ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಟ್ವೆಕಾಂಡೋ ಚಾಂಪಿಯನ್‌ಶಿಪ್–2026 (8ನೇ ಕೆಟಿಎ ಕಪ್)ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮೆರೆದಿದ್ದು, 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಫಾನ್ ರಹಮತುಲ್ಲಾ ಅಹ್ಮದ್ (ಸುರತ್ಕಲ್) ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಷ್ಣು ಇಡ್ಯಾ (ಸುರತ್ಕಲ್) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಫಾನ್ ರಹಮತುಲ್ಲಾ ಅಹ್ಮದ್ ಅವರು ರಹಮತುಲ್ಲಾ ಅಹ್ಮದ್-ಫಾತಿಮಾ ಫರ್ಝಾನಾ ದಂಪತಿಯ ಪುತ್ರರಾಗಿದ್ದು, ವಿಷ್ಣು ಅವರು ರವಿ–ಜ್ಯೋತಿ ದಂಪತಿಯ ಪುತ್ರರಾಗಿದ್ದಾರೆ.
15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಯಾನ್ ಅಹ್ಮದ್ (ಮಂಗಳೂರು) ಹಾಗೂ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅವಂತಿಕಾ ಎಸ್ (ಕುಳಾಯಿ–ಸುರತ್ಕಲ್) ಅವರು ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಮತ್ತಷ್ಟು ಗೌರವ ತಂದಿದ್ದಾರೆ. ಆಯಾನ್ ಅಹ್ಮದ್ ಅವರು ನಜೀಮ್ ಅಹ್ಮದ್–ಸುನೇನಾ ನಜೀಮ್ ಅವರ ಪುತ್ರರಾಗಿದ್ದು, ಅವಂತಿಕಾ ಅವರು ವಿನೋದ್ ಎಸ್–ಸುಮಾ ಕೆ ದಂಪತಿಯ ಪುತ್ರಿಯಾಗಿದ್ದಾರೆ.


ಇದನ್ನೂ ಓದಿ: ದಕ್ಷಿಣ ಕನ್ನಡ | ಸರ್ಕಾರ ಅಧಿಕೃತ ಕಸಾಯಿಖಾನೆಗೆ ಅನುಮತಿ ನೀಡಲು ಮುಸ್ಲಿಂ ಮುಖಂಡರ ಒತ್ತಾಯ


ಪ್ರತಿಷ್ಠಿತ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ಯುವ ಕ್ರೀಡಾಪಟುಗಳು ಭಾಗವಹಿಸಿ, ವಿವಿಧ ಜಿ4 ವಿಭಾಗಗಳಲ್ಲಿ ಪೈಪೋಟಿ ನಡೆಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟು ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಟ್ವೆಕಾಂಡೋ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತುದಾರ ಇಶಾಕ್ ಇಸ್ಮಾಯಿಲ್ ನಂದಾವರ ತರಬೇತಿ ನೀಡಿದ್ದು, ಅವರ ಪತ್ನಿ ದಕ್ಷಿಣ ಕನ್ನಡ ಟ್ವೆಕಾಂಡೋ ತಂಡದ ಫಿಸಿಯೋಥೆರಪಿಸ್ಟ್ ಡಾ. ಫಾತಿಮಾ ಭಾಷಿಯಾ (ಪಿಟಿ) ದೈಹಿಕ ಬೆಂಬಲ ಒದಗಿಸಿದ್ದಾರೆ. ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸುರತ್ಕಲ್ ಎಕ್ಸ್ ಟ್ರೀಮ್ ಫಿಟ್ ಅಂಡ್ ಫೈಟ್ ಕ್ಲಬ್ ತರಬೇತಿ ಹಾಗೂ ತಾಂತ್ರಿಕ ಬೆಂಬಲ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಸಾಧನೆಗೆ ಕ್ರೀಡಾಭಿಮಾನಿಗಳಿಂದ ಹಾಗೂ ಕ್ರೀಡಾ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.





