ಪುತ್ತೂರಿನ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷ ಜಗನ್ನಿವಾಸ ರಾವ್ ಪುತ್ರ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ವಂಚಿಸಿ, ಗರ್ಭವತಿಯಾಗಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರು ಈಗ ಕೈತೊಳೆದುಕೊಂಡಿದ್ದಾರೆ.
ಜಗನ್ನಿವಾಸ ರಾವ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂಬ ಹೇಳಿಕೆಯನ್ನು ಕೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, “ರಾವ್ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಯುವತಿಗೆ ನ್ಯಾಯ ಕೊಡಿಸುವ ಬಗ್ಗೆ ಬೇರೆ ದಾರಿ ಹುಡುಕಬೇಕಷ್ಟೇ” ಎಂದಿದ್ದಾರೆ.
ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ತನ್ನ ಸಹಪಾಠಿಯನ್ನು ಮದುವೆಯಾಗುವ ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಗರ್ಭವತಿಯಾಗುವಂತೆ ಮಾಡಿದ್ದ. ಗರ್ಭವತಿ ಎಂದು ತಿಳಿದ ಕೂಡಲೇ ಆಕೆಗೆ ಒತ್ತಡ ಹೇರಿ ಗರ್ಭಪಾತಕ್ಕೆ ಒತ್ತಾಯಿಸಿದ್ದ. ಆದರೆ, ಅದಾಗಲೇ ಏಳು ತಿಂಗಳು ತುಂಬಿದ್ದ ಕಾರಣ ಗರ್ಭಪಾತಕ್ಕೆ ವೈದ್ಯರು ನಿರಾಕರಿಸಿದ್ದರು. ಯುವತಿ 2025ರ ಜೂನ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಗರ್ಭಪಾತಕ್ಕೆ ನಿರಾಕರಿಸಿದ್ದ ಸಂತ್ರಸ್ತ ಯುವತಿಗೆ ಬಿಜೆಪಿಯ ಹಲವು ಮುಖಂಡರ ಮೂಲಕ ಮನವೊಲಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಅದಕ್ಕೆಲ್ಲ ಜಗ್ಗದ ಆಕೆ ನೇರವಾಗಿ ಕೃಷ್ಣ ರಾವ್ ಮದುವೆಯಾಗಲೇಬೇಕು ಎಂದು ಹೇಳಿದ್ದಳು. ಆಕೆ ಮತ್ತು ಆಕೆಯ ತಾಯಿ ಬಹಿರಂಗ ಹೇಳಿಕೆಗಳನ್ನು ಕೊಟ್ಟ ಹಿನ್ನೆಲೆಯಲ್ಲಿ ಮತ್ತು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ಕೊಟ್ಟ ಹಿನ್ನೆಲೆಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಪೊಲೀಸರು ಆರೋಪಿಯನ್ನು ಅತ್ಯಾಚಾರ ಮತ್ತು ವಂಚನೆ ಆರೋಪದಲ್ಲಿ ಬೆಂಗಳೂರಿನಲ್ಲಿ ಬಂಧಿಸಿ, ಜೈಲಿಗಟ್ಟಿದ್ದರು.
ಜಗನ್ನಿವಾಸ ರಾವ್ ಬಿಜೆಪಿ ಮುಖಂಡನಾಗಿರುವ ಕಾರಣ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೊದಲಾದವರು ಮಾತುಕತೆ ನೆಪದಲ್ಲಿ ಆರೋಪಿಯ ತಂದೆಗೆ ಒಂದಿಷ್ಟು ಸಮಯ ರಿಲೀಫ್ ಒದಗಿಸಿಕೊಟ್ಟಿದ್ದರು. ಇದೇ ಸಂದರ್ಭ ಆರೋಪಿ ತಂದೆ, ಮಗುವಿನ ಡಿಎನ್‌ಎ ಪರೀಕ್ಷೆ ಆಗಬೇಕು ಎಂದು ಒತ್ತಾಯಿಸಿ, ಯುವತಿಯ ಚಾರಿತ್ರ್ಯದ ಮೇಲೆ ಸಂಶಯ ವ್ಯಕ್ತಪಡಿಸಿದ್ದ. ಸಂತ್ರಸ್ತೆ ಅನ್ಯಜಾತಿಯವಳು ಎಂಬ ಕಾರಣಕ್ಕೆ ಆಕೆಯನ್ನು ದೂರವಿರಿಸಲು ಸಾಧ್ಯವಿದ್ದಷ್ಟು ಪ್ರಯತ್ನ ಮಾಡಿ, ಬಿಜೆಪಿ ಮುಖಂಡರ ಮೂಲಕ ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಯಾರೆಂದು ಸಾಬೀತಾದರೆ ಮನೆಗೆ ಕರೆಸಿಕೊಳ್ಳುವುದಾಗಿ ಜಗನ್ನಿವಾಸ ರಾವ್ ಇತರೇ ಬಿಜೆಪಿ ಮುಖಂಡರ ಜೊತೆಗೂಡಿ ಹೇಳಿಕೆ ನೀಡಿದ್ದರು.
