ಜಾರ್ಖಂಡ್‌ನಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಬಾಂಗ್ಲಾದೇಶಿಗನೆಂದು ಆರೋಪಿಸಿ ಆತನ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ನಡೆದಿದೆ.
ಘಟನೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಪತ್ರಿಕಾ ಹೇಳಿಕೆ ನೀಡಿದ್ದು, “ಹಲ್ಲೆಗೊಳಗಾದ ಕಾರ್ಮಿಕನ ಹೆಸರು ದಿಲ್ಜಾನ್ ಅನ್ಸಾರಿ. ಇವರು ಕಳೆದ 10-15 ವರ್ಷಗಳಿಂದ ಮಂಗಳೂರಿನಲ್ಲಿ ಪ್ರತಿ ವರ್ಷ 4-6 ತಿಂಗಳು ಕೆಲಸ ಮಾಡುತ್ತಿದ್ದರು. ಇದೀಗ ಆರೋಪಿಗಳು ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಿ, ವಿವಿಧ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಕೆಲವು ಅನಾವಶ್ಯಕ ಮತ್ತು ಅಪಹಾಸ್ಯದ ಟೀಕೆಗಳನ್ನು ಮಾಡಿದ್ದಾರೆ. ದಿಲ್ಜಾನ್ ಅನ್ಸಾರಿ ಅವರು ಬಾಂಗ್ಲಾದೇಶಿ ಅಲ್ಲವೆಂದು ಹೇಳಿದಾಗ, ಆರೋಪಿಗಳು ಅವರ ತಲೆಗೆ ಹೊಡೆದು ದಾಳಿ ಮಾಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ” ಎಂದು ಹೇಳಿದ್ದಾರೆ.
“ಸ್ಥಳೀಯ ಹಿಂದೂ ಮಹಿಳೆಯೊಬ್ಬರು ಬಂದು ಅವರನ್ನು ರಕ್ಷಿಸಿದ್ದಾರೆ. ವಲಸೆ ಕಾರ್ಮಿಕನಾಗಿದ್ದರಿಂದ ಭಯದಿಂದ ದಿಲ್ಜಾನ್ ಅನ್ಸಾರಿ ದೂರು ನೀಡದೆ ಮನೆಗೆ ತೆರಳಿದ್ದರು. ನಂತರ ಸ್ಥಳೀಯ ನಾಯಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದಾಗ ದಿಲ್ಜಾನ್ ಅನ್ಸಾರಿ ಭಾರತೀಯರಾಗಿದ್ದು, ಕೆಲಸಕ್ಕಾಗಿ ಇಲ್ಲಿಗೆ ಬಂದಿರುವುದು ದೃಢಪಟ್ಟಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಎಸ್‌ಐಆರ್ ನೆಪದಲ್ಲಿ ಮುಸ್ಲಿಂ ಮತದಾರರ ಹೊರಗುಳಿವು; ರಾಜಕೀಯ ದುರುದ್ದೇಶ ಆರೋಪ – ಶಿವಸುಂದರ
ಈ ಘಟನೆಗೆ ಸಂಬಂಧಿಸಿ ಬಿಎನ್ಎಸ್ ಕಾಯ್ದೆಯಡಿ 126(2), 109, 352, 351(3),353, 118(1) r/w 3(5) ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ಮತ್ತು ಮೋಹನ್ ಎಂದು ಗುರುತಿಸಲಾಗಿದ್ದು, ಅವರನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಲಾಗಿದೆ” ಎಂದು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ದ್ವೇಷ, ಅಪಪ್ರಚಾರ ಮತ್ತು ಅಜ್ಞಾನದಿಂದ ಉಂಟಾಗುತ್ತಿವೆ. ಸ್ಥಳೀಯರ ಸಹಾಯ ಮತ್ತು ಪೊಲೀಸ್ ಇಲಾಖೆಯ ತ್ವರಿತ ಕ್ರಮದಿಂದ ಮಾತ್ರ ಇಂತಹ ದುರಂತಗಳನ್ನು ತಡೆಗಟ್ಟಬಹುದು.





