ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಸತ್ತ ಆಡಿನ ತಲೆಯೊಂದಿಗೆ ವ್ಯಕ್ತಿಗಳ ಭಾವ ಚಿತ್ರ ಬಳಸಿ ಕೃಷಿ ತೋಟದ ಗೇಟ್ ಮುಂಭಾಗ ವಾಮಾಚಾರ ನಡೆಸಿರುವ ಘಟನೆ ನಡೆದಿದ್ದು, ಸ್ಥಳೀಯರು ಬೆಚ್ಚಿ ಬೀಳುವಂತೆ ಮಾಡಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯ ಗರ್ಡಾಡಿಯ ಬೋಳಿಯಾರ್‌ನಲ್ಲಿ ಜಾಗದ ತಕರಾರು ಇದ್ದ ಹಿನ್ನೆಲೆಯಲ್ಲಿ ವಾಮಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕೃಷಿ ತೋಟ ಮುಂಭಾಗ ಸತ್ತ ಆಡಿನ ತಲೆಗಳು ಹಾಗೂ ವ್ಯಕ್ತಿಗಳ ಭಾವಚಿತ್ರ ಪತ್ತೆಯಾಗಿದೆ.
ಆಡಿನ ತಲೆಗೆ ಹಲವು ಜನರ ಭಾವಚಿತ್ರವನ್ನು ಮೊಳೆ ಹೊಡೆದು ವಾಮಾಚಾರ ನಡೆಸಲಾಗಿದೆ. ಸಮಾಜದ ಕೆಲ ಗಣ್ಯ ವ್ಯಕ್ತಿಗಳ ಫೋಟೋ ಕೂಡ ಬಳಕೆ ಮಾಡಲಾಗಿದ್ದು, ಜಾಗದ ಮಾಲೀಕರಾದ ಗೋಪು ಕುಮಾರ್ ಹಾಗೂ ಸುಮೇಶ್ ವಿರುದ್ಧ ಮಂಗಳೂರಿನ ರಾಜೇಶ್ ಪ್ರಭು ಎಂಬಾತನೇ ವಾಮಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ರಾಜೇಶ್ ಪ್ರಭು ಹಾಗೂ ಗೋಪು ಕುಮಾರ್ ನಡುವೆ ಜಾಗದ ತಕರಾರು ಇತ್ತು. ಹಾಗಾಗಿ ಗೋಪು ಕುಮಾರ್ ಹಾಗೂ ಸಂಗಡಿಗರು ರಾಜೇಶ್ ಪ್ರಭು ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದೇ ಕಾರಣಕ್ಕೆ ಗೋಪು ಕುಮಾರ್ ಸಹಿತ ಬೆಂಬಲಿಸಿದವರ ವಿರುದ್ಧವು ವಾಮಾಚಾರ ಪ್ರಯೋಗ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಳೆಯಿಂದ ಪ್ರವಾಹ: ಹಾನಿಗೊಳಗಾದ ತುಪ್ಪರಿ ಹಳ್ಳ, ಬೆಣ್ಣೆ ಹಳ್ಳ ಪ್ರದೇಶಕ್ಕೆ ಸಚಿವ ಸಂತೋಷ ಲಾಡ್ ಭೇಟಿ
ಸ್ಥಳದಲ್ಲಿ 25 ಆಡಿನ ತಲೆಗಳು, ಮೊಟ್ಟೆ, ಮರದ ಪ್ರತಿಕೃತಿ, ಭಾವಚಿತ್ರ, ಹೂವು ಪತ್ತೆಯಾಗಿದೆ. ತೋಟದ ಬಳಿ ಆಗಮಿಸುವ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕೃತ್ಯ ನಡೆಸಿದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.





