ʼಪ್ರಜಾಧ್ವನಿ ಕರ್ನಾಟಕʼ ಹಾಗೂ ಕಡಬದ ʼಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆʼಗಳ ಸಹಭಾಗಿತ್ವದಲ್ಲಿ ಸಂವಿಧಾನ ದಿನಾಚರಣೆ ಮತ್ತು ಆ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳಿಗೆ “ಸಂವಿಧಾನದ ಆಶಯಗಳು, ಮೌಲ್ಯಗಳು, ಜಾಗೃತಿ ಮತ್ತು ಯುವಕರ ಪಾತ್ರ” ವಿಷಯದ ಕುರಿತು ಸಂವಾದ ಕಾರ್ಯಕ್ರಮ ದಿನಾಂಕ 01 ಡಿಸೆಂಬರ್ 2025 ರಂದು ಕಡಬದ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಪ್ರಜಾಧ್ವನಿ ಕರ್ನಾಟಕದ ಸಂಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಜಾನಿ ಕೆ. ಪಿ. ಪ್ರಸ್ತಾವಿಕವಾಗಿ ಮಾತನಾಡಿ, “ನಮ್ಮ ಮುಂದಿನ ತಲೆಮಾರುಗಳ ಕನಸಿನ ಭವಿಷ್ಯವನ್ನು ರೂಪಿಸಲು ಮತ್ತು ಭದ್ರಗೊಳಿಸಲು ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಒಂದು ಭದ್ರ ಅಡಿಪಾಯ, ಅದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರಜಾಧ್ವನಿ ಕರ್ನಾಟಕದ ರಚನೆಯಾಗಿದೆ” ಎಂದು ಹೇಳಿದರು.
ಸಂವಾದ ಮುಖ್ಯ ಅತಿಥಿ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಆ್ಯಂಟನಿ ಟಿ. ಪಿ. ಮಾತನಾಡಿ, ಸಂವಿಧಾನದ ಮಹತ್ವವನ್ನು, ಸಂವಿಧಾನಬದ್ಧ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ವಿವರಿಸಿದರು. ನಮ್ಮ ಹಕ್ಕುಗಳ ರಕ್ಷಣೆಯಾಗಬೇಕಾದರೆ ಸಂವಿಧಾನದಲ್ಲಿ ಒಳಗೊಂಡ ನಮ್ಮ ಕರ್ತವ್ಯಗಳ ಹಾಗೂ ಬಾಧ್ಯತೆಗಳ ಪಾಲನೆ ಮಾಡಬೇಕಾದ ಅವಶ್ಯಕತೆಯ ಬಗ್ಗೆ ತಿಳಿ ಹೇಳಿದರು.
ಇನ್ನೋರ್ವ ಸಂವಾದ ಮುಖ್ಯ ಅತಿಥಿ “V for IAS Notes” ಅಪ್ಲಿಕೇಶನ್ ನ ಸಂಸ್ಥಾಪಕ ಹಾಗೂ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಮುಸ್ತಫಾ ಮಾತನಾಡಿ ಧಾರ್ಮಿಕ, ಭಾಷಾ, ಭೌಗೋಳಿಕ ವಿವಿಧತೆಗಳಿರುವ ಭಾರತದಲ್ಲಿ ಸರ್ವ ಜನಾಂಗದ ಜನರಿಗೆ ಒಂದಾಗಿ ಬಾಳಲು ಅವಕಾಶ ಕಲ್ಪಿಸಿಕೊಟ್ಟಂತಹ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ. ಇಂತಹ ಸಂವಿಧಾನವನ್ನು ಉಳಿಸಬೇಕಾದ ಅನಿವಾರ್ಯತೆ ಹಾಗೂ ಅದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ್ ಎಡಮಲೆ ಮಾತನಾಡಿ ಇಂದು ನಮ್ಮ ನಮ್ಮ ಮನೆಗಳಿಂದ ಹೊರಗಡೆ ಬಂದರೆ ನಮ್ಮ ಪ್ರತಿಯೊಂದು ಚಟುವಟಿಕೆಗಳಿಗೆ ಸಂವಿಧಾನ ಅನ್ವಯವಾಗುತ್ತದೆ. ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವಲ್ಲಿ ಯುವಜನತೆ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಪ್ರಜಾಧ್ವನಿ ಸಂಘಟನೆಯ ಮೂಲಕ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಪ್ರತಿನಿಧಿ ವಿದ್ಯಾರ್ಥಿನಿ ಕು. ಸಾನಿಕ ಸಾಂದರ್ಭಿಕವಾಗಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ಫಾ. ಪ್ರಕಾಶ್ ಪೌಲ್ ಡಿಸೋಜಾ ಮಾತನಾಡಿ ಸಮಾಜವು ಸಾಂವಿಧಾನಿಕ ಮಾರ್ಗವನ್ನು ಬಿಟ್ಟು ಹೋಗದಂತೆ ಸರಿದಾರಿಗೆ ತರಲು ಪ್ರಯತ್ನಿಸಲು ರೂಪುಗೊಂಡ ವೇದಿಕೆ ಪ್ರಜಾಧ್ವನಿ. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಮ್ಮೆಲ್ಲರ ಪ್ರಯತ್ನ ಇರಲಿ ಎಂದು ಹೇಳಿ ಸಂಘಟನೆಗೆ ಶುಭ ಹಾರೈಸಿದರು.
ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ಕಡಬದ ಪ್ರಾಂಶುಪಾಲ ಕಿರಣ ಕುಮಾರ, ಕಾಲೇಜಿನ ವಿದ್ಯಾರ್ಥಿ ನಾಯಕ, ನಾಯಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಜಾಧ್ವನಿ ಕರ್ನಾಟಕದ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಹಿರಿಯ ಸದಸ್ಯ ಮೊಹಮ್ಮದ್ ಕುಂಞಿ ಗೂನಡ್ಕ, ಪದಾಧಿಕಾರಿಗಳಾದ ವಕೀಲ ಮೋಹನ್ ಕೆ. ಪಿ. ಕಡಬ, ಪಂಚಾಯತ್ ಸದಸ್ಯ ಕಾರ್ಮಿಕ ನಾಯಕ ಶಿವಶಂಕರ್, ಅಶ್ರಫ್ ಸಾಹುಕಾರ್, ಮಹೇಶ್ ಬೆಳ್ಳಾರಕರ್, ಭರತ್ ಕುಕ್ಕುಜಡ್ಕ, ಮಂಜುನಾಥ ಮಡ್ತಿಲ, ಪ್ರಮೀಳಾ ಪೆಲ್ತಡ್ಕ, ಫಿಲೋಮಿನಾ ಕ್ರಾಸ್ತಾ, ಮನೋಜ್ ಬಿಳಿಮಲೆ, ಸಾಮಾಜಿಕ ಕಾರ್ಯಕರ್ತೆ ರೆಬೆಕ್ಕಾ, ಮಾರ್ ಇವಾನಿಯೋಸ್ ಕಾಲೇಜು ಕುಂತೂರು ಇದರ ಸಹಾಯಕ ಪ್ರಾಧ್ಯಾಪಕಿ ಉಷಾ ಎಂ. ಎಲ್., ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜು ವಿದ್ಯಾರ್ಥಿ ನಾಯಕ ಡ್ಯಾನಿ ದಿನೇಶ್ ಎಲ್ಲರನ್ನು ಸ್ವಾಗತಿಸಿದರು. ಜೋಮೋನ್ ಅಕಾಡೆಮಿಯ ಮುಖ್ಯಸ್ಥ ಜೋಮೋನ್ ಕಡಬ ಸಭೆಯಲ್ಲಿದ್ದವರಿಗೆ ಸಂವಿಧಾನ ಪೀಠಿಕೆಯ ಪ್ರಮಾಣ ಬೋಧಿಸಿದರು. ಕೊನೆಯಲ್ಲಿ ವಿದ್ಯಾರ್ಥಿ ಮಹಮ್ಮದ್ ಸವಾದ್ ವಂದಿಸಿದರು.
ಪ್ರಜಾಧ್ವನಿಯ ಪದಾಧಿಕಾರಿ ಲುಕಾಸ್ ಟಿ. ಐ. ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಸಾಹುಕಾರ್, ಭರತ್ ಕುಕ್ಕುಜಡ್ಕ, ಮಹೇಶ್ ಬೆಳ್ಳಾರಕರ್ ಇವರುಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಿರ್ವಹಣೆಯಲ್ಲಿ, ಕಾರ್ಯಕ್ರಮದ ವಿಡಿಯೋ ಚಿತ್ರೀಕರಣದಲ್ಲಿ ಮತ್ತು ಛಾಯಾಗ್ರಹಣದಲ್ಲಿ ಸಹಕರಿಸಿದರು.






