ಚಾಮರಾಜನಗರ | ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆ, ಜಾತಿ ನಿಂದನೆ: 17 ಮಂದಿ ವಿರುದ್ಧ ಕೇಸ್ ದಾಖಲು

Date:

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ವೀರಭದ್ರೇಶ್ವರ ದೇವಸ್ಥಾನಕ್ಕೆ ದಲಿತ ಸಮುದಾಯದವರ ಪ್ರವೇಶ ನಿರಾಕರಿಸಿರುವ ಸವರ್ಣೀಯರೆಂಬ ಕೊಳಕು ಮನಸ್ಥಿತಿಯವರು, ಜಾತಿ ನಿಂದನೆ ಮಾಡಿ ಸಂವಿಧಾನ ಬಾಹಿರವಾಗಿ ನಡೆದುಕೊಂಡಿರುವುದಾಗಿ ಆರೋಪಿಸಿ ನೀಡಿದ್ದ ದೂರಿನನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ಎಸ್‌ಸಿ/ಎಸ್‌ಟಿ ಜಾತಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ದಾಖಲಾಗಿದೆ.

“ವೀರನಪುರ ಗ್ರಾಮದಲ್ಲಿ ಸರಿ ಸುಮಾರು 150 ಲಿಂಗಾಯತ ಕುಟುಂಬಗಳು, 80 ದಲಿತ ಕುಟುಂಬಗಳು, 15 ಕುರುಬ, 10 ವಿಶ್ವಕರ್ಮ, 6 ಉಪ್ಪಾರ ಹಾಗೂ 4 ಮಡಿವಾಳ ಕುಟುಂಬಗಳು ವಾಸಿಸುತ್ತಿವೆ. ಸದರಿ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ವೀರಭದ್ರಸ್ವಾಮಿ ದೇವಸ್ಥಾನ, ಸಿದ್ದಪ್ಪಾಜಿ ದೇವಸ್ಥಾನ(ನೆಲೆಸಮಗೊಳಿಸಲಾಗಿದೆ), ಮಾರಮ್ಮನ ದೇವಸ್ಥಾನಕ್ಕೆ ಸವರ್ಣೀಯರೆಂಬ ನೀಚ ಮನಸ್ಥಿತಿಯವರು ಈವರೆಗೂ ದಲಿತರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ” ಎಂಬುದು ಸ್ಥಳೀಯರ ಆರೋಪವಾಗಿದೆ.

ಇದೇ ಅಕ್ಟೋಬರ್‌ 05ರಂದು ದಲಿತ ಸಮುದಾಯದವರ ಗಮನಕ್ಕೆ ತರದೇ, ಇನ್ನುಳಿದೆಲ್ಲ ಜನಾಂಗದವರನ್ನು ಒಳಗೊಂಡು ಏಕಾಏಕಿ ಸಿದ್ದಪ್ಪಾಜಿ ದೇವಸ್ಥಾನ ನೆಲಸಮಗೊಳಿಸಿದ್ದಾರೆ. ಈ ವಿಚಾರವಾಗಿ ದಲಿತರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದ್ದು, ಸವರ್ಣೀಯರು ದಲಿತರನ್ನು ಅವಾಚ್ಯವಾಗಿ, ಸಂವಿಧಾನ ಬಾಹಿರವಾಗಿ ನಿಂದಿಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಗ್ರಾಮದಲ್ಲಿ ಈವರೆಗೂ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ಕೊಟ್ಟಿಲ್ಲ, ನಾವುಗಳು ಈವರೆಗೂ ದೇವಸ್ಥಾನಕ್ಕೆ ಹೋಗಿಲ್ಲ. ನಮ್ಮ ಹಿರಿಯರಿಂದ ಹಿಡಿದು ನಮ್ಮಗಳವರೆಗೂ ನಾವು ದೇವಸ್ಥಾನದ ಒಳಗೆ ಹೋಗಿಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಎಲ್ಲರಿಗೂ ಸಂಬಂಧಿಸಿದ್ದು. ಹಾಗಾಗಿ ನಮಗೂ ಪ್ರವೇಶಿಸಲು ಅವಕಾಶ ಇರುವುದರಿಂದ ಇದನ್ನು ಪ್ರಶ್ನಿಸಲಾಗಿದೆ” ಎಂಬುದು ದಲಿತರ ಪ್ರತಿಕ್ರಿಯೆ.

