ವಿದ್ಯಾಭ್ಯಾಸ ಎಂದರೆ ಕೇವಲ ಪುಸ್ತಕದ ಓದುವುದಲ್ಲ; ಬದಲಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದು ಘಟನೆಯಲ್ಲೂ ಅಡಗಿಕೊಂಡಿರುವ ರಾಜಕೀಯವನ್ನು ಅರಿಯುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ಆಗ ಮಾತ್ರ ಓದು ಅರ್ಥವತ್ತಾಗುತ್ತದೆ ಎಂದು ಇತಿಹಾಸ ತಜ್ಞ, ಸಾಹಿತಿ, ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊಫೆಸರ್ ನಿತ್ಯಾನಂದ ಬಿ ಶೆಟ್ಟಿ ಅಭಿಪ್ರಾಯಪಟ್ಟರು.
ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ‘ಸಮಕಾಲೀನ ವಿದ್ಯಮಾನಗಳು ಮತ್ತು ಯುವಜನತೆ’ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಭಗವದ್ಗೀತೆ, ಬೈಬಲ್, ಕುರ್ಆನ್ ಇತ್ಯಾದಿ ಧರ್ಮ ಗ್ರಂಥಗಳನ್ನು ಎಷ್ಟು ನಿಷ್ಠೆಯಿಂದ ಓದುತ್ತೇವೆಯೋ, ಅದೇ ನಿಷ್ಠೆಯೊಂದಿಗೆ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ನಮ್ಮೆಲ್ಲರ ಬದುಕು ಅತ್ಯಂತ ಸ್ಪಷ್ಟವಾದ ಸಾಮರಸ್ಯ ಹೊಂದಿದ ಬದುಕಾಗುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದ ಒಲವನ್ನು ಲೋಕಜ್ಞಾನದ ಪುಸ್ತಕಗಳನ್ನು ಓದುವ ಮೂಲಕ ಬೆಳೆಸಿಕೊಳ್ಳಬೇಕು” ಎಂದು ಪ್ರೇರೇಪಿಸಿದರು.
ತದನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಾಯಿತು. ವಿಚಾರ ಶಕ್ತಿಯೇ ಮನುಷ್ಯನ ನಿಜವಾದ ಆಸ್ತಿ ಎಂಬುದನ್ನು ಈ ಉಪನ್ಯಾಸ ಕಾರ್ಯಕ್ರಮ ಸಾಬೀತುಪಡಿಸಿತು.
ಇದನ್ನೂ ಓದಿ: ದಕ್ಷಿಣ ಕನ್ನಡ | ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ; ಹಿಂದು ಜಾಗರಣ ವೇದಿಕೆ ನಾಯಕ ಸಮಿತ್ ವಿರುದ್ಧ ಎಫ್‌ಐಆರ್
ಇತ್ತೀಚೆಗೆ ಬಿಡುಗಡೆಗೊಂಡ ಶೆಟ್ಟಿ ಅವರು ʼಅಳವು ಅರಿಯದ ಭಾಷೆ- ಕಲೆ, ಸಮಾಜ,ಇತಿಹಾಸʼ ಎಂಬ ಬೃಹತ್ ಅಧ್ಯಯನಾತ್ಮಕ ಕೃತಿಯನ್ನು ಕಾಲೇಜು ಲೈಬ್ರರಿಗೆ ಉಡುಗೊರೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್, ಖಜಾಂಜಿ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ ಡಿ , ಕನ್ನಡ ಸಂಘದ ಪದಾಧಿಕಾರಿ ರೇಷ್ಮಾ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳಾದ ಅಮರ್ ಮತ್ತು ಧನುಷ್, ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.





