ಸ್ವಾತಂತ್ರ್ಯ ಹೋರಾಟದ ಸಮಯದಲ್ಲಾದ ಕಾರ್ಮಿಕ ಚಳವಳಿಗಳು ಬ್ರಿಟೀಷರ ವಿರುದ್ಧ ಪ್ರಬಲ ಹೋರಾಟ, ತ್ಯಾಗ ಬಲಿದಾನದ ಪರಂಪರೆಯಿಂದಾಗಿ ಕಾರ್ಮಿಕ ಕಾನೂನುಗಳು ಅಸ್ತಿತ್ವಕ್ಕೆ ಬಂದಿದೆ. ಸಂವಿಧಾನದಲ್ಲಿ ಕೂಡಾ ಈ ಎಲ್ಲಾ ಆಶಯಗಳು ಪ್ರತಿಫಲನಗೊಂಡಿದೆ. ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ಸೂತ್ರಗಳು ಕಾರ್ಮಿಕ ಹೋರಾಟದ ಬಳುವಳಿಗಳು. ಆದರೆ ದೇಶವನ್ನಾಳುವ ಕೇಂದ್ರ ಸರ್ಕಾರ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಕಾರ್ಮಿಕ ಕಾನೂನುಗಳನ್ನು ಬಲಿತೆಗೆದುಕೊಂಡಿದೆ ಎಂದು CITU ದ.ಕ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಹೇಳಿದರು.
ಕಾರ್ಮಿಕ ಸಂಹಿತೆಗಳ ವಿರುದ್ದ ಮೂಡುಬಿದ್ರೆಯಿಂದ ಮಂಗಳೂರಿಗೆ ಸಂಚರಿಸಲಿರುವ ಪಾದಯಾತ್ರೆಯನ್ನು ಉದ್ಘಾಟಿಸುತ್ತಾ ಮಾತನಾಡಿದ ಅವರು, “1990ರಲ್ಲಿ ಕಾಂಗ್ರೆಸ್ ಸರಕಾರ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳನ್ನು ಜಾರಿಗೆ ತಂದು ಖಾಸಗೀಕರಣ ನೀತಿಗೆ ನಾಂದಿ ಹಾಡಿತು. ಈಗಿನ ನರೇಂದ್ರ ಮೋದಿ ಸರಕಾರ ಸರಕಾರಿ ಬಂಡವಾಳ, ಸಾರ್ವತ್ರಿಕ ರಂಗಗಳು, ವಿಮಾರಂಗ ಎಲ್ಲವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದೆ. ಕಾರ್ಪೊರೇಟ್ ಸಂಸ್ಥೆಗಳಿಗಾಗಿ ದೇಶದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಸಂಹಿತೆಗಳನ್ನಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಿದೆ. ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ. ಸಾಮಾಜಿಕ ಭದ್ರತೆ ಕನಸಿನ ಮಾತಾಗುತ್ತಿದೆ. 147 ಕೋಟಿ ಜನಸಂಖ್ಯೆಯ ಭಾರತದಲ್ಲಿ ಬಹುತೇಕ ಕಾರ್ಮಿಕ ವರ್ಗ ಶೇ.93 ಅಸಂಘಟಿತ ಕಾರ್ಮಿಕರು ಮತ್ತು ಶೇ.7 ಸಂಘಟಿತ ಕಾರ್ಮಿಕರಿದ್ದಾರೆ” ಎಂದರು.

“ಗುತ್ತಿಗೆ ಕಾರ್ಮಿಕ ಪದ್ದತಿಯಿಂದ ಕಾನೂನು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಕಾರ್ಮಿಕರ ಪ್ರಬಲ ವಿರೋಧದ ಮದ್ಯೆ ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುವ ಸರಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಕೇರಳ ರಾಜ್ಯ ಸರಕಾರ ಪರ್ಯಾಯ ಕಾರ್ಯಕ್ರಮವನ್ನು ಸಂಹಿತೆಗಳ ವಿರುದ್ಧ ನೀಡಿದೆ. ಆದರೆ ಸಿಧ್ಧರಾಮಯ್ಯ ಸರಕಾರ ಬಿಜೆಪಿ ಕೇಂದ್ರ ಸರಕಾರದ ನೀತಿಗಳ ಪರವಾಗಿ ನಿಯಮಾಳಿಯ ಕರಡು ತಯಾರಿಸಿದೆ. ಇದು ತೀರಾ ಅನ್ಯಾಯ. ಫೆಬ್ರವರಿ 12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಎಲ್ಲಾ ವಿಭಾಗದ ಜನತೆ ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದರು.
ಇದನ್ನೂ ಓದಿ: ಮಂಗಳೂರು | ಮನರೇಗಾ ಸ್ವರೂಪ ಬದಲಾವಣೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ರೈತ ಸಂಘದ ಜಿಲ್ಲಾಧ್ಯಕ್ಷ ಕೆ ಯಾದವ ಶೆಟ್ಟಿ ಮಾತನಾಡಿ, “ಕೇಂದ್ರ ಸರಕಾರ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ನಾಶಗೈಯುತ್ತಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳ್ಳುತ್ತಿದೆ. ಬೀಜ ನೀತಿ ರೈತರಿಗೆ ಮಾರಕವಾಗಿದೆ” ಎಂದು ಹೇಳಿದರು.
ಉದ್ಘಾಟಕರಾದ ವಸಂತ ಆಚಾರಿಯವರು ಜಾಥಾ ತಂಡದ ನಾಯಕರಾದ ರಾಧಾ ಮತ್ತು ನೋಣಯ ಗೌಡರಿಗೆ ಕೆಂಬಾವುಟವನ್ನು ಹಸ್ತಾಂತರಿಸಿದರು. ಪಾದಯಾತ್ರೆಯ ನೇತ್ರತ್ವವನ್ನು CITU ಮುಂದಾಳುಗಳಾದ ಸದಾಶಿವದಾಸ್, ಗಿರಿಜ, ಶಂಕರ, ವಸಂತಿ, ಭವ್ಯ ಮುಚ್ಚೂರು, ಲಕ್ಷ್ಮಿ, ಕೃಷ್ಣಪ್ಪ, ಹೊನ್ನಯ್ಯ, ಬಾಬು ಪೂಜಾರಿ, ಕೃಷ್ಣಪ್ಪ ಪೂಜಾರಿ, ಬೇಬಿ, ಪದ್ಮಾವತಿ, ಲತಾ, ರಕ್ಷಾ ಹಾಗೂ ಇನ್ನಿತರರು ವಹಿಸಿದ್ದರು.
ರಾಧಾ ಮೂಡುಬಿದ್ರೆ
CITU ಜಿಲ್ಲಾ ಉಪಾಧ್ಯಕ್ಷರು





