ಕಾಡುಗಳಲ್ಲಿ ಆಹಾರ ಮತ್ತು ನೆಮ್ಮದಿ ಕಳೆದುಕೊಂಡ ವನ್ಯಜೀವಿಗಳು ನಾಡಿನತ್ತ ಮುಖ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಳ್ಯದಲ್ಲಿ ಕಾಡಾನೆಗಳ ಹಾವಳಿ, ಬೆಳ್ತಂಗಡಿಯಲ್ಲಿ ಚಿರತೆ ಹಾಗೂ ಮಂಗಗಳ ಉಪಟಳ, ಪುತ್ತೂರು–ಬಂಟ್ವಾಳ ಭಾಗದಲ್ಲಿ ಕಾಡುಕೋಣಗಳ ಸಂಚಾರ ಕೃಷಿ ಹಾಗೂ ಮಾನವ ಸುರಕ್ಷೆಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಮನೆಬಿಟ್ಟು ಹೊರಡುವುದಕ್ಕೂ ಭಯ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಆತಂಕಪಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲಾಖೆ ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಳ್ಯ ತಾಲೂಕು ಭಾಗದಲ್ಲಿ ಕಾಡಾನೆಗಳ ಹಾವಳಿಯಾದರೆ, ಬೆಳ್ತಂಗಡಿ ತಾಲೂಕಿನಲ್ಲಿ ಮೊದಲೇ ಇರುವ ಮಂಗಗಳ ಉಪಟಳದ ಜೊತೆಗೆ ಚಿರತೆಗಳ ಸವಾರಿ ಆರಂಭವಾಗಿದೆ. ಪುತ್ತೂರು ಮತ್ತು ಬಂಟ್ವಾಳ ತಾಲೂಕುಗಳ ಭಾಗದಲ್ಲಿ ಕಾಡುಕೋಣಗಳ ಸಂಚಾರ ಜನರ ಭೀತಿಗೆ ಕಾರಣವಾಗಿದೆ. ಕಾಡುಬಿಟ್ಟು ನಾಡಿಗೆ ಬರುತ್ತಿರುವ ಪ್ರಾಣಿಗಳು ಕೃಷಿಗೆ ಅಪಾರ ಹಾನಿ ಮಾಡುತ್ತಿವೆ.

ಗ್ರಾಮಾಂತರ ಪ್ರದೇಶಗಳ ವೃದ್ಧರು, ಮಹಿಳೆಯರು, ಮಕ್ಕಳು ಮನೆ ಬಿಟ್ಟು ತೆರಳುವಂತಿಲ್ಲ. ಹಾಗೇನಾದರೂ ಅವಶ್ಯಕತೆಗೆ ಮನೆಯಿಂದ ಹೊರಟರೆ, ಸಂಜೆಗೂ ಮೊದಲು ಇಲ್ಲವೇ ಸಹಾಯ ಪಡೆಯಲೇಬೇಕಾಗುತ್ತಿದೆ. ಶಾಲೆಗೆ ಕಳುಹಿಸಿದ ಮಕ್ಕಳು ವಾಪಾಸ್ ಮನೆ ತಲುಪುವವರೆಗೆ ಮನೆಯವರಿಗೆ ಹೃದಯಗಟ್ಟಿ ಹಿಡಿದು ಕೂರಬೇಕಾದ ಪರಿಸ್ಥಿತಿ ಬಂದೊದಗಿದೆ. ಮೊಬೈಲ್ ಫೋನ್ ನೆಟ್ವರ್ಕ್ ಕಡಿಮೆಯಾದರೂ ಆಗೊಮ್ಮೆ ಈಗೊಮ್ಮೆ ಬರುವ ವಾಟ್ಸಾಪ್ ಸಂದೇಶಗಳು, ಚಿರತೆ, ಕಾಡುಕೋಣ, ಕಾಡಾನೆಗಳ ಸಂಚಾರದ ಬಗ್ಗೆ ‘ಅಂತೆ-ಕಂತೆ’ ಸುದ್ದಿಯನ್ನೇ ಹರಡುತ್ತಿವೆ.
