ದಾಂಡೇಲಿ: ವಾಣಿಜ್ಯ ಉದ್ದೇಶಗಳಿಗಾಗಿ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಬಳಸುತ್ತಿದ್ದ ನಗರದ ವಿವಿಧ ಹೋಟೆಲ್‌ಗಳ ಮೇಲೆ ಕಂದಾಯ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಗುರುವಾರ ಜಂಟಿ ದಾಳಿ ಒಟ್ಟು 5 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಹೋಟೆಲ್‌ಗಳು, ಟೀ ಅಂಗಡಿ ಹಾಗೂ ಎಗ್ ರೈಸ್ ಸೆಂಟರ್‌ಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲಿಗೆ ಡೊಮೆಸ್ಟಿಕ್ (ಗೃಹಬಳಕೆ) ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ತಹಶೀಲ್ದಾರ್ ಶೈಲೇಶ್ ಪರಮಾನಂದ್ ಹಾಗೂ ಆಹಾರ ನಿರೀಕ್ಷಕರ ನೇತೃತ್ವದ ತಂಡವು ವಿವಿಧೆಡೆ ತಪಾಸಣೆ ನಡೆಸಿತು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿರುವುದು ಪತ್ತೆಯಾದ ತಕ್ಷಣ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದರು.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಇತಿಹಾಸದ ಹಾದಿಯಲ್ಲಿ ಹುಲ್ಕುತ್ರಿ ಶಾಲಾ ಮಕ್ಕಳು; ಜೈನ ನೆಲೆಗಳ ಅಧ್ಯಯನ
ದಾಳಿಯ ನಂತರ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ್ ಅವರು, “ಸಾಮಾನ್ಯ ಜನರಿಗೆ ಮೀಸಲಿರುವ ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರ. ಇಂತಹ ದುರುಪಯೋಗವನ್ನು ತಡೆಯಲು ನಗರದಲ್ಲಿ ನಿರಂತರವಾಗಿ ತಪಾಸಣಾ ಕಾರ್ಯಚರಣೆ ಮುಂದುವರಿಯಲಿದೆ,” ಎಂದು ತಿಳಿಸಿದರು.
ಆಹಾರ ನಿರೀಕ್ಷಕ ಗೋಪಿ ಚೌಹಾನ್ ಮಾತನಾಡಿ, “ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ತಾತ್ಕಾಲಿಕ ಕೊರತೆಯನ್ನು ನೆಪ ಮಾಡಿಕೊಂಡು ಹೋಟೆಲ್ ಮಾಲೀಕರು ಸಾರ್ವಜನಿಕರ ಬಳಕೆಯ ಸಿಲಿಂಡರ್‌ಗಳನ್ನು ಬಳಸುವಂತಿಲ್ಲ. ಇದರಿಂದಾಗಿ ಸಾಮಾನ್ಯ ಮನೆಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಎಚ್ಚರಿಸಿದರು.
ಈ ಕಾರ್ಯಾಚರಣೆಯಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳಾದ ದಯಾನಂದ್ ಹಾಗೂ ಇತರರು ಭಾಗವಹಿಸಿದ್ದರು.





