ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯನ್ನೆ ಬೆಚ್ಚಿಬೀಳಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಜನಪರ ಹೋರಾಟಗಾರ ಅಜಿತ್ ನಾಯ್ಕ್ ಅವರ ಬರ್ಬರ ಹತ್ಯೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ.
ಸುಮಾರು ಏಳು ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶೀಘ್ರದಲ್ಲೇ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಲಿದೆ.
ಪ್ರಕರಣದ ಹಿನ್ನೆಲೆ: ದಾಂಡೇಲಿಯನ್ನು ಪ್ರತ್ಯೇಕ ತಾಲೂಕನ್ನಾಗಿ ಮಾಡುವಲ್ಲಿ ಅಜಿತ ನಾಯ್ಕ್ ಅವರ ಶ್ರಮ ಅನನ್ಯವಾದುದು. ‘ದಾಂಡೇಲಿ ಬಚಾವೋ’ ಆಂದೋಲನದ ಮೂಲಕ ಜನಸಾಮಾನ್ಯರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದ ಅವರು, ಸ್ಥಳೀಯವಾಗಿ ಪ್ರಭಾವಿ ರಾಜಕಾರಣಿಗಳಿಗೂ ಸವಾಲಾಗಿದ್ದರು. ಅವರ ನಿರ್ಭೀತ ವಾದ ಮತ್ತು ಸಾಮಾಜಿಕ ಕಳಕಳಿ ಅನೇಕ ಭ್ರಷ್ಟ ಶಕ್ತಿಗಳಿಗೆ ನಡುಕ ಹುಟ್ಟಿಸಿತ್ತು ಎನ್ನುವುದು ಕಹಿ ಸತ್ಯ.
2018ರಲ್ಲಿ ಸಂಜೆ ವೇಳೆ ತಮ್ಮ ಕಚೇರಿಯ ಮುಂದೆಯೇ ಅಜಿತ್ ನಾಯ್ಕ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಘಟನೆ ಇಡೀ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಭೂ ಮಾಫಿಯಾ ಮತ್ತು ವೃತ್ತಿ ವೈಷಮ್ಯವೇ ಈ ಕೃತ್ಯಕ್ಕೆ ಪ್ರೇರಣೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿರಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಅವರು ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸಾಕ್ಷ್ಯಗಳ ವಿಚಾರಣೆ ಮತ್ತು ವಾದ-ಪ್ರತಿವಾದಗಳು ಈಗಾಗಲೇ ಪೂರ್ಣಗೊಂಡಿದ್ದು, ನ್ಯಾಯದೇವತೆಯ ತೀರ್ಪಿನತ್ತ ಇಡೀ ಜಿಲ್ಲೆಯ ಜನರ ಚಿತ್ತ ನೆಟ್ಟಿದೆ.
ಅಜಿತ್ ನಾಯ್ಕ್ ಅವರ ಸಾವಿನಿಂದ ನೊಂದಿರುವ ಅವರ ಕುಟುಂಬದವರು ಹಾಗೂ ಅಭಿಮಾನಿಗಳು, “ತಡವಾದರೂ ನ್ಯಾಯ ಸಿಗಲಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿ” ಎಂಬ ಆಶಯದೊಂದಿಗೆ ತೀರ್ಪಿಗಾಗಿ ಕಾಯುತ್ತಿದ್ದಾರೆ.