ಬೆಳ್ತಂಗಡಿ ತಾಲೂಕು ಚಾರ್ಮಾಡಿಯ ಓಬಯ್ಯ ಮಾತನಾಡುತ್ತಾ, “ಅಲ್ಲಿ ಚಿರತೆ ಬಂತು, ಇಲ್ಲಿ ಬಂತು ಎನ್ನುವುದನ್ನು ಕೇಳುವಾಗ ನಮಗೆ ಭಯ ಆರಂಭವಾಗುತ್ತದೆ. ದೈನಂದಿನ ಕೂಲಿ ಕೆಲಸಕ್ಕೂ ಹೋಗಲಾಗುವುದಿಲ್ಲ. ಮಕ್ಕಳು ಶಾಲೆಗೆ ಹೋದರೆ ಏನಾದರೂ ಅಪಾಯ ಆಗಬಹುದು ಎನ್ನುವ ಭಯ ಇನ್ನೊಂದೆಡೆ. ದಿಡುಪೆ ಎಂಬಲ್ಲಿ ಚಿರತೆಗಳು ಕಾಣಿಸಿಕೊಂಡಿರುವುದು ಸದ್ಯದ ಮಾಹಿತಿ. ಅವು ಇನ್ನು ಎಷ್ಟು ಜನರನ್ನು ಬಲಿ ಪಡೆದುಕೊಳ್ಳುತ್ತಾವೋ ಗೊತ್ತಿಲ್ಲ” ಎನ್ನುತ್ತಾರೆ.

ಮುಂಡಾಜೆಯ ಕೃಷಿಕ ಜಯಾನಂದ ನಾಯ್ಕ, “ಪ್ರತೀ ವರ್ಷ ಒಂದಲ್ಲ ಒಂದು ಕಾಡುಪ್ರಾಣಿಗಳ ಹಾವಳಿ ಇದ್ದೇ ಇರುತ್ತದೆ. ಕಳೆದ ವರ್ಷ ಆನೆಗಳ ಹಾವಳಿ, ಈ ವರ್ಷ ಚಿರತೆ ಹಾವಳಿ, ಇನ್ನು ಮಂಗಗಳ ಕಿರುಕುಳ ಇದ್ದದ್ದೇ. ನಾವೀಗ ಕೃಷಿ ಮಾಡುತ್ತಿರುವುದು ಪ್ರಾಣಿಗಳ ದಾಳಿಯಿಂದ ಉಳಿದರೆ ನಾವು ತಿಂದೇವು, ಎನ್ನುವ ಭರವಸೆಯಿಂದ. ರಕ್ಷಿತಾರಣ್ಯದಿಂದ ಈ ಪ್ರಾಣಿಗಳು ಬರುತ್ತಿವೆ. ಅಲ್ಲಿ ಅವುಗಳಿಗೆ ಆಹಾರ ಸಿಗದೇ, ನಾಡಿಗೆ ಆಹಾರ ಹುಡುಕಿ ಬರುತ್ತವೆ. ಸದ್ಯ ಅರಣ್ಯ ಸಂರಕ್ಷಕ ಅಧಿಕಾರಿಗಳು ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು” ಎಂದರು.
