ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಾರೀ ಮಳೆ ಮುಂದುವರಿದಿದ್ದು,ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿ ಹೆದ್ದಾರಿ ಜಲಾವೃತಗೊಂಡಿದೆ. ಆದರೂ ಪದವಿ ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೇ ಪ್ರವಾಹದ ನೀರನ್ನು ದಾಟಿಕೊಂಡು ಬಂದು ಪರೀಕ್ಷೆಗೆ ಹಾಜರಾಗಬೇಕಾದ ಸ್ಥಿತಿ ಸೋಮವಾರ ಉಂಟಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆ ಸೋಮವಾರ ನಿಗದಿಯಾಗಿತ್ತು. ಭಾರೀ ಮಳೆಯ ಮುನ್ಸೂಚನೆ ಇದ್ದರೂ ವಿಶ್ವವಿದ್ಯಾಲಯವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಮುಂದೂಡಿರಲಿಲ್ಲ. ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿಗೆ ಪರೀಕ್ಷೆಗೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳತ್ತ ಧಾವಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಭಾರೀ ಮಳೆ; 41 ಮನೆಗಳಿಗೆ ಹಾನಿ, ಶಾಲೆ-ಕಾಲೇಜುಗಳಿಗೆ ರಜೆ
ಭಾರೀ ಮಳೆಯಾಗುವ ಸಂಭವವಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಸ್ಟರ್ ಪರೀಕ್ಷೆ ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಸೋಮವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಿಗದಿಯಾಗಿದ್ದವು. ಮಂಗಳೂರು ವಿಶ್ವವಿದ್ಯಾಲಯವು ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಮುಂದೂಡಿದೆ.




