ಕೇಂದ್ರ ಸರ್ಕಾರ ಪ್ರಮುಖ 29 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬಿತ್ತನೆಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆಬ್ರವರಿ 12ರಂದು ರೈತ ಕಾರ್ಮಿಕರ ನೇತ್ರತ್ವದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜನವರಿ 26ರಿಂದ 29ರವರೆಗೆ 4 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದು, “ಇಂದು ಬೆಳಿಗ್ಗೆ ಬೆಳ್ತಂಗಡಿಯಿಂದ ಹೊರಟಿರುವ ಪಾದಯಾತ್ರೆಯನ್ನು ಜಿಲ್ಲೆಯ ಹಿರಿಯ ರೈತ ಕಾರ್ಮಿಕ ನಾಯಕ ಕೆ ಯಾದವ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದ್ದು, ಅಧ್ಯಕ್ಷತೆಯನ್ನು CITU ದ.ಕ.ಜಿಲ್ಲಾಧ್ಯಕ್ಷ ಬಿ ಎಂ ಭಟ್ ಅವರು ವಹಿಸಲಿದ್ದಾರೆ. ಜಾಥಾ ತಂಡದ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಈಶ್ವರಿ ಪದ್ಮುಂಜ, ಜಯಶ್ರೀ, ದೇವಕಿ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಮೆ, ಉದಯ ಬಂಟ್ವಾಳ, ಧನಂಜಯ ಗೌಡ ಅವರು ವಹಿಸಿದ್ದಾರೆ” ಎಂದು ಹೇಳಿದರು.
ಜನವರಿ 27ರಂದು ಮೂಡಬಿದ್ರೆಯಿಂದ ಹೊರಡಲಿರುವ ಪಾದಯಾತ್ರೆಯನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಉದ್ಘಾಟಿಸಲಿದ್ದಾರೆ. ಜಾಥಾ ತಂಡದ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ ಹಾಗೂ ನೋಣಯ್ಯ ಗೌಡರವರು ವಹಿಸಲಿದ್ದಾರೆಂದು ತಿಳಿಸಿದರು.
ಜನವರಿ 28ರಂದು ಮುಲ್ಕಿಯಿಂದ ಹೊರಡುವ ಪಾದಯಾತ್ರೆಯನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಉದ್ಘಾಟಿಸಿದರೆ, ತಲಪಾಡಿಯಿಂದ ಹೊರಡುವ ಪಾದಯಾತ್ರೆಯನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಮುಲ್ಕಿ ಪಾದಯಾತ್ರೆಯ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಬಿ ಕೆ ಇಮ್ತಿಯಾಜ್, ರವಿಚಂದ್ರ ಕೊಂಚಾಡಿ, ಜಯಲಕ್ಷ್ಮಿ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ತಯ್ಯುಬ್ ಬೆಂಗರೆ, ಶ್ರೀನಾಥ್ ಕಾಟಿಪಳ್ಳ, ಸಾಧಿಕ್ ಮುಲ್ಕಿಯವರು ವಹಿಸಿದರೆ, ತಲಪಾಡಿ ಪಾದಯಾತ್ರೆಯ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ರೋಹಿದಾಸ್ ಭಟ್ನಗರ, ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು, ರಮೇಶ್ ಉಳ್ಳಾಲ ಅವರು ವಹಿಸಲಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮತದಾನ ನಮ್ಮ ಹಕ್ಕು, ಹೆಮ್ಮೆ, ಗೌರವದ ಸಂಕೇತ; ಅದು ಮಾರಾಟಕ್ಕಲ್ಲ: ಸಿಇಓ ಭುವನೇಶ ಪಾಟೀಲ
ಜನವರಿ 29ರ ಬೆಳಿಗ್ಗೆ 10ಕ್ಕೆ 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದ್ದು,ಬಳಿಕ ಕಾರ್ಮಿಕರ ಬೃಹತ್ ಮೆರವಣಿಗೆ ಸಾಗಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಬಹಿರಂಗ ಸಭೆ ಜರುಗಲಿದೆ. ಸಮಾರೋಪ ಭಾಷಣವನ್ನು ಸಿಐಟಿಯು ಕರ್ನಾಟಕ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಅವರು ನಡೆಸಲಿದ್ದಾರೆ ಎಂದು ಹೇಳಿದರು.
ಕಾರ್ಮಿಕ ಸಂಹಿತೆಗಳಿಂದ ದುಡಿಯುವ ವರ್ಗದ ಮೇಲಾಗಿರುವ ಅಪಾಯಗಳನ್ನು ಜನತೆಗೆ ವಿವರಿಸಲು ಜಿಲ್ಲಾದ್ಯಂತ ಆಯೋಜಿಸಲಾದ 4 ಪಾದಯಾತ್ರೆಗಳನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪರವಾಗಿ ಕರೆ ನೀಡಿದರು.





