ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 2012 ರಲ್ಲಿ ನಡೆದಿದ್ದ ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ಮದನ ನಾಯಕ ಅವರ ಹತ್ಯೆ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಈಗ ಈ ಕೇಸ್‌ನಲ್ಲಿ 13 ವರ್ಷಗಳ ನಂತರ ನ್ಯಾಯಾಲಯ ತನ್ನ ತೀರ್ಪನ್ನು ಹೊರಡಿಸಿದ್ದು, ಜಿಲ್ಲೆಯ ಜನತೆಗೆ ಮತ್ತೋಮ್ಮೆ ನ್ಯಾಯಾಲಯದ ಮೇಲೆ ನಂಬಿಕೆ ಮೂಡಿದೆ. ಶಿರಸಿಯ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯಲ್ಲಾಪುರ ವಿಭಾಗದ ನ್ಯಾಯಾಧೀಶ ಕಿರಣ ಕಿಣಿ ಅವರು ಶುಕ್ರವಾರ ಈ ತೀರ್ಪನ್ನು ಪ್ರಕಟಿಸಿದ್ದಾರೆ.
ಮುಖ್ಯ ಆರೋಪಿ ಪ್ರಶಾಂತ ರಾಮಾ ಲಮಾಣಿ ಅವರನ್ನು ಅಪರಾಧಿ ಎಂದು ಗುರುತಿಸಲಾಗಿದ್ದು, ಅವರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 11,000 ರೂಪಾಯಿ ದಂಡ ವಿಧಿಸಲಾಗಿದೆ. ಇದಲ್ಲದೆ, ಮೃತ ಮದನ ನಾಯಕ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಉಳಿದ ಆರೋಪಿಗಳಾದ ಆನಂದ ರೂಪಸಿಂಗ್ ನಾಯಕ್, ಸುರೇಶ ಶಂಕ್ರಪ್ಪ ನಾಯಕ್, ಶೈಲಜಾ, ದಾನಾಬಾಯಿ ಮತ್ತು ಮಾಧುರಿ ರಾಠೋಡ ಅವರಿಗೆ ತಲಾ 1,000 ರೂಪಾಯಿ ದಂಡ ತೀರ್ಪಾಗಿದ್ದು, ದಂಡ ಪಾವತಿ ಮಾಡದಿದ್ದರೆ ಒಂದು ತಿಂಗಳ ಸರಳ ಸೆರೆವಾಸ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.

ಈ ಪ್ರಕರಣ ರಾಜ್ಯ ಸರ್ಕಾರದ ಗಮನಕ್ಕೆ ಬಂದ ನಂತರ ಸಿಐಡಿ ವಿಭಾಗಕ್ಕೆ ವರ್ಗಾವಣೆಯಾಗಿತ್ತು. ಸಿಐಡಿ ಅಧಿಕಾರಿಗಳು ವಿವರವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗೀಕರ ಅವರು ದೃಢ ಸಾಕ್ಷ್ಯಗಳೊಂದಿಗೆ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆ ಖಚಿತಪಡಿಸುವಲ್ಲಿ ಸಫಲರಾಗಿದ್ದಾರೆ.
ಘಟನೆಯ ಹಿನ್ನೆಲೆ ನೋಡುವುದಾದರೆ, ದಾಂಡೇಲಿಯ ಕೇರವಾಡ ಗ್ರಾಮದ ಹಾಳಮಡ್ಡಿ ಪ್ರದೇಶದಲ್ಲಿ ಕಾಳಿ ನದಿ ದಡದ ಬಳಿ ಶಿವರಾಮ ಅಪ್ಪಾಜಿ ಪಾಟೀಲ ಅವರ ಭೂಮಿಯಲ್ಲಿ ಪುರಮಾರ ಶ್ರೀ ದಾಂಡೇಲಪ್ಪ ದೇವಸ್ಥಾನವಿದೆ. ಇಲ್ಲಿ ಅನುಮತಿಯಿಲ್ಲದೆ ನಿರ್ಮಿಸಲಾದ ಶೆಡ್‌ಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಮೊಸಳೆ ನೋಟಕ್ಕಾಗಿ ಮಾಂಸದ ಆಹಾರ ತಯಾರಿಸಿ, ಉಳಿದ ಭಾಗಗಳನ್ನು ನದಿಯ ಮೊಸಳೆಗಳಿಗೆ ಹಾಕುತ್ತಿದ್ದರು.