ಪುತ್ತೂರು ಆರ್ಯಾಪು ನಿವಾಸಿ ಮಹಾಬಲೇಶ್ವರ ಪ್ರಸನ್ನ ತನ್ನ ತೋಟಕ್ಕೆ ಕಾಡು ಕೋಣ ಲಗ್ಗೆ ಇಟ್ಟಿರುವ ಬಗ್ಗೆ ವಿವರಿಸುತ್ತಾ, “ತೋಟದಲ್ಲಿ ನೀರಾವರಿಗಾಗಿ ಅಳವಡಿಸಿದ ಪೈಪ್ ಗಳನ್ನು ಕಾಡು ಕೋಣ ಒಡೆದು ಹಾಕಿದೆ. ಸಣ್ಣ ಅಡಿಕೆ, ತೆಂಗು ಗಿಡಗಳನ್ನು ತಿಂದಿವೆ. ಇದೆಲ್ಲಾ ದೊಡ್ಡ ನಷ್ಟ. ಇನ್ನು ಜನಸಂಚಾರ ಬಹಳ ಕಷ್ಟ. ಊರಿನಲ್ಲಿ ಸಾಕಿದ ಕೋಣಗಳೇ ತಿವಿದರೆ ಪ್ರಾಣಪಾಯಕ್ಕೆ ಕಾರಣವಾಗುತ್ತದೆ. ಇನ್ನು ಕಾಡು ಕೋಣಗಳ ತಿವಿತ ಹೇಗಿರಬಹುದು ಎಂದು ಚಿಂತಿಸಲು ಕೂಡಾ ಸಾಧ್ಯವಿಲ್ಲ” ಎಂದು ಆತಂಕಿತರಾದರು.
ಸುಳ್ಯದ ಮಾವಾಜಿ ನಿವಾಸಿ ಪ್ರಶಾಂತ್, ಕಾಡಾನೆ ಹಾವಳಿ ಬಗ್ಗೆ ಹೇಳುತ್ತಾ, “ಸುಳ್ಯಕ್ಕೂ ಕಾಡಾನೆಗಳಿಗೂ ಅವಿನಾಭಾವ ಸಂಬಂಧವಿದೆ. ಸರಕಾರದಿಂದ ಕಣ್ಣೊರೆಸುವ ತಂತ್ರಗಳು ಮಾತ್ರ ನಡೆದಿವೆ. ಕೃಷಿಗೆ ಆಗುತ್ತಿರುವ ತೊಂದರೆ ಮತ್ತು ಜನಜೀವನಕ್ಕೆ ಆಗುತ್ತಿರುವ ತೊಂದರೆಗಳು ಯಾರಿಗೂ ಗೊತ್ತಾಗುತ್ತಿಲ್ಲ. ಸುಳ್ಯ ಎಂದರೆ ಕಾಡಾನೆಗಳ ತಾಲೂಕು ಎಂದು ಕಳೆದ ಕೆಲವು ವರ್ಷಗಳಿಂದ ಹೆಸರಾಗಿದೆ. ಈ ಊರಿಗೆ ದೂರದ ಸಂಬಂಧಿಕರು ಬರಲು ಹೆದರುತ್ತಾರೆ. ಸರಕಾರ ಸಮಸ್ಯೆಯ ಮೂಲ ಹುಡುಕುವ ಬದಲಿಗೆ ಡಿಜಿಟಲ್ ತಂತ್ರ ಜ್ಞಾನ, ಮೊಬೈಲ್ ಆಪ್ ಎನ್ನುವ ಹಾಸ್ಯಾಸ್ಪದ ಕಾರ್ಯಕ್ರಮ ನಡೆಸಿದೆ” ಎನ್ನುತ್ತಾರವರು.