ದೇವಸ್ಥಾನ ಪ್ರವೇಶ ನಿರಾಕರಣೆ ವಿಚಾರವಾಗಿ ಸಮಸ್ಯೆ ಉಲ್ಬಣಗೊಂಡಾಗ ಅಕ್ಟೋಬರ್‌ 14ರಂದು ಗ್ರಾಮಸ್ಥರು ಮತ್ತು ಯಜಮಾನರ ಹೆಸರಿನಲ್ಲಿ, ದಲಿತ ಸಮುದಾಯದವರ 38 ಮಂದಿ ಸಹಿಯುಳ್ಳ ಪತ್ರದೊಂದಿಗೆ ಗಲಾಟೆ, ನಿಂದನೆ ನಡೆಸಿದವರ ಮಾಹಿತಿಯೊಡನೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಪ ವಿಭಾಗಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್ ಸೇರಿದಂತೆ ಸಬಂಧಪಟ್ಟವರಿಗೆ ದೂರು ನೀಡಿ ಸ್ವಿಕೃತಿ ಪಡೆದಿದ್ದಾರೆ.

ಸದರಿ ದೂರಿನಲ್ಲಿ ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ, ಗಲಾಟೆ, ಜಾತಿನಿಂದನೆ ಜತೆಗೆ ಸಾಮಾಜಿಕ ಬಹಿಷ್ಕಾರ ಕುರಿತಾಗಿಯೂ ಉಲ್ಲೆಖವಾಗಿದೆ. ಗ್ರಾಮದಲ್ಲಿ ಸವರ್ಣೀಯರು ದಲಿತರನ್ನು ಮಾತನಾಡಿಸುವಂತಿಲ್ಲ, ಕೆಲಸಕ್ಕೆ ಕರೆಯುವಂತಿಲ್ಲ, ಅಂಗಡಿ ಮುಂಗಟ್ಟುಗಳಲ್ಲಿ ಯಾವುದೇ ಆಹಾರ ಪದಾರ್ಥ ಕೊಡುವಂತಿಲ್ಲ ಎನ್ನುವಂತಹ ಗಂಭೀರ ಆರೋಪವಿದೆ.

ಮುಜರಾಯಿ ಇಲಾಖೆಯ ದೇವಸ್ಥಾನಕ್ಕೆ ಒಳಪಟ್ಟಂತೆ ಸರ್ವೇ ನಂಬರ್ 243, 244 ಮತ್ತು 235ರಲ್ಲಿ ಒಟ್ಟು 14 ಎಕರೆ 27 ಗುಂಟೆ ಜಮೀನಿದೆ. ಈ ಗ್ರಾಮದಲ್ಲಿ ದಲಿತರಿಗೆ ಒಂದಷ್ಟು ಭೂಮಿಯೂ ಇಲ್ಲ. ಎಲ್ಲರೂ ಸವರ್ಣೀಯರ ಜಮೀನಿಗೆ ಕೂಲಿ ಮಾಡಲು ಹೋಗುವವರೆ. ಅಂದಿನಿಂದ ಇಂದಿನವರೆಗೂ ಅಷ್ಟೂ ಜಮೀನು ಲಿಂಗಾಯತ ಸಮುದಾಯದವರ ಹಿಡಿತದಲ್ಲಿದ್ದು, ಅವರೇ ಅನುಭವಿಸಿಕೊಂಡು ಬರುತ್ತಿದ್ದಾರೆ.

