ದಾಂಡೇಲಿ: ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ಕಚೇರಿಗಳಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಆರ್‌ಟಿಒ ಮತ್ತು ಎ.ಆರ್.ಟಿ.ಒ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.
ಶುಕ್ರವಾರ ದಾಂಡೇಲಿಯಲ್ಲಿ 6.55 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರಿಗೆ ಇಲಾಖೆಯ ಬಹುತೇಕ ಸೇವೆಗಳನ್ನು ಈಗಾಗಲೇ ಆನ್‌ಲೈನ್ ಮಾಡಲಾಗಿದ್ದು, ಸಾರ್ವಜನಿಕರು ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸದ್ಯ 20 ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳು ಕಾರ್ಯಾರಂಭ ಮಾಡಿವೆ. ಇನ್ನು 25 ಕಡೆಗಳಲ್ಲಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿವೆ. ಇದರೊಂದಿಗೆ ಒಟ್ಟು 45 ಪಥಗಳು ಸಿದ್ಧವಾಗಲಿದ್ದು,
ದೇಶದಲ್ಲೇ ಅತೀ ಹೆಚ್ಚು ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಈ ಪಥಗಳು ಸಂಪೂರ್ಣವಾಗಿ ಸೆನ್ಸರ್ ಆಧಾರಿತವಾಗಿದ್ದು, ಮಾನವ ಹಸ್ತಕ್ಷೇಪವಿಲ್ಲದೆ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ.
ವಾಹನಗಳ ಫಿಟ್ನೆಸ್ (ಪರಿಶೀಲನೆ) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ‘ಜಿಯೋ ಫೆನ್ಸಿಂಗ್’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ವಾಹನಗಳು ಕಡ್ಡಾಯವಾಗಿ ಕಚೇರಿಗೆ ಬಂದರೆ ಮಾತ್ರ ತಪಾಸಣೆ ಸಾಧ್ಯವಾಗಲಿದೆ. ಇದರೊಂದಿಗೆ ರಾಜ್ಯದ ವಾಣಿಜ್ಯ ವಾಹನಗಳ ಲೋಕೇಶನ್ ಟ್ರ್ಯಾಕಿಂಗ್ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದ ಸ್ಲೀಪರ್ ಬಸ್ ಅಪಘಾತಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಖಾಸಗಿ ಬಸ್ ಮಾಲೀಕರು ಈ ತಿಂಗಳ ಅಂತ್ಯದೊಳಗೆ ಸರ್ಕಾರದ ನಿಯಮಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸ್ಲೀಪರ್ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಸಿದ್ದಾಪುರ | ಇತಿಹಾಸದ ಹಾದಿಯಲ್ಲಿ ಹುಲ್ಕುತ್ರಿ ಶಾಲಾ ಮಕ್ಕಳು; ಜೈನ ನೆಲೆಗಳ ಅಧ್ಯಯನ
ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಅವರ ಕೋರಿಕೆಯಂತೆ ದಾಂಡೇಲಿಯಲ್ಲಿ ಶೀಘ್ರದಲ್ಲೇ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ. ಅಲ್ಲದೆ, ದಾಂಡೇಲಿ-ಬೆಂಗಳೂರು ಮಾರ್ಗವಾಗಿ ಹೊಸ ‘ಪಲ್ಲಕ್ಕಿ’ ಬಸ್ ಸೌಲಭ್ಯ ಒದಗಿಸಲು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ದಾಂಡೇಲಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಹಾಲಸ್ವಾಮಿ, ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





