ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಜಾರುಮಲೆ ಕುಗ್ರಾಮವು 100% ಮತದಾನ ದಾಖಲಿಸಿದೆ. ರಾಜ್ಯದಲ್ಲಿಯೇ 100% ಮತದಾನವಾದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಂಜಾರುಮಲೆ ಗ್ರಾಮದಲ್ಲಿ 111 ಮತದಾರರಿದ್ದು, ಅಷ್ಟೂ ಮಂದಿ ಮತದಾನ ಮಾಡಿದ್ದಾರೆ. ಸಂಜೆ 4 ಗಂಟೆಯ ವೇಳೆಗೆ ಗ್ರಾಮದಲ್ಲಿ ಮತದಾನ ಪ್ರಕ್ರಿಯೆಯೇ ಪೂರ್ಣಗೊಂಡಿದೆ.
ಗ್ರಾಮದಲ್ಲಿ ಅರಣ್ಯವಾಸಿಗಳು, ಬುಡಕಟ್ಟು ರೈತರು ಮತ್ತು ಸಣ್ಣ ಅರಣ್ಯ ತ್ಯಾಜ್ಯ ಸಂಗ್ರಹಿಸುವವರು ವಾಸಿಸುತ್ತಿದ್ದಾರೆ. ಯಾವುದೇ ವಿದ್ಯುತ್ ಮತ್ತು ಸಾರಿಗೆ ಸಂಪರ್ಕವೂ ಈ ಗ್ರಾಮಕ್ಕಿಲ್ಲ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ದೊರೆರುವ ನೀರನ್ನೇ ಆಶ್ರಯಿಸಿ ಇಲ್ಲಿನ ಜನರು ಬದುಕುತ್ತಿದ್ದಾರೆ.
ಜನರು ತಮ್ಮ ತಾಲೂಕು ಕೇಂದ್ರವಾದ ಬೆಳ್ತಂಗಡಿ ತಲುಪಲು ಮೂಡಿಗೆರೆ ಮಾರ್ಗವಾಗಿ ಬಸ್‌ನಲ್ಲಿ ಪ್ರಯಾಣಿಸಬೇಕು ಅಥವಾ ಎಂಟು ಕಿಲೋಮೀಟರ್ ದಟ್ಟವಾದ ಕಾಡುಗಳ ಮಧ್ಯೆ ನಡೆದುಕೊಂಡು ಹೋಗಬೇಕು. ಆದರೆ, ಇಂತಹ ಪರಿಸ್ಥಿತಿಯಲ್ಲೂ ಗ್ರಾಮದ ಎಲ್ಲರೂ ಮತದಾನ ಮಾಡಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯ ಮತದಾನದ ಅಂಕಿಅಂಶಗಳ ಪ್ರಕಾರ ಬಾಂಜಾರುಮಲೆ ಗ್ರಾಮದಲ್ಲಿ ಶೇ.99 ರಷ್ಟು ಮತದಾನವಾಗಿತ್ತು.