2020-21ನೇ ಸಾಲಿನಲ್ಲಿ ಜಿಲ್ಲಾಧಿಕಾರಿಯವರ ಸೂಚನೆ ಅನುಸಾರ, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಜಮೀನು ಹರಾಜು ಪ್ರಕ್ರಿಯೆಗೆ ಬಂದು ದಲಿತ ಸಮುದಯದವರ ಗಮನಕ್ಕೆ ತಾರದೆ, ಯಾರನ್ನೂ ಕರೆಯದೆ ಹರಾಜು ಪ್ರಕ್ರಿಯೆ ನಡೆಯದಂತೆ ಮಾಡಿ ಸವರ್ಣೀಯರು ಮರಳಿ ಕಳಿಸಿದ್ದಾರೆಂಬುದು ದೂರಿನ ಸಾರಾಂಶ.

ಸದರಿ ದೂರಿನಲ್ಲಿ ದೇವಸ್ಥಾನಕ್ಕೆ ದಲಿತರ ಪ್ರವೇಶ, ದೇವಸ್ಥಾದ ಜಮೀನು ಹರಾಜು ಪ್ರಕ್ರಿಯೆ ನಡೆಯಬೇಕು, ಮೌಖಿಕವಾಗಿ ಹೇರಲಾಗಿರುವ ಬಹಿಷ್ಕಾರ ತೆರವುಗೊಳಿಸಬೇಕು ಎಂದು ಉಲ್ಲೇಖಸಲಾಗಿದೆ.

ದೂರಿನನ್ವಯ ಸದರಿ ಗ್ರಾಮದಲ್ಲಿ ತಹಶೀಲ್ದಾರ್ ತನ್ಮಯ್, ಸಬ್ ಇನ್‌ಸ್ಪೆಕ್ಟರ್‌ ಮೋಹಿತ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಅವರುಗಳ ನೇತೃತ್ವದಲ್ಲಿ ಶಾಂತಿಸಭೆ ನಡೆದಿದೆ. ಸಭೆಯಲ್ಲಿ ಸಂಧಾನಕ್ಕೆ ಸವರ್ಣೀಯರು ಒಪ್ಪದೇ, ಅನ್ಯೋನ್ಯತೆಗೆ ಒಪ್ಪದೇ ದೂರುದಾರರ ಮೇಲೆಲ್ಲ ಗಲಾಟೆ ಮಾಡಿ ನಿಂದಿಸಿದ್ದಾರೆ, ಬೆದರಿಕೆ ಒಡ್ಡಿದ್ದಾರೆ ಎಂದು ದಲಿತ ಸಮುದಾಯದ ಶಿವಕುಮಾರ್ ಎಂಬುವರು ದೂರು ನೀಡಲು ಮುಂದಾಗಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಶಿವಕುಮಾರ್‌ ನೀಡಿದ ದೂರು ಸ್ವೀಕರಿಸದೇ ಇದ್ದಾಗ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಅಧೀಕ್ಷಕರು ಕರ್ತವ್ಯ ನಿಮಿತ್ತ ಹೊರಗಿರುವುದು ತಿಳಿದು ಮನೆಗೆ ಮರಳಿದ್ದಾರೆ. ಅಕ್ಟೋಬರ್ 18‌ರಂದು ಏಕಾಂಗಿಯಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಾಬಾ ಸಾಹೇಬರ ಫೋಟೋ ಹಿಡಿದು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೆಲ್ಲ ಗಮನಿಸಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಪೊಲೀಸರು ಏನೆಂದು ವಿಚಾರಿಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದಾರೆ. ದೂರುದಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡದೆ ಇರುವುದರ ಬಗ್ಗೆ ತಿಳಿಸಿದಾಗ, ಜಿಲ್ಲಾಧಿಕಾರಿಯವರ ಸೂಚನೆ ಅನುಸಾರ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅಂದೇ ಜಾತಿ ದೌರ್ಜನ್ಯ ತಡೆ(ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ.