ಇದು ವನ್ಯಜೀವಿ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸುತ್ತಿತ್ತು.2012ರ ಮೇ 6ರ ಸಂಜೆ ಸುಮಾರು 4.30ರ ಸಮಯದಲ್ಲಿ ಆರೋಪಿಗಳು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶೆಡ್‌ನಲ್ಲಿ ಮಾಂಸದ ಅಡುಗೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಮದನ ನಾಯಕ ಅವರು ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮೊಸಳೆಗಳಿಗೆ ಆಹಾರ ಹಾಕುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎಂದು ಅವರು ಎಚ್ಚರಿಕೆ ನೀಡಿದಾಗ, ಆರೋಪಿಗಳು ಜಗಳಕ್ಕೆ ನಿಂತರು. ಇದು ತೀವ್ರಗೊಂಡು ಸಾಮೂಹಿಕ ಹಲ್ಲೆಗೆ ತಿರುಗಿತು. ಅವರು ಮದನ ನಾಯಕ ಅವರ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದರು.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಅಜಿತ್ ನಾಯ್ಕ ಹತ್ಯೆ ಕೇಸ್: ಪ್ರಮುಖ ಆರೋಪಿ ದೋಷಿ ಎಂದು ತೀರ್ಪು, ಜನೆವರಿ 13ರಂದು ಶಿಕ್ಷೆ ಪ್ರಮಾಣ ಪ್ರಕಟ
ಗಾಯಗೊಂಡ ಮದನ ನಾಯಕ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆಪರೇಷನ್ ಮಾಡಿ ಐಸಿಯುನಲ್ಲಿ ಇರಿಸಿದರೂ, ತಲೆಗೆ ಆದ ಗಂಭೀರ ಗಾಯದಿಂದ ಮೇ 8ರ ರಾತ್ರಿ 10.30ಕ್ಕೆ ಅವರು ಕೊನೆಯುಸಿರೆಳೆದರು.
ಘಟನೆಯ ನಂತರ ಸ್ಥಳೀಯ ಪೊಲೀಸರು ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಮತ್ತು ಮೃತರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದರಿಂದ ದಾಂಡೇಲಿಯಲ್ಲಿ ಜನರು ಆಕ್ರೋಶಗೊಂಡರು. ಮೇ 9ರಂದು ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಮದನ ನಾಯಕ ಅವರ ಪಾರ್ಥಿವ ಶರೀರವನ್ನು ಇರಿಸಿ ಹೊರಳಾಟ ಮಾಡಲಾಯಿತು.
ಜನರ ಒತ್ತಡದಿಂದ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತು. ಸಿಐಡಿ ಡಿವೈಎಸ್‌ಪಿ ಬಿ.ಬಿ. ಅಶೋಕ್ ಕುಮಾರ್ (ಟೈಗರ್ ಅಶೋಕ ಕುಮಾರ್) ಅವರು ತನಿಖೆಯನ್ನು ಮುಗಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ದೀರ್ಘಕಾಲದ ಕಾನೂನು ಪ್ರಕ್ರಿಯೆಯ ನಂತರ ಬಂದ ತೀರ್ಪು ನ್ಯಾಯ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಘಟನೆ ಅರಣ್ಯ ಸಂರಕ್ಷಣೆ ಮತ್ತು ಕಾನೂನು ಪಾಲನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತದೆ.





