ದಾಂಡೇಲಿ: ನಗರಸಭಾ ಸದಸ್ಯತ್ವದ ಅವಧಿ ಮುಗಿಯಲು ಕೇವಲ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿ, ದಾಂಡೇಲಿ ನಗರಸಭೆಯ ಪೌರಾಯುಕ್ತರು, ಆಡಳಿತಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನೊಳಗೊಂಡ ಸುಮಾರು 30 ಮಂದಿ ತಂಡ ಹೈದ್ರಾಬಾದಿಗೆ ಅಧ್ಯಯನ ಪ್ರವಾಸ ಕೈಗೊಂಡಿದೆ. ನಗರಸಭೆ ತಂಡ ಕಸದಿಂದ ಇಂಧನ ಉತ್ಪಾದನೆ ಪ್ರಕ್ರಿಯೆ ಕುರಿತು ಸಮಗ್ರ ಅಧ್ಯಯನ ಮಾಡುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರವಾಸ ಇದೀಗ ನಗರದಲ್ಲಿ ಚರ್ಚೆಯ ವಿಷಯವಾಗಿದೆ. ಹೈದ್ರಾಬಾದ್‌ನ ದಕ್ಷಿಣ ಭಾರತದ ಪ್ರಪ್ರಥಮ ಕಸದಿಂದ ಇಂಧನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಸದಸ್ಯರು ಅಲ್ಲೇ ನಿಂತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ, ರಸ್ತೆಗಳ ಗುಂಡಿಗಳು ಹಾಗೂ ಧೂಳಿನ ತೊಂದರೆಗಳಿಂದ ಜನತೆ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲಕ್ಷಗಟ್ಟಲೆ ಹಣವನ್ನು ನಗರಸಭೆ ನಿಧಿಯಿಂದ ಖರ್ಚುಮಾಡಿ ಟೂರ್‌ಗೆ ತೆರಳಿರುವುದು ಸಾರ್ವಜನಿಕ ಟೀಕೆಗೆ ಗ್ರಾಸವಾಗಿದೆ.
ಸದಸ್ಯರ ಅಧಿಕಾದ ಅವಧಿ ಇದೆ ಅಕ್ಟೋಬರ್ 31ರಂದು ಮುಗಿಯುತ್ತದೆ ಈ ಸಂದರ್ಭದಲ್ಲಿ, ಅಧ್ಯಯನ ಯಾತ್ರೆಯಿಂದ ನಗರಕ್ಕೆ ಏನು ಪ್ರಯೋಜನವಾಗಲಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆಡಳಿತ ಪಕ್ಷದ ಸದಸ್ಯರ ಲೋಪ ದೋಷಗಳನ್ನು ವಿರೋಧಿಸಬೇಕಾದ ವಿರೋಧ ಪಕ್ಷದ ನಗರಸಭಾ ಸದಸ್ಯರು ಅವರೊಟ್ಟಿಗೆ ಕೈ ಜೋಡಿಸಿ ಯಾತ್ರೆ ಹೊರಟಿದ್ದು ಟೀಕೆಗೆ ಗುರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ನವೆಂಬರ್ 9ರೊಳಗೆ ಮುಗಿಯಲಿದೆ. ದಾಂಡೇಲಿ ನಗರಸಭೆಯ ಆಡಳಿತಾವಧಿ ಅಕ್ಟೋಬರ್ 31 ರಂದು ಮುಗಿಯಲಿದೆ ಎಂದು ಮಾಹಿತಿ ಬಂದಿದೆ.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಕರ್ನಾಟಕ ಬ್ಯಾಂಕ್‌ನಲ್ಲಿ ₹3.51 ಕೋಟಿ ರೂ.ಗಳ ವಂಚನೆ ಬೆಳಕಿಗೆ; ಪ್ರಕರಣ ದಾಖಲು.
ಈ ಹಂತದಲ್ಲಿ ಮತ್ತೇ ಸದ್ಯದಲ್ಲಿ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ನಗರಸಭೆ ಬೊಕ್ಕಸಕ್ಕೆ ಖರ್ಚು ಹಾಕಿ ನಗರೋದ್ಧಾರಕ್ಕಾಗಿ ಅಧ್ಯಯನ ಮಾಡಿ ಬಂದಿರುವ ನಗರಸಭಾ ಸದಸ್ಯರ ಅವಧಿಯೇ ಮುಗಿಯುತ್ತಿರುವಾಗ ಈ ಅಧ್ಯಯನ ಪ್ರವಾಸದಿಂದ ನಗರಕ್ಕೇನು ಉಪಯೋಗ ಎಂದು ಜನ ಪ್ರಶ್ನಿಸುತ್ತಿದ್ದಾರೆ.