ದೂರುದಾರ ಶಿವಕುಮಾರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಊರಿನ ದೇವಸ್ಥಾನಕ್ಕೆ ಪ್ರವೇಶ ನೀಡಲು ದಲಿತರಿಗೆ ಅವಕಾಶ ಮಾಡಿಲ್ಲ. ಹಾಗೆಯೇ, ದೇವಸ್ಥಾನಕ್ಕೆ ಸೇರಿದ ಜಮೀನು ಹರಾಜು ಪ್ರಕ್ರಿಯೆ ಮಾಡಬೇಕು ಎನ್ನುವುದು ನಮ್ಮ ಮನವಿ. ಇದನ್ನು ಒಪ್ಪದ ಸವರ್ಣೀಯ ಗ್ರಾಮ ಪಂಚಾಯಿತಿ ಸದಸ್ಯ ಗುರುಪ್ರಸಾದ್ ಹಾಗೂ ಇತರರು ಜಾತಿನಿಂದನೆ ಮಾಡಿದ್ದಲ್ಲದೆ ನಮ್ಮ ವಿರುದ್ಧ ಗಲಾಟೆ, ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“ಶಾಂತಿಸಭೆ ಸಂದರ್ಭದಲ್ಲಿಯೂ ಅಧಿಕಾರಿಗಳ ಮುಂದೆಯೇ ಗುಂಪುಗಟ್ಟಿ ನನ್ನ ಮೇಲೆ ಮುಗಿಬೀಳುತ್ತಿದ್ದರು. ಈಗ ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶ ಇದೆ ಎನ್ನುತ್ತಾರೆ. ಯಾವುದೇ ಸಮಸ್ಯೆ ಗ್ರಾಮದಲ್ಲಿಲ್ಲ ಎನ್ನುವಂತೆ ಬಿಂಬಿಸುತ್ತ ಇದ್ದಾರೆ” ಎಂದು ಆರೋಪಿಸಿದರು.

“ಊರಿನಲ್ಲಿ ದಲಿತ ಸಮುದಾಯ ಹಿಂದುಳಿದಿದೆ. ಅವರಿಗೆ ಭೂಮಿ ಇಲ್ಲ. ಎಲ್ಲರೂ ಸವರ್ಣೀಯರ ಜಮೀನಿಗೆ ಕೂಲಿಗೆ ಹೋಗಬೇಕು, ಇನ್ನು ಹಲವರು ಸಾಲ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ದುರುಯೋಗಪಡಿಸಿ, ದಲಿತರನ್ನೇ ಕರೆದುಕೊಂಡು ಹೋಗಿ, ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ” ಎಂದರು.

“ದಲಿತರಿಗೆ ಬೇರೆ ದಾರಿಯಿಲ್ಲ, ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಾನು ಸುಳ್ಳು ದೂರು ದಾಖಲಿಸಿಲ್ಲ. ಮುಂಚಿತವಾಗಿಯೇ ಜಿಲ್ಲಾಡಳಿತದ ಪ್ರಮುಖ ಇಲಾಖೆಗಳಿಗೆ ಗ್ರಾಮಸ್ಥರು ಮತ್ತು ಊರಿನ ಯಜಮಾನರ ಹೆಸರಿನಲ್ಲಿ, ದಲಿತ ಸಮುದಾಯದವ ಸಹಿ ಜತೆಗೇ ದೂರು ನೀಡಿರುವೆ. ಇದನ್ನೆಲ್ಲ ಪೊಲೀಸ್ ಇಲಾಖೆ ಪರಿಗಣಿಸಬೇಕು” ಎಂದು ಮನವಿ ಮಾಡಿದರು.

