ಬಂಟ್ವಾಳ ಸಮೀಪದ ಕಲ್ಲಡ್ಕದ ಗೋಳ್ತಮಜಲು ಎಂಬಲ್ಲಿರುವ, ಬಾಲಕಿಯರ ವಿದ್ಯಾಸಂಸ್ಥೆ ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಇತ್ತೀಚೆಗೆ ಪೊಲೀಸ್ ಠಾಣಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ, ಇಲ್ಲಿನ, ಪ್ರಥಮ ಪಿಯುಸಿ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿನಿಯರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಈ ಕುರಿತು ಪ್ರಸ್ತುತ ಯುವಜನತೆಯಲ್ಲಿ ಪೊಲೀಸ್ ಠಾಣೆಯ ಕಾರ್ಯ ಚಟುವಟಿಕೆಗಳ ಬಗೆಗಿನ ಅರಿವು ಮೂಡಿಸುವ ಜತೆಗೆ ಪೊಲೀಸರ ಬಗ್ಗೆ ಇರುವ ಭಯ ಮತ್ತು ಗೊಂದಲದ ಭಾವನೆಯನ್ನು ಹೋಗಲಾಡಿಸುವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ಈ ನಿಟ್ಟಿನಲ್ಲಿ, ಬಂಟ್ವಾಳ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಧನ್ಯಶ್ರೀಯವರು ವಿದ್ಯಾರ್ಥಿನಿಯರಿಗೆ ಪೊಲೀಸ್ ಠಾಣೆಯ ಕುರಿತು ತಿಳುವಳಿಕೆ ನೀಡಿದ್ದಲ್ಲದೆ, “ವಿದ್ಯಾರ್ಥಿನಿಯರು ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಪೊಲೀಸ್ ಇಲಾಖೆ ಸೇರಿದಂತೆ, ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಗಮನಹರಿಸಬೇಕು. ಅದಕ್ಕೆ ಪೂರಕವಾಗಿ ವಿದ್ಯಾರ್ಥಿನಿಯರು ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಿ ಕೃಷ್ಣಯ್ಯಶೆಟ್ಟಿ ಜ್ಯುವೆಲ್ಲರ್ಸ್ನಿಂದ ವಜ್ರ ಮತ್ತು ಚಿನ್ನಾಭರಣ ಪ್ರದರ್ಶನ
ಠಾಣೆಯ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ವಾಕಿ-ಟಾಕಿಯನ್ನು ಬಳಸುವ ವಿಧಾನದ ಬಗ್ಗೆ ಹಾಗೂ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ನೀಡಿದರು. ಹಾಗೆಯೇ ವಿದ್ಯಾರ್ಥಿನಿಯರು ತಮಗೆ ಇರುವ ಗೊಂದಲ-ಸಂದೇಹಗಳ ಬಗ್ಗೆ ಪೊಲೀಸರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದರು.





