ಮಂಗಳೂರು: ಕ್ರಿಸ್‌ಮಸ್ ಹಬ್ಬದ ಸಡಗರ ಕರಾವಳಿಯಲ್ಲಿ ಚರ್ಚುಗಳಲ್ಲಿನ ಅಲಂಕಾರ, ಗೋದಲಿಗಳ ನಿರ್ಮಾಣ, ಶುಭಾಶಯ ಹಂಚುವ ಮೂಲಕ ಮನೆಮಾಡಿದೆ. ಸರ್ವಧರ್ಮಗಳ ಹಬ್ಬವಾಗಿದ್ದ ಕ್ರಿಸ್‌ಮಸ್‌ಗೆ ಈ ಬಾರಿಯೂ ಹಿಂದೂ ಸಂಘಟನೆಗಳು ಅಘೋಷಿತ ಬಹಿಷ್ಕಾರ ಹಾಕಿದಂತೆ ಭಾಸವಾಗುತ್ತಿದೆ.
ದಶಕಗಳ ಹಿಂದೆ ಕ್ರಿಸ್ಮಸ್ ಹಬ್ಬಕ್ಕೆ ನಗರವೇ ಅಲಂಕಾರಗೊಳ್ಳುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ ಕ್ರಿಶ್ಚಿಯನ್ ಸಂಸ್ಥೆಗಳು, ಮನೆ ವಠಾರ, ಅಂಗಡಿಗಳು ಮಾತ್ರ ಕಂಗೊಳಿಸುತ್ತಿವೆ. ಸೌಹಾರ್ದತೆಯಿಂದ ಆಚರಿಸಲಾಗುತ್ತಿದ್ದ ಕೆಲವೊಂದು ಕಾರ್ಯಕ್ರಮಗಳೂ ಆಯೋಜನೆಗೊಂಡಿಲ್ಲ. ಕ್ರಿಸ್‌ಮಸ್ ಮತ್ತು ನೂತನ ಹಬ್ಬದ ಪ್ರಯುಕ್ತ ಕ್ರೀಡಾಕೂಟಗಳು, ರಕ್ತದಾನ ಶಿಬಿರ, ಮನೋರಂಜನಾ ಕಾರ್ಯಕ್ರಮಗಳು ಯಾವುದೂ ಹಿಂದೂ ಸಂಘಟನೆ ವತಿಯಿಂದ ಆಯೋಜನೆಗೊಂಡಿಲ್ಲ.
ಇತ್ತೀಚಿನ ದಶಕಗಳಲ್ಲಿ ಹಬ್ಬಾಚರಣೆಯಲ್ಲಿಯೂ ದೊಡ್ಡದಾದ ಕಂದರ ಏರ್ಪಟ್ಟಿದೆ’ ಎನ್ನುತ್ತಾರೆ ನಿವೃತ್ತ ಪ್ರೊಫೆಸರ್ ರೊನಾಲ್ಡ್ ಡಿ’ಕೋಸ್ತ. ಹಿಂದೂ ಸಂಘಟನೆಗಳು ನಡೆಸಿದ ಚರ್ಚ್ ದಾಳಿಯ ಬಳಿಕ ಖಂಡಿತವಾಗಿಯೂ ಸೌಹಾರ್ದತೆಗೆ ಧಕ್ಕೆ ಆಗಿದೆ. ಅದೊಂದು ನಿರೀಕ್ಷಿಸಲಾಗದ ಘಟನೆಯಾಗಿತ್ತು, ಎನ್ನುತ್ತಾರವರು.
“ನನ್ನ ನಿವೃತ್ತಿಯ ಬಳಿಕವೂ ಹಲವು ಮಂದಿ ವಿದ್ಯಾರ್ಥಿಗಳು ಶುಭ ಹಾರೈಸುತ್ತಿದ್ದರು. ಆದರೆ ಅದೀಗ ಕಡಿಮೆಯಾಗಿದೆ. ನಮ್ಮಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಅದೂ ಕೂಡಾ ಇಲ್ಲವಾಗಿದೆ. ಏಕೆಂದರೆ ನಮಗೀಗ ಸೌಹಾರ್ದತೆಗಿಂತ ರಾಜಕೀಯ ಮುಖ್ಯವಾಗಿದೆ”ಎನ್ನುತ್ತಾರೆ.
ಜೆಪ್ಪು ಸೆಮಿನರಿ ಆಡಳಿತ ಮಂಡಳಿ ಸದಸ್ಯ ಹೆರಾಲ್ಡ್ ಡಿʼಮೆಲ್ಲೋ ಪ್ರಕಾರ, “ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಂಘಟನೆಗಳು ಅಥವಾ ಹಿಂದೂ ಮುಖಂಡರು ಚರ್ಚ್ ಬಳಿ ಬರುವುದೇ ಇಲ್ಲ. ಹಿಂದೆಲ್ಲಾ ಹಬ್ಬದ ದಿನದಂದು ಹಬ್ಬದ ತಿಂಡಿ ಹಂಚುವ ಮತ್ತು ಶುಭಾಶಯ ಕೋರುವ ಕ್ರಮ ಇದ್ದಿತ್ತು. ಗಣೇಶ ಹಬ್ಬ, ಅಷ್ಟಮಿ, ಹೀಗೆ ಆಚರಣೆ ಸಂದರ್ಭ ಕ್ರೈಸ್ತ ಮುಖಂಡರನ್ನು ಅತಿಥಿಯಾಗಿ ಕರೆಯುತ್ತಿದ್ದರು. ಆದರೆ ಈಗ ಅಂತಹಾ ಕ್ರಮವಿಲ್ಲ. ಕ್ರೈಸ್ತರು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಬರುವುದೂ ಕಡಿಮೆ. ಆದರೆ ಕೆಲವೊಂದು ಸ್ವಾಮೀಜಿಗಳು ಕನಿಷ್ಠ ಸೌಜನ್ಯಕ್ಕಾದರೂ ಬರುವುದಿದೆ. ಅದು ಬಿಟ್ಟರೆ ಈಗ ಅಂತಹಾ ಸೌಹಾರ್ದತೆ ಇಲ್ಲ” ಎನ್ನುತ್ತಾರೆ.