“ಇದಕ್ಕೂ ಮುಖ್ಯವಾಗಿ ನಾನು 2018ರಲ್ಲಿ ಕಲ್ಲಳ್ಳಿ ಗ್ರಾಮದ ಲಿಂಗಾಯತ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾದೆ. ಹಾಗಾಗಿ ಸವರ್ಣೀಯರಿಗೆ ನನ್ನ ಮೇಲೆ ದ್ವೇಷ. ದಲಿತ ಯುವಕ ಲಿಂಗಾಯತ ಯುವತಿಯನ್ನು ಮದುವೆಯಾಗಿರುವುದಕ್ಕೆ ಸಹಿಸಲಾಗುತ್ತಿಲ್ಲ. ಹೇಗಾದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ದೂರು ದಾಖಲಿಸಬೇಕು. ನನ್ನ ಜೀವನ, ನನ್ನ ಕುಟುಂಬದ ಜೀವನ ಹಾಳು ಮಾಡಬೇಕು ಎನ್ನುವುದು ಸವರ್ಣೀಯರ ಹುನ್ನಾರವಾಗಿದೆ” ಎಂದು ಆರೋಪಿಸಿದರು.

ಇದನ್ನೂ ಓದಿದ್ದೀರಾ? ಹಾರೋಹಳ್ಳಿ | ಬನವಾಸಿಯಲ್ಲಿ ಅಸ್ಪೃಶ್ಯತೆ ಆಚರಣೆ; ರಾಜಿ, ಮಾತುಕತೆ ಹೆಸರಲ್ಲಿ ಆರೋಪಿಗಳ ರಕ್ಷಣೆ

“ನಾನು ನನ್ನ ವಯಕ್ತಿಕ ಹಿನ್ನಲೆಯಲ್ಲಿ ಯಾವುದೇ ದೂರು ನೀಡಿಲ್ಲ. ಗ್ರಾಮದಲ್ಲಿ ದಲಿತರಿಗೆ ಆಗಿರುವ ಅನ್ಯಾಯದ ವಿರುದ್ಧ ದೂರು ನೀಡಿದ್ದು, ಸವರ್ಣೀಯರು ಜಾತಿನಿಂದನೆ ಮಾಡಿ, ಕೊಲೆ ಬೆದರಿಕೆ, ಅವಾಚ್ಯ ನಿಂದನೆ ಮಾಡಿದಾಗ ಪ್ರತಿಭಟನೆ ಮಾಡಿ, ದೂರು ದಾಖಲಿಸಿದ್ದೀನಿ” ಎಂದರು.

ಈ ವಿಶೇಷ ವಿಡಿಯೋ ನೋಡಿದ್ದೀರಾ? https://youtu.be/no4zqyZMKGg?si=wCpHWy85T-BqF3wE

“ಜಿಲ್ಲಾಡಳಿತದ ಮುಂದೆ ಸದರಿ ಗ್ರಾಮದಲ್ಲಿ ಸವರ್ಣೀಯರು, ದಲಿತರನ್ನು ದೇವಸ್ಥಾನ ಪ್ರವೇಶಿಸಲು ಬಿಡಲಿ, ದೇವಸ್ಥಾನಕ್ಕೆ ಸೇರಿದ ಜಮೀನು ಹರಾಜು ಪ್ರಕ್ರಿಯೆ ನಡೆಸಲಿ. ಇದನ್ನಯಾಕೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದರು.

ವಿಶೇಷ ವಿಡಿಯೋ ನೋಡಿದ್ದೀರಾ? https://www.youtube.com/watch?v=s-t2Y6t-Vvw

“ಈಗ ಜೀವಕ್ಕೆ, ಕುಟುಂಬಕ್ಕೆ ಅಪಾಯವಿದ್ದು, ರಕ್ಷಣೆ ಜತೆಗೆ ಕಾನೂನು ರೀತ್ಯಾ ನ್ಯಾಯ ಒದಗಿಸಿಕೊಡಬೇಕು” ಎಂದು ಮನವಿ ಮಾಡಿದರು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...