ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಗೆ ದಶಕ ಪೂರೈಸಿದ ಹಿನ್ನೆಲೆಯಲ್ಲಿ, ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತಿರುವ ಕುಟುಂಬಕ್ಕೆ ಬೆಂಬಲ ಸೂಚಿಸಲು ಭಾನುವಾರ ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, “ನನಗೆ ವಿನಾಯಕ ಬಾಳಿಗಾರ ಪರಿಚಯ ಇರಲಿಲ್ಲ. ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ಆದರೆ ಅವರ ಸಾವಿಗೆ ನ್ಯಾಯ ಕೇಳಲು ನಾನು ಕಾಂಗ್ರೆಸ್ಸಿಗನಾಗಿ ಬಂದಿದ್ದೇನೆ” ಎಂದು ಹೇಳಿದರು.
“ನಾನು ಆರ್‌ಎಸ್‌ಎಸ್‌ನ ಕಟ್ಟಾ ವಿರೋಧಿ. ಆದರೂ ಹಿಂದುತ್ವದ ಹೋರಾಟಗಾರನಿಗೆ ನ್ಯಾಯದ ಪರವಾಗಿ ನಿಲ್ಲುತ್ತಿದ್ದೇನೆ. ಇದನ್ನು ಕೆಲವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ಆದರೆ ನಾನು ಹೆದರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ವಿನಾಯಕ ಬಾಳಿಗಾ ಕುಟುಂಬಕ್ಕೆ ನ್ಯಾಯ ದೊರಕಬೇಕು. ಅಗತ್ಯವಿದ್ದರೆ ಉತ್ತಮ ವಕೀಲರನ್ನು ಒದಗಿಸಲು ಸಹ ತಾನು ಸಿದ್ಧನಿದ್ದೇನೆ ಎಂದು ಅವರು ಭರವಸೆ ನೀಡಿದರು.
ಬಾಳಿಗಾ ಅವರು ಸಮಾಜದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಪಡಿಸಿದ್ದಕ್ಕಾಗಿ ಕೊಲೆಗೀಡಾದರು. ವೆಂಕಟರಮಣ ದೇವಸ್ಥಾನದ ಅವ್ಯವಹಾರವನ್ನು ಪ್ರಶ್ನಿಸಿದ್ದೇ ಅವರ ಸಾವಿಗೆ ಕಾರಣವೆಂದು ಆರೋಪಿಸಿದರು.
ಪ್ರಕರಣದಲ್ಲಿ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಅಧ್ಯಕ್ಷ ಮಂಗಲ್ಪಾಡಿ ನರೇಶ್ ಶೆಣೈ ಎಂಬುದನ್ನು ಉಲ್ಲೇಖಿಸಿ, “ಮಂಗಳೂರಿನ ಎಲ್ಲ ಜಾತಿ-ಧರ್ಮದ ಜನರು ನ್ಯಾಯ ಕೇಳುತ್ತಿರುವಾಗ ಬಿಜೆಪಿ ನಾಯಕರು ಮೌನವಾಗಿರುವುದು ಯಾಕೆ?” ಎಂದು ಪ್ರಶ್ನಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಪ್ರಕರಣವನ್ನು ಮುಚ್ಚಿಹಾಕಲು ಯತ್ನ ನಡೆದಿತ್ತು. ಜನಪರ ಸಂಘಟನೆಗಳು ಹೋರಾಟ ಮಾಡದಿದ್ದರೆ ಸತ್ಯ ಹೊರಬರುತ್ತಿರಲಿಲ್ಲ” ಎಂದು ಆರೋಪಿಸಿದರು.

ಹಿರಿಯ ವಿಜ್ಞಾನಿ ಪ್ರೊ. ನರೇಂದ್ರ ನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಇದಕ್ಕೂ ಮುನ್ನ ವೆಂಕಟರಮಣ ದೇವಸ್ಥಾನದಿಂದ ವಿನಾಯಕ ಬಾಳಿಗಾ ನಿವಾಸದವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಬಾಳಿಗಾ ಕುಟುಂಬದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





