ದಾಂಡೇಲಿ: ಹಳಿಯಾಳ ಕ್ಷೇತ್ರದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರ ವಿರುದ್ಧ ಮಾಜಿ ಶಾಸಕ ಸುನೀಲ ಹೆಗಡೆ ಮಾಡಿರುವ ಆರೋಪಗಳು ರಾಜಕೀಯ ಹತಾಶೆಯಿಂದ ಕೂಡಿದ್ದು, ಇವು ಸಂಪೂರ್ಣ ಬಾಲಿಶತನದ ಹೇಳಿಕೆಗಳಾಗಿವೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶಪಾಂಡೆ ಅವರ ಸುದೀರ್ಘ ರಾಜಕೀಯ ಜೀವನ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.
ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇಶಪಾಂಡೆ ಅವರು, ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿ ಉತ್ತರ ಕನ್ನಡ ಜಿಲ್ಲೆಗೆ ಮಹತ್ವದ ಯೋಜನೆಗಳನ್ನು ತಂದಿದ್ದಾರೆ. ಇಂತಹ ಮುತ್ಸದ್ದಿ ನಾಯಕನ ಕಾರ್ಯಕ್ಷಮತೆಯನ್ನು ಪ್ರಶ್ನಿಸುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಅಂಕೋಲಾ | ಭೀಕರ ಸರಣಿ ಅಪಘಾತ: 12 ವಿದೇಶಿಗರು ಸೇರಿ 28 ಮಂದಿಗೆ ಗಾಯ, ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಕಾಗೇರಿ ಓಲೈಕೆಗಾಗಿ ಹೇಳಿಕೆ: “ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮೆಚ್ಚಿಸುವ ಏಕೈಕ ಉದ್ದೇಶದಿಂದ ಸುನೀಲ ಹೆಗಡೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಕಾಗೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ವಿಭಜನೆಗೆ ಪ್ರಯತ್ನಿಸಿದ್ದನ್ನು ಹೊರತುಪಡಿಸಿ ಜಿಲ್ಲೆಗೆ ನೀಡಿದ ಕೊಡುಗೆಯಾದರೂ ಏನು?” ಎಂದು ಹಲವಾಯಿ ನೇರವಾಗಿ ಪ್ರಶ್ನಿಸಿದ್ದಾರೆ.
ಕೃತಜ್ಞತೆ ಮರೆಯಬೇಡಿ: ಸುನೀಲ ಹೆಗಡೆ ಅವರು ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿರುವ ಹಲವಾಯಿ, “ಹೆಗಡೆ ಕುಟುಂಬವು ದೇಶಪಾಂಡೆ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದಿದೆ. ಎಂಎಲ್‌ಸಿ ಸ್ಥಾನ ಸೇರಿದಂತೆ ವಿವಿಧ ರಾಜಕೀಯ ಅಧಿಕಾರಗಳನ್ನು ಅನುಭವಿಸಲು ಯಾರ ಕಾರಣ ಎಂಬುದು ಅವರಿಗೆ ತಿಳಿದಿದೆ.
ಈಗ ಅದೇ ಗುರುವಿನ ವಿರುದ್ಧ ಹಗುರವಾಗಿ ಮಾತನಾಡುವುದು ಅವರ ರಾಜಕೀಯ ಅಪ್ರಭುದ್ಧತೆಯನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರಾಗಿದ್ದ ಐದು ವರ್ಷಗಳ ಅವಧಿಯಲ್ಲಿ ಸುನೀಲ ಹೆಗಡೆ ಅವರು ಕ್ಷೇತ್ರಕ್ಕೆ ತಂದ ಹೊಸ ಯೋಜನೆಗಳಾವುವು ಎಂಬುದನ್ನು ಮೊದಲು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ದೇಶಪಾಂಡೆ ಅವರ ಜನಪರ ಕೆಲಸಗಳನ್ನು ಗುರುತಿಸಿ ಹಿಂದಿನ ಬಿಜೆಪಿ ಸರ್ಕಾರವೇ ಅವರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಗೌರವಾನ್ವಿತ ನಾಯಕನ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಸುನೀಲ ಹೆಗಡೆ ಅವರಿಗೆ ಶೋಭಿಸುವುದಿಲ್ಲ ಎಂದು ಮೋಹನ ಹಲವಾಯಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





