“ನಮ್ಮ ದೇಶ ಪ್ರಜಾಪ್ರಭುತ್ವ ದೇಶ. ಇಲ್ಲಿ ಜನಪ್ರತಿನಿಧಿಗಳು ಆಯ್ಕೆಯಾಗುವುದು ಜನಗಳ ವೋಟಿನ ಆಧಾರದ ಮೇಲೆ. ಹಾಗಾಗಿ, ಹಿಂದೂಗಳ ವೋಟು ಹೆಚ್ಚಾಗಲು ಹಿಂದೂ ಹೆಣ್ಮಕ್ಕಳು ಮೂರಕ್ಕಿಂತ ಕಡಿಮೆ ಹೆರಬಾರದು. ಹಿಂದೂಗಳ ಮನೆಯಲ್ಲಿ ವೋಟಿನ ಸಂಖ್ಯೆ ಕಡಿಮೆ ಆಗಬಾರದು. ಈ ಬಗ್ಗೆ ಹಿಂದೂ ದಂಪತಿಗಳು ನಿರ್ಣಯ ಮಾಡಿಕೊಳ್ಳಬೇಕು” ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಪ್ರತಿನಿಧಿಸುವ ಮಂಗಳೂರು(ಉಳ್ಳಾಲ) ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಭಾಕರ್ ಭಟ್, “ಉಳ್ಳಾಲದಲ್ಲಿ ಹಿಂದೂ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿನ ಬ್ಯಾರಿ(ಕರಾವಳಿಯ ಮುಸ್ಲಿಮರು)ಗಳ ಮನೆಯಲ್ಲಿ ಆರರಿಂದ ಏಳು ಮಕ್ಕಳಿದ್ದಾರೆ. ಅಲ್ಲಾನ ಹೆಸರಿನಲ್ಲಿ ಅವರು ಮಕ್ಕಳು ಮಾಡುತ್ತಲೇ ಇದ್ದಾರೆ. ಹಿಂದೂಗಳಲ್ಲಿ ವೋಟಿಲ್ಲದ ಕಾರಣ ನಮ್ಮವರು ಸೋಲುತ್ತಿದ್ದಾರೆ. ಉಳ್ಳಾಲದಲ್ಲಿ ಕೇವಲ 90 ಸಾವಿರ ಹಿಂದೂಗಳ ವೋಟಿದೆ. ಆದರೆ, ಒಂದು ಲಕ್ಷದ 10 ಸಾವಿರ ಬ್ಯಾರಿಗಳೇ ಇದ್ದಾರೆ. ಹಾಗಾಗಿ, ಖಾದರ್ ಗೆಲ್ಲುತ್ತಲೇ ಇದ್ದಾರೆ. ಹಾಗಾಗಿ, ಹಿಂದೂಗಳು ಮಕ್ಕಳು ಮಾಡಬೇಕು” ಎಂದು ಕರೆ ನೀಡಿದ್ದಾರೆ.
“ಹಿಂದೂಗಳನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡುವ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಹಿಂದೂ ದಂಪತಿಗಳು ಮದುವೆಯಾಗಿ ಏಳೆಂಟು ವರ್ಷವಾದರೂ ಮಕ್ಕಳನ್ನು ಹೆರುವುದಿಲ್ಲ. ಹಿಂದೂ ಸಮಾಜ ಉಳಿಯಬೇಕೂಂತಾದರೆ ಹಿಂದೂಗಳು ಮಕ್ಕಳು ಮಾಡುವುದಕ್ಕೆ ಹಿಂದೆ-ಮುಂದೆ ಯೋಚಿಸಬಾರದು. ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕಾದರೆ ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು. ಹಿಂದೂಗಳ ಸಂಖ್ಯೆ ಉಳಿಯಬೇಕಾದರೆ ಹಿಂದೂ ಹೆಣ್ಣು ಮಕ್ಕಳು ಮೂರಕ್ಕಿಂತ ಕಡಿಮೆ ಹೆರಬಾರದು. ಇದನ್ನು ನಿರ್ಣಯವಾಗಿ ಮಾಡಿಕೊಂಡು, ಬ್ಯಾರ್ದಿಗಳಿಗಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ಇದೆಲ್ಲವನ್ನೂ ಯೋಜನೆ ಹಾಕಿಕೊಂಡು ಹಿಂದೂಗಳು ಬದುಕಬೇಕಾದ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.