ಸಮಸ್ಯೆಯ ಮೂಲವೆಲ್ಲಿ?:
ಸುಳ್ಯಕ್ಕೆ ಕೇರಳದ ಕಡೆಯಿಂದ ಆನೆಗಳು ಬರುತ್ತವೆ. ಇದಕ್ಕೆ ಕೇರಳದ ಕಾಡುಗಳಲ್ಲಿ ಮಾನವ ಹಸ್ತಕ್ಷೇಪ ಕಾರಣ ಎನ್ನಲಾಗುತ್ತದೆ. ಬೆಳ್ತಂಗಡಿಯಲ್ಲಿನ ರಕ್ಷಿತಾರಣ್ಯಗಳಲ್ಲಿ ಬೇಟೆ ಹೆಚ್ಚಾಗಿದೆ. ಹಾಗೆಯೇ ಮರಗಳ್ಳರು ಪ್ರಾಣಿಗಳ ಜೀವನಕ್ಕೆ ತೊಂದರೆ ಕೊಡುತ್ತಾರೆ ಎನ್ನುವ ದೂರುಗಳಿವೆ. ಬಂಟ್ವಾಳ, ಪುತ್ತೂರು ಕಾಡುಗಳಲ್ಲಿ ಕೂಡಾ ಕಾಡುಗಳ್ಳರು ಮರಕೊಯ್ಯುವ ಯಂತ್ರ ಬಳಸಿ ಪ್ರಾಣಿಗಳಿಗೆ ತೊಂದರೆ ಕೊಡುವ ಬಗ್ಗೆ ಮಾಹಿತಿ ಇದೆ. ಹಾಗೆಯೇ ಪ್ರಾಣಿ ಬೇಟೆ ಕೂಡಾ ಕ್ರೂರ ಪ್ರಾಣಿಗಳನ್ನು ನಾಡಿಗೆ ಬರುವಂತೆ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
“ಇದರಲ್ಲಿ ಪ್ರವಾಸಿಗರ ಕುಕೃತ್ಯಗಳೂ ಸೇರಿವೆ. ಬಹುತೇಕ ಮಂದಿ ಪ್ರವಾಸಿಗರು ಚಿಕ್ಕಮಗಳೂರು ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಬರುವವರು. ಇವರೆಲ್ಲಾ ಚಾರ್ಮಾಡಿ ಘಾಟ್ ಮೂಲಕ ಬರುತ್ತಾರೆ. ಘಾಟಿಯ ತಳದಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುವಾಗ ಧೂಮಪಾನ ಮಾಡಿ ಬೆಂಕಿ ಕಡ್ಡಿ ಎಸೆದು ಅಥವಾ ಅಡುಗೆ ಮಾಡಿ ಕಾಡಿನ ಪಕ್ಕದಲ್ಲಿ ಬೆಂಕಿ ಹರಡುವಂತ ದುಷ್ಕೃತ್ಯ ಎಸಗುತ್ತಾರೆ. ಜನವರಿ ಆರಂಭದಲ್ಲಿ ಇಂಥದ್ದೇ ಒಂದು ಘಟನೆಯಿಂದ ಕಾಡಿನ ಭಾಗಕ್ಕೆ ಬೆಂಕಿ ಬಿದ್ದು, ಹೆದ್ದಾರಿಯಲ್ಲಿ ಹೆಬ್ಬಾವುಗಳು ಮತ್ತು ನಾಗರಹಾವುಗಳು ಕಂಡು ಬಂದಿದ್ದವು. ಕಾಡಲ್ಲಿ ಬೆಂಕಿ ಕಂಡರೆ ಪ್ರಾಣಿಗಳೂ ಭಯಗೊಂಡು ಓಡುತ್ತವೆ. ಹೀಗೆ ಅವು ನಾಡಿಗೂ ದಾರಿ ತಪ್ಪಿ ಬರುತ್ತವೆ” ಎನ್ನುತ್ತಾರೆ ನಿವೃತ್ತ ವನಪಾಲಕ ಜೋಸ್ ಜಾರ್ಜ್.