ಯುವತಿಗೆ ನ್ಯಾಯ ಒದಸಿಕೊಡುವಂತೆ ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ರಾಜ್ಯ ಮಹಿಳಾ ಆಯೋಗ ಕೂಡಾ ಮಧ್ಯೆ ಪ್ರವೇಶಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಹೇಳಿಕೆ ನೀಡಿತ್ತು. ವಿಶ್ವಕರ್ಮ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿಯವರೂ ಪುತ್ತೂರಿಗೆ ಬಂದು ಯುವತಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿದ್ದು, ಡಿಎನ್‌ಎ ವರದಿ ಆಧಾರದಲ್ಲಿ ಮದುವೆ ಮಾಡಿಸುವುದಾಗಿ ಹೇಳಿದ್ದ ಜಗನ್ನಿವಾಸ ರಾವ್ ಮತ್ತು ಬಿಜೆಪಿ ಮುಖಂಡರ ಮಾತು ಕೇಳಿ ಸುಮ್ಮನಾಗಿದ್ದರು.
ಆದರೆ, ಮಗುವಿಗೆ ಆರು ತಿಂಗಳು ತುಂಬಿದರೂ ಮದುವೆ ವಿಚಾರದಲ್ಲಿ ಮುಂದೆ ಬಾರದ ಜಗನ್ನಿವಾಸ ಮೇಲೆ ಬಿಜೆಪಿ `ಕ್ರಮ’ ಕೈಗೊಳ್ಳುವ ಹೆಸರಿನಲ್ಲಿ ಯುವತಿಗೆ ನ್ಯಾಯ ವಂಚಿಸಿದೆ. ಇದೀಗ ವಿಚಾರ ತಣ್ಣಗಾಗಿದೆ ಎಂದು ಕೈತೊಳೆದು ಕೊಳ್ಳುವ ಪ್ರಯತ್ನ ಮಾಡಿರುವ ಬಿಜೆಪಿ, ತನ್ನ ಒಳಗುಟ್ಟನ್ನು ಜಗಜ್ಜಾಹೀರು ಮಾಡಿದೆ. ಬಿಜೆಪಿಯ ಮಹಿಳಾ ಮುಖಂಡರು ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಪುತ್ತೂರಿನವರೇ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಏನೂ ಮಾತನಾಡಿಲ್ಲ. ಮಹಿಳಾ ಮೋರ್ಚಾದ ಮುಖಂಡರುಗಳೂ ಸಂತ್ರಸ್ತೆಯ ವಿಚಾರವಾಗಿ ಮಾತನಾಡಲು ಸಿದ್ಧರಿಲ್ಲ. ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಕೃಷ್ಣಗೆ ಹೈಕೋರ್ಟ್ ನೀಡಿರುವ ಜಾಮೀನು ಹಲವು ಶರತ್ತುಗಳನ್ನು ಒಳಗೊಂಡಿದೆ. ಡಿಎನ್‌ಎ ಪರೀಕ್ಷೆ ಕೂಡಾ ಯುವತಿಯ ಹೇಳಿಕೆಯಂತೆ ಆರೋಪಿಯೇ ಮಗುವಿನ ತಂದೆ ಎಂದು ಸಾಬೀತಾಗಿದೆ. ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ದೂರಿನ ಆರೋಪ ಪಟ್ಟಿ ಇನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕಿದೆ.
ವರದಿ: ರಾಜೇಶ್ ಶೆಟ್ಟಿ ಬಿ