“ನಗರದಲ್ಲಿ ಹಿಂದೆ ಕ್ರಿಸ್ಮಸ್ ಹಬ್ಬಕ್ಕೆ ರಸ್ತೆ ಬದಿ ಬ್ಯಾನರ್ ಹಾಕುವುದರಲ್ಲಿ, ಅಂಗಡಿಗಳನ್ನು ಅಲಂಕಾರ ಮಾಡುವುದರಲ್ಲಿ ಅವರೇ ಮುಂದಿದ್ದರು. ಆದರೀಗ ಭಾರೀ ನಕಾರಾತ್ಮಕವಾಗಿ ಬದಲಾವಣೆ ಆಗಿದೆ” ಎನ್ನುತ್ತಾರೆ.
ಉರ್ವದ ಹಿರಿಯ ನಾಗರಿಕ, ಅಂಚೆ ಇಲಾಖೆ ನಿವೃತ್ತ ಅಧಿಕಾರಿ, ಮೈಕೆಲ್ ಲೋಬೋ, “ನಮ್ಮ ಬಾಲ್ಯದಲ್ಲಿ ಹಬ್ಬಗಳಿಗೆ ಜಾತಿ ಎನ್ನುವುದು ಇರಲಿಲ್ಲ. ಸಂತೋಷದಿಂದ ಪಾಲುಗೊಳ್ಳುವುದು ಮತ್ತು ಹಬ್ಬದ ತಿಂಡಿ-ಊಟ ಎಲ್ಲಾ ಕಡೆ ಆಗುತ್ತಿತ್ತು. ಕ್ರಿಸ್‌ಮಸ್ ಹಬ್ಬಕ್ಕೆ ಹಿಂದೂ ಧರ್ಮದವರೂ ಚರ್ಚಿಗೆ ಅಥವಾ ಮನೆಗೆ ಬಂದು ಶುಭ ಹಾರೈಸುತ್ತಿದ್ದರು. ಇತ್ತೀಚೆಗೆ ಮೊಬೈಲ್ ಸಂದೇಶದ ವ್ಯವಸ್ಥೆಯಿದ್ದರೂ, ಧರ್ಮ ಅಲ್ಲಿಯೂ ಕೆಲಸ ಮಾಡುತ್ತಿದೆ. ಕರಾವಳಿಯಲ್ಲಿನ ಸೌಹಾರ್ದತೆಗೆ ದಶಕಗಳ ಹಿಂದಿನ ಚರ್ಚ್‌ಗಳ ಮೇಲಿನ ದಾಳಿ ದೊಡ್ಡ ಪರಿಣಾಮ ಬೀರಿದೆ. ಅದು ತೆಳುವಾಗಿಯಾದರೂ ಸ್ವಲ್ಪ ಹೆಚ್ಚಿನ ಮತ್ತು ಗಟ್ಟಿಯಾದ ಬೇಲಿಯನ್ನೇ ನಿರ್ಮಿಸಿದೆ’’ ಎನ್ನುತ್ತಾರೆ.
ಬಿಜೈ ಚರ್ಚ್‌ನ ಮುಖ್ಯ ಗುರುಗಳಾದ ಫಾ. ಜೆ.ಬಿ. ಡಿ’ಸೋಜ, “ನಮಗೆ ಎಲ್ಲಾ ಧರ್ಮೀಯರು ಗೌರವ ಕೊಡುತ್ತಾರೆ. ವಿಶೇಷ ಹಬ್ಬಗಳಲ್ಲಿ ಧಾರ್ಮಿಕ ಮುಖಂಡರಿಗೆ ನಾವು ಶುಭ ಹಾರೈಸುತ್ತೇವೆ. ಅಹಿತವಾದ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಕ್ರಿಸ್ ಮಸ್ ಹಬ್ಬದ ಮುಖ್ಯ ಸಂದೇಶಗಳಲ್ಲಿ ಎಲ್ಲರನ್ನೂ ಪ್ರೀತಿಸು, ಎಲ್ಲರೊಂದಿಗೆ ಸಂತೋಷದಿಂದ ಇರುವುದಾಗಿದೆ” ಎನ್ನುತ್ತಾರೆ.
ಮಂಳೂರು ಧರ್ಮಪ್ರಾಂತ್ಯದ ಬಿಷಪ್ ಫಾ. ಪೀಟರ್ ಪೌಲ್ ಸಲ್ದಾನ್ಹಾ, ತನ್ನ ಕ್ರಿಸ್‌ಮಸ್ ಸಂದೇಶದಲ್ಲಿ, ಪ್ರೀತಿ, ಸಹಬಾಳ್ವೆ, ಸಹೋದರತ್ವ ಮತ್ತು ಸೌಹಾರ್ದತೆಯೇ ನಮ್ಮ ಗುರಿಯಾಗಿರಲಿ ಎಂದಿದ್ದಾರೆ.
ವರದಿ : ರಾಜೇಶ್ ಶೆಟ್ಟಿ ಬಿ





