ದಾಂಡೇಲಿ – ಅಳ್ನಾವರ ನಡುವೆ ಸ್ಥಗಿತಗೊಂಡಿರುವ ಪ್ರಯಾಣಿಕರ ರೈಲು ಸೇವೆಯನ್ನು ಕೂಡಲೇ ಪುನರಾರಂಭಿಸುವಂತೆ ಒತ್ತಾಯಿಸಿ ಅಳ್ನಾವರ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ದಾಂಡೇಲಿಯಿಂದ ಆಗಮಿಸಿದ್ದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ರಾಜ್ಯ ಸ್ಥಳೀಯ ಘಟಕದ ಅಧ್ಯಕ್ಷ ಫಿರೋಜ್ ಫಿರಜಾದೆ ಅವರ ನೇತೃತ್ವದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು .
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅಧ್ಯಕ್ಷರು, ದಾಂಡೇಲಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ರೈಲು ನಿಲ್ದಾಣ ನಿರ್ಮಿಸಿದ್ದರೂ, ಸ್ಥಳೀಯ ಜನರಿಗೆ ಅಗತ್ಯವಿರುವ ಪ್ರಯಾಣಿಕರ ರೈಲು ಸೇವೆ ಇಲ್ಲದೆ ಸೌಕರ್ಯ ವ್ಯರ್ಥವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊವಿಡ್ ಸಂದರ್ಭದಿಂದ ಧಾರವಾಡ–ದಾಂಡೇಲಿ ನಡುವೆ ಓಡಾಟ ನಡೆಸುತ್ತಿದ್ದ ದೈನಂದಿನ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅದರಿಂದಾಗಿ ಜನಸಾಮಾನ್ಯರ ಸಂಚಾರ, ವ್ಯಾಪಾರ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಿದೆ ಎಂದರು.
ರೈಲು ಸೇವೆ ಮರು ಪ್ರಾರಂಭಿಸುವಂತೆ ಸಂಸದರು, ರೇಲ್ವೆ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ಹಾಗೂ ನೇರ ಮನವಿ ಸಲ್ಲಿಸಿದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜನರ ಧ್ವನಿಯನ್ನು ಮತ್ತೊಮ್ಮೆ ಬಲವಾಗಿ ಪ್ರತಿಧ್ವನಿಸುವ ಉದ್ದೇಶದಿಂದ ರೈಲು ತಡೆ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಧಾರವಾಡದ ರೇಲ್ವೆ ಸಲಹಾ ಸಮಿತಿ ಸದಸ್ಯರಾದ ಲಿಂಗರಾಜ ಮೂಲಿಮನಿ ಹಾಗೂ ಪ್ರವೀಣ್ ಪವಾರ ಸ್ಥಳಕ್ಕೆ ಭೇಟಿ ನೀಡಿ, “ರೈಲು ಸೇವೆ ಪುನರಾರಂಭಕ್ಕೆ ಬೇಕಾದ ತಾಂತ್ರಿಕ ಸಿದ್ಧತೆ ಸಾಗಿದೆ. 90% ಕಾರ್ಯ ಪೂರ್ಣವಾಗಿದೆ. ಉಳಿದ 10% ಕೆಲಸವನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಿ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಜೊತೆಗೆ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಪಶ್ಚಿಮ ಪದವೀಧರರ ಮತಕ್ಷೇತ್ರ ಚುನಾವಣೆ–2026: 14,231 ಕರಡು ಮತದಾರರ ಪಟ್ಟಿ ಪ್ರಕಟ
ಸದಸ್ಯರ ಪ್ರತಿಕ್ರಿಯೆ ಹಾಗೂ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಶ್ರೀಕಾಂತ ಅಸೂದೆ, ರವಿ ಸುತಾರ, ರಫೀಕ್ ಹುದ್ದಾರ, ರಾಘವೇಂದ್ರ ವಿ., ಭಾರ್ಗವಿ ಮನ್ನೂರು ಸೇರಿದಂತೆ ಹವವರು ಭಾಗವಹಿಸಿದ್ದರು.





