಡಿಲ್ಲ ಎಂದು ಮುನೀರ್ ಕಾಟಿಪಳ್ಳ ಆರೋಪ ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಿಕೆ ಪ್ರಕಟಣೆ ಹೊರಡಿಸಿರುವ ಅವರು, “ಅಕ್ರಮ ಮರಳುಗಾರಿಕೆಯಿಂದಲೋ, ಇನ್ನೇನೋ ಕಾರಣದಿಂದಲೋ ಈ ಸೇತುವೆ ದುರ್ಬಲಗೊಂಡಿದೆ ಎಂಬ ಕಾರಣ ಮುಂದಿಟ್ಟು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಪ್ರಮುಖ ರಸ್ತೆಯ ಸೇತುವೆಯನ್ನು ಮುಚ್ಚಿಸಿದೆ. ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಒದಗಿಸಿದೆ” ಎಂದರು.
“ಸೇತುವೆಯಲ್ಲಿ ಘನವಾಹನ ಓಡಾಟ ನಿರ್ಬಂಧಿಸುವ ಆದೇಶ ಹೊರಡಿಸುವ ಸಂದರ್ಭ ಈ ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ, ಅದೇ ಸಂದರ್ಭ ಹೊಸ ಸೇತುವೆ ನಿರ್ಮಿಸುವ ಕುರಿತು ಉಲ್ಲೇಖಿಸಲಾಗಿದೆ. ಅಚ್ಚರಿ ಆಂದರೆ, ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಎರಡು ವರ್ಷ ದಾಟಿದೆ. ಆದರೂ ಯಾವುದೇ ತೆರವು ಕಾರ್ಯಾಚರಣೆಗಳು ಕಂಡುಬಂದಿಲ್ಲ” ಎಂದು ಹೇಳಿದರು.

“ಇದರಿಂದಾಗಿ ಕಿನ್ನಿಗೋಳಿ ಇನ್ನಾ ನಡುವಿನ ಗ್ರಾಮಗಳಾದ ಪಲಿಮಾರು, ಬಳ್ಕುಂಜೆ, ಕರ್ನಿರೆ ಸಹಿತ ಹಲವು ಊರಿನ ಗ್ರಾಮಸ್ಥರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಯಾಣಿಕರ ಬಸ್ಸುಗಳ ಓಡಾಟವನ್ನು ನಿರ್ಬಂಧಿಸಿರುವುದರಿಂದ ವಿದ್ಯಾರ್ಥಿಗಳು ಹತ್ತಾರು ಕಿ ಮೀ ಸುತ್ತಿ-ಬಳಸಿ ಶಾಲಾ ಕಾಲೇಜುಗಳಿಗೆ ತಲುಪುತ್ತಿದ್ದಾರೆ. ಕಾರ್ಮಿಕರು, ದುಡಿಯುವ ಜನರು ದುಬಾರಿ ದರ ತೆತ್ತು ಆಟೋಗಳಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ. ಒಟ್ಟಾರೆ ಇವರ ಕಷ್ಟ ಇಲ್ಲಿ ಕೇಳುವವರಿಲ್ಲ. ಸೇತುವೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಇರುವುದರಿಂದ ಅಪರ ಜಿಲ್ಲಾಧಿಕಾರಿಗಳಲ್ಲಿ ವಿಚಾರಿಸಿದರೆ ದುರಸ್ತಿ, ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ” ಎಂದು ಉತ್ತರಿಸಿದರು.
