ಮಂಗಳೂರು – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿ ತಟದಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮೂರ್ತಿ ನಿರ್ಮಿಸಿರುವುದಲ್ಲದೆ, ಇಲ್ಲಿನ ಬಂಡಸಾಲೆಯಿಂದ – ಕಾರಮೊಗರು ಮತ್ತು ವನಭೋಜನದಿಂದ – ಬರ್ಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
“ಮೂಳೂರು ಗ್ರಾಮದ ಫಲ್ಗುಣಿ ನದಿ ತಟದಲ್ಲಿರುವ ಸರ್ವೇ ನಂಬರ್ 94/1ರಲ್ಲಿ ಇರುವ 80.76 ಸೆಂಟ್ಸ್ ಸರಕಾರಿ ಜಾಗವನ್ನು ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರು ಒತ್ತುವರಿ ಮಾಡಿ ಮಹಾಕಾಳೇಶ್ವರನ ಮೂರ್ತಿ ನಿರ್ಮಿಸಿದ್ದಾರೆ. ಅಲ್ಲದೆ ಫಲ್ಗುಣಿ ನದಿ ತಟದಲ್ಲಿ ಅಕ್ರಮವಾಗಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ಹಿಂದೆ ಪ್ರವಾಸಿಗರನ್ನು ಸೆಳೆದು ಆದಾಯ ಗಳಿಸುವ ಉದ್ದೇಶ ಅಡಗಿದೆ ಹೊರತು ಯಾವುದೇ ಭಕ್ತಿ ಶ್ರದ್ಧೆ ಇಲ್ಲ” ಎಂದು ಗ್ರಾಮಸ್ಥರು ದೂರಿದ್ದಾರೆ.
“ಮೂರ್ತಿ ನಿರ್ಮಿಸಿರುವ ಸರಕಾರಿ ಜಾಗದ ಪಕ್ಕದಲ್ಲೇ ದುರ್ಗಾ ಪ್ರಸಾದ್ ಶೆಟ್ಟಿಗೆ ಸೇರಿದ ಖಾಸಗಿ ಜಾಗ ಇದ್ದು, ಅದರಲ್ಲಿ ಅಥಿತಿ ಗೃಹ, ಸ್ನಾನ ಗೃಹ, ಪಾಕ್ ಸಹಿತ ಪ್ರವಾಸೋದ್ಯಮಕ್ಕೆ ಬೇಕಾದ ಕಟ್ಟಡ ಮತ್ತು ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅದರಲ್ಲಿ 22 ಅಡಿ ಎತ್ತರದ ಪೀಠ ಮತ್ತು ಅದರ ಮೇಲೆ 23 ಅಡಿ ಎತ್ತರದ ಮಹಾಕಾಲೇಶ್ವರನ ಮೂರ್ತಿ ನಿರ್ಮಿಸಿದ್ದಾರೆ. ಈ ಮೂರ್ತಿ ದಕ್ಷಿಣ ಭಾರತದಲ್ಲೇ ಅತೀ ಎತ್ತರದ ಏಕಶಿಲಾ ಮೂರ್ತಿ ಎಂದು ಪ್ರಚಾರ ಪಡಿಸಲಾಗುತ್ತಿದೆ. ಅಲ್ಲದೆ ಮೇ 15ರಿಂದ 17ರವರೆಗೆ ಅದರ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗಿದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

“ಮೂರ್ತಿ ನಿರ್ಮಿಸಿರುವ ಜಾಗ ಸರಕಾರಿ ಪೊರಂಬೋಕು ಜಾಗವಾಗಿದ್ದು ಅದರಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಮಂಗಳೂರು ಸಹಾಯಕ ಆಯುಕ್ತರ ಆದೇಶದ ಪ್ರತಿ ನಮ್ಮಲ್ಲಿ ಇದೆ. ಆದರೂ ಆ ಜಾಗದಲ್ಲಿ ಮೂರ್ತಿ ನಿರ್ಮಾಣ ಮಾಡಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ. ದುರ್ಗಾ ಪ್ರಸಾದ್ ಶೆಟ್ಟಿ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳು ಯಾವುದೇ ಕ್ರಮ ಜರಗಿಸದಂತೆ ತಡೆಯುತ್ತಿದ್ದಾರೆ” ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
“ತನ್ನ ಪ್ರವಾಸೋದ್ಯಮದ ದೃಷ್ಟಿಯಿಂದ ಗುರುಪುರ ಗ್ರಾಮದ ಬಂಡಸಾಲೆಯಿಂದ ಗುರುಪುರ ನದಿ ತಟದ ಕಾರಮೊಗರಿಗೆ ಸಂಪರ್ಕ ಕಲ್ಪಿಸುವ ಮತ್ತು ಗ್ರಾಮದ ವನಭೋಜನದಿಂದ ಬರ್ಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಾ ದುರ್ಗಾ ಪ್ರಸಾದ್ ಶೆಟ್ಟಿ ಅಕ್ರಮವಾಗಿ ಬಂದ್ ಮಾಡಿದ್ದಾರೆ. ಈ ಎರಡೂ ರಸ್ತೆ ಕೂಡಾ ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯಾಗಿದೆ. ರಸ್ತೆಗೆ ಕಾಂಕ್ರೆಟ್ ತಡೆಗೋಡೆ ನಿರ್ಮಿಸಿ ಮುಚ್ಚಲಾಗಿದೆ. ಇದರಿಂದ ಈ ಭಾಗದ 30ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ” ಎಂದು ಜನರು ತಮ್ಮ ಅಳಲನ್ನು ತಿಳಿಸಿದ್ದಾರೆ.
“ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮೂರ್ತಿ ನಿರ್ಮಿಸಿರುವುದಲ್ಲದೆ, ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವುದರಿಂದ ಆ ಪ್ರದೇಶದ ಜನರು ಗ್ರಾಮದ ಮುಖ್ಯ ರಸ್ತೆಗೆ ದೂರದ ಕಾಲು ದಾರಿಯಲ್ಲಿ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ದಾರಿಯಿಂದ ಸಾಗುವುದು ಕಷ್ಟಕರವಾಗಿದೆ. ಈ ಅನ್ಯಾಯದ ವಿರುದ್ಧ ಮಾತನಾಡುವವರನ್ನು ಬೆದರಿಸಲಾಗುತ್ತಿದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
“ಸರಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಮೂರ್ತಿ ನಿರ್ಮಾಣ ಮಾಡಿರುವ ಬಗ್ಗೆ ಮತ್ತು ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ಗ್ರಾಮಸ್ಥರು ಮನವಿ ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದೇವೆ. ಆದರೆ ಯಾವುದೇ ಅಧಿಕಾರಿ ನಮ್ಮ ಮನವಿಗೆ ಸ್ಪಂದಿಸಿಲ್ಲ. ರಾಜಕೀಯ ಪ್ರಭಾವ ಇರುವುದರಿಂದ ಅಧಿಕಾರಿಗಳು ಮೌನವಾಗಿದ್ದಾರೆ. ಹೀಗಾದರೆ ನಮಗೆ ನ್ಯಾಯ ನೀಡುವವರು ಯಾರು?” ಎಂದು ಗ್ರಾಮಸ್ಥರು ಖೇದ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರಿಗೆ ಬದುಕುವ ಹಕ್ಕು ಇಲ್ಲವೇ?
ನಾವು ಮತ್ತು ನಮ್ಮ ಹಿರಿಯರು ದೈನಂದಿನ ಜೀವನಕ್ಕೆ ಉಪಯೋಗಿಸುತ್ತಿದ್ದ ಸರಕಾರಿ ರಸ್ತೆಯನ್ನು ಊರಿನ ದುರ್ಗಾ ಪ್ರಶಾದ್ ಶೆಟ್ಟಿ ಎಂಬವರು ಕಾಂಕ್ರೆಟ್ ತಡೆಗೋಡೆ ನಿರ್ಮಿಸಿ ಬಂದ್ ಮಾಡಿದ್ದಾರೆ. ನಮಗೆ ಸಂಚರಿಸಲು 9 ತಿಂಗಳಿಂದ ಸರಿಯಾದ ರಸ್ತೆ ಇಲ್ಲದಾಗಿದೆ. ನದಿ ಬದಿ, ತೋಟಗಳ ಮೂಲಕ ಕಾಲು ದಾರಿಯಿಂದ ಸಂಚರಿಸಿ ಮುಖ್ಯ ರಸ್ತೆಯನ್ನು ಸೇರುವ ಪರಿಸ್ಥಿತಿ ಇದೆ. ರಸ್ತೆ ಬಂದ್ ಮಾಡಿರುವುದರಿಂದ ಇಲ್ಲಿನ ಹಲವು ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದು, ನ್ಯಾಯ ಒದಗಿಸುವಂತೆ ಆಗ್ರಹಿಸಿ ಗ್ರಾಮ, ತಾಲೂಕು, ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಯಾವ ಅಧಿಕಾರಿಯಿಂದಲೂ ನ್ಯಾಯ ಸಿಗುತ್ತಿಲ್ಲ. ಸರಕಾರದ ಅನುದಾನದಲ್ಲಿ ಅಭಿವೃದ್ಧಿಗೊಂಡ ಕಾಂಕ್ರಿಟ್ ರಸ್ತೆಯನ್ನೇ ಬಂದ್ ಮಾಡಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದರೆ ಏನು ಅರ್ಥ? ಇದರ ವಿರುದ್ಧ ಮಾತನಾಡುವವರನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ. ಹೀಗಾದರೆ ಸಾಮಾನ್ಯ ಜನರಿಗೆ ಬದುಕುವ ಹಕ್ಕು ಇಲ್ಲವೇ? ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಕೂಡಲೇ ತೆರವು ಮಾಡಿ ನಮಗೆ ನ್ಯಾಯ ಒದಗಿಸಬೇಕು.
-ಹೇಮಾ, ಗ್ರಾಮದ ಸಂತ್ರಸ್ತ ಮಹಿಳೆ
ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ
ಸರಕಾರದ ಅನುದಾನದಲ್ಲಿ ಅಭಿವೃದ್ಧಿಗೊಂಡ ಎರಡು ರಸ್ತೆಯನ್ನು ಹಣ ಮತ್ತು ರಾಜಕೀಯ ಬಲವನ್ನು ಬಳಸಿ ದುರ್ಗಾ ಪ್ರಸಾದ್ ಶೆಟ್ಟಿ ಬಂದ್ ಮಾಡಿದ್ದಾರೆ. ಇದರಿಂದ ಇಲ್ಲಿನ ಹಲವು ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಸರಕಾರಿ ಜಾಗದಲ್ಲಿ ಬಡವನೊಬ್ಬ ಗುಡಿಸಲು ನಿರ್ಮಿಸಿದರೆ ತೆರವು ಮಾಡುವ ಅಧಿಕಾರಿಗಳು, ಒಂದು ಎಕರೆಯಷ್ಟು ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಬಂದ್ ಮಾಡಿರುವುದನ್ನು ತೆರವು ಮಾಡಬೇಕು, ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ.
-ಪ್ರೀತಂ, ಸ್ಥಳೀಯ ನಿವಾಸಿ