ಅರಣ್ಯ ಇಲಾಖೆ ಮಾಡಬೇಕಾಗಿರುವುದೇನು?:
ಬೆಳ್ತಂಗಡಿಯ ನಿವೃತ್ತ ಶಿಕ್ಷಕ ಜಿ ಕೆ ಪಠವರ್ಧನ್ ಹೇಳುವಂತೆ, “ಅರಣ್ಯ ಇಲಾಖೆ ಕೇವಲ ಮರ ಸಾಗಣೆ ತಡೆಯಲೋ ಅಥವಾ ಬೇರೆ ಉದ್ದೇಶಕ್ಕಾಗಿ ರಸ್ತೆ ಬದಿ ಸಿಬ್ಬಂದಿ ನಿಯೋಜನೆ ಮಾಡುತ್ತದೆ. ಅರಣ್ಯ ಸಂರಕ್ಷಣೆಯಲ್ಲಿ ಪ್ರಾಣಿಗಳ ಬಗ್ಗೆಯೂ ಗಮನಹರಿಸಬೇಕು ಎಂದು ಅರಣ್ಯ ಸಚಿವರು, ಅಧಿಕಾರಿಗಳು ತಿಳಿದುಕೊಂಡಿಲ್ಲದಂತೆ ಕಾಣುತ್ತದೆ. ಕಾಡಿನಲ್ಲಿ ಉಂಟಾಗುವ ಸಮಸ್ಯೆಗಳು, ಪ್ರಾಣಿಗಳ ಆಹಾರ ಅಲಭ್ಯತೆ ಕುರಿತು ಅಗತ್ಯವಾಗಿ ತಿಳಿಯಬೇಕು. ಕಾಡಿನ ಪಕ್ಕದ ಊರುಗಳಲ್ಲಿನ ಮಾನವ ಚಟುವಟಿಕೆಗಳಿಂದ ಸಾಮಾನ್ಯವಾಗಿ ಪರಿಸರ ಅಸಮತೋಲನ ಉಂಟಾಗುತ್ತದೆ. ಈ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕು. ಉದಾಹರಣೆಗೆ, ಹುಲಿಗಳು ನಾಡಿಗೆ ಬರದಂತೆ ಕಾಡಿನಲ್ಲಿ ಜಿಂಕೆಗಳ ಸಂತತಿ ಹೆಚ್ಚಿಸುವುದಿದೆ. ಹಾಗೆಯೇ ಮಳೆ ನೀರು ಸಂಗ್ರಹಣೆಯಾಗಲು ವ್ಯವಸ್ಥೆ ಮಾಡಿ, ಪ್ರಾಣಿಗಳಿಗೆ ವರ್ಷ ಪೂರ್ತಿ ಕುಡಿಯಲು ನೀರು ಸಿಗುವ ಹಾಗೆ ಮಾಡುವ ವ್ಯವಸ್ಥೆ ಇದೆ. ಅದನ್ನೆಲ್ಲ ಕೈಗೆತ್ತಿಕೊಳ್ಳುವ ಇಚ್ಛಾಶಕ್ತಿ ಇರುವ ಅಧಿಕಾರಿಗಳು ಬೇಕು” ಎಂದವರು ಒತ್ತಾಯಿಸುತ್ತಾರೆ.
ಇದನ್ನೂ ಓದಿ: ಮಂಗಳೂರು | ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ: ಬಿ ಕೆ ಇಮ್ತಿಯಾಜ್ ಆಗ್ರಹ
ಕಾಡು ಮತ್ತು ನಾಡಿನ ನಡುವಿನ ಅಸಮತೋಲನದ ಪರಿಣಾಮ ಇಂದು ವನ್ಯಜೀವಿ-ಮಾನವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಮಸ್ಯೆಗೆ ತಾತ್ಕಾಲಿಕ ತಂತ್ರಜ್ಞಾನ ಪರಿಹಾರಗಳಲ್ಲ, ಬದಲಿಗೆ ಕಾಡಿನೊಳಗಿನ ಪರಿಸರ ಪುನರ್‌ಸ್ಥಾಪನೆ, ಆಹಾರ–ನೀರು ವ್ಯವಸ್ಥೆ, ಅಕ್ರಮ ಬೇಟೆ ಮತ್ತು ಮರಕಳ್ಳತನದ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಾಗಿದೆ. ಜನರ ಭಯ, ಕೃಷಿಕರ ನಷ್ಟ ಮತ್ತು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಹಾಗೂ ಸರಕಾರ ತಕ್ಷಣ ಸಮಗ್ರ, ವೈಜ್ಞಾನಿಕ ಮತ್ತು ಮಾನವೀಯ ಪರಿಹಾರಗಳನ್ನು ಜಾರಿಗೊಳಿಸದಿದ್ದರೆ, ಈ ಸಂಘರ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಣಹಾನಿ ಮತ್ತು ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ.