“ಬಸ್ಸು ಸಹಿತ ಘನವಾಹನಗಳ ಓಡಾಟಕ್ಕೆ ಅವಕಾಶವಾಗದಂತೆ ಲಘುವಾಹನಗಳ ಸಂಚಾರಕ್ಕೆ ಮಾತ್ರ ಸ್ಥಳಾವಕಾಶ ನೀಡಿ ಸೇತುವೆಗೆ ಅಡ್ಡಲಾಗಿ ಕಲ್ಲುಗಳನ್ನು ಕಟ್ಟಿದ್ದರೂ, ಮಿನಿ ಲಾರಿಗಳಲ್ಲಿ ಅತಿ ಭಾರದ ಕೆಂಪು ಕಲ್ಲುಗಳ ಸಾಗಾಟ, ಮರಳು ಸಾಗಾಟ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಇದಕ್ಕಿಂತ ಕಡಿಮೆ ಭಾರದ ಪ್ರಯಾಣಿಕರ ಬಸ್ಸುಗಳಿಗೆ ಮಾತ್ರ ಅವಕಾಶ ನಿರಾಕರಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇದೇ ರೀತಿಯಲ್ಲಿ ಬಿರುಕುಗಳು ಕಂಡುಬಂದ ಅಡ್ಡೂರು, ಪೊಳಲಿ ಸೇತುವೆ, ಮರವೂರು ಸೇತುವೆಗಳಲ್ಲಿ ದುರಸ್ತಿ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿತ್ತು. ಕೂಳೂರು ಕಮಾನು ಸೇತುವೆಯನ್ನೂ ಬಿರುಕು ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಅದೇ ಸಂದರ್ಭದಲ್ಲಿ ಇಲ್ಲೆಲ್ಲ ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಫಲಿಮಾರು ಬಳ್ಕುಂಜೆಯಲ್ಲಿ ಮಾತ್ರ ದುರಸ್ತಿಯೂ ಇಲ್ಲ, ಹೊಸ ಸೇತುವೆಯೂ ಇಲ್ಲ, ಸಂಚಾರವೂ ಇಲ್ಲ ಎಂಬಂತಾಗಿದೆ. ಈ ಸೇತುವೆಯ ಎರಡೂ ಬದಿಗಳಲ್ಲಿ ಬಿಜೆಪಿ(ಕಾಪು, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಗಳು) ಶಾಸಕರು ಇದ್ದಾರೆ. ಅವರುಗಳು ಎರಡು ವರ್ಷಗಳಾದರು ಈ ಸೇತುವೆಯ ಕುರಿತು ಗಮನ ಹರಿಸಿಲ್ಲ, ಸ್ಥಳೀಯವಾಗಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮುಖಂಡರೂ ಈ ಗ್ರಾಮಸ್ಥರ ಸಮಸ್ಯೆಯ ಕುರಿತು ಧ್ವನಿ ಎತ್ತಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಹಾಲು ಡೇರಿ ಕಾರ್ಯದರ್ಶಿಗಳ ಬೇಡಿಕೆಗಳ ಈಡೇರಿಕೆಗಾಗಿ ಕೋಮುಲ್ ಎಂಡಿಗೆ ಮನವಿ
“ಈ ಕುರಿತು ನಮ್ಮ ಗಮನಕ್ಕೆ ಕೆಲವರು ತಂದ ಕಾರಣ ಇಂದು ನ್ಯಾಯವಾದಿ ಹಾಗೂ ಜನಪರ ಚಳವಳಿಗಳಲ್ಲಿ ಜೊತೆಗಿರುವ ದಿನೇಶ್ ಹೆಗ್ಡೆ ಉಳೆಪಾಡಿ, ನಾನು, ಸಿಪಿಐಎಂನ ಶ್ರೀನಾಥ್ ಕುಲಾಲ್ ಫಲಿಮಾರು, ಬಳ್ಕುಂಜೆಗೆ ಭೇಟಿ ನೀಡಿದೆವು. ಅಲ್ಲಿ ನೆರೆದಿದ್ದ ಗ್ರಾಮಸ್ಥರ ಜತೆಗೆ ಸಮಾಲೋಚನೆ ನಡೆಸಿದೆವು, ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದೆವು. ಸಂಬಂಧಪಟ್ಟ ಅಧಿಕಾರಿಗಳ ಬಳಿ ನಿಯೋಗ ಹೋಗಲು ನಿರ್ಧರಿಸಿದೆವು. ಹೊಸ ಸೇತುವೆ ನಿರ್ಮಾಣ, ಅಲ್ಲಿಯರಗೆ ಈಗಿರುವ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯ ಜತೆಗೆ ನಿಲ್ಲುವುದಾಗಿ ನಿರ್ಧರಿಸಿದೆವು. ಹೋರಾಟ, ಪ್ರತಿಭಟನೆ ಅಗತ್ಯವಾದಲ್ಲಿ ಸಮಾನ ಮನಸ್ಕರ ಬೆಂಬಲ ಪಡೆದು ಗ್ರಾಮಸ್ಥರ ನೇತೃತ್ವದಲ್ಲಿ ಮುಂದುವರೆಯುವುದಾಗಿ ನಿರ್ಧರಿಸಲಾಯಿತು” ಎಂದು ಎಚ್ಚರಿಕೆ ನೀಡಿದ್ದಾರೆ.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30, 40 ವರ್ಷಗಳಷ್ಟೇ ಆಗಿರುವ ಸೇತುವೆಗಳು ಸರಣಿಯಾಗಿ ದುರ್ಬಲಗೊಳ್ಳುತ್ತಿರುವುದು ಯಾಕೆ” ಎಂಬುದು ಅವರ ಬಹುದೊಡ್ಡ ಪ್ರಶ್ನೆಯಾಗಿದೆ





