ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ-ಮತಾಂಧರ ವಿರೋಧ ಖಂಡನೀಯ ಎಂದಿರುವ ಕರ್ನಾಟಕ ಪ್ರಾಂತ ರೈತ ಸಂಘ, ಸರ್ಕಾರದ ನಿರ್ಧಾರವು ಸ್ವಾಗತಾರ್ಹ ಎಂದು ತಿಳಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯಾಧ್ಯಕ್ಷರಾದ ಯು.ಬಸವರಾಜ ಹಾಗೂ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಅವರು, “ನಾಡಹಬ್ಬ ದಸರಾ ಉದ್ಘಾಟನೆಗೆ, ಬೂಕರ್ ಪ್ರಶಸ್ತಿ ವಿಜೇತ, ಕನ್ನಡದ ಹೆಸರಾಂತ ಬರಹಗಾರ್ತಿ, ನಾಡಿನ ಘನತೆಯನ್ನು ಮೆರೆದ ಹೆಮ್ಮೆಯ ಬಾನು ಮುಷ್ತಾಕ್ ಆಯ್ಕೆಯನ್ನು ಕಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಮತ್ತು ಅದಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸುತ್ತದೆ” ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ, ನಾಡಿನ ಸೌಹಾರ್ದ ಪರಂಪರೆಯನ್ನು ಪ್ರೀತಿಸುವ, ಗೌರವಿಸುವ ಬಾನು ಮುಷ್ತಾಕ್ ಅವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರುವಂತಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ಹಿಂದುತ್ವವಾದಿಗಳು, ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ಪ್ರಗತಿಪರ ಸಾಹಿತಿಗಳ ಆಯ್ಕೆಯನ್ನು ಸ್ವಾಗತಿಸಿ ಅಭಿನಂದಿಸುವ ಬದಲು ಎಂದಿನಂತೆಯೇ ಇಲ್ಲಿಯೂ ಧರ್ಮದ್ವೇಷ ಹಾಗೂ ಮಹಿಳಾ ದ್ವೇಷದ ರಾಜಕಾರಣದಲ್ಲಿ ತೊಡಗಿರುವ ಹೇಯ ವರ್ತನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ. ನಾಡ ಹಬ್ಬವನ್ನು ವಿಭಜನಕಾರಿ ದುಷ್ಕೃತ್ಯಕ್ಕೆ ಬಳಸುವ ಕುತಂತ್ರವಿದಾಗಿದೆ ಎಂದು ಕಿಡಿಕಾರಿದೆ.
ಅವರು ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯ ಮೂಲದವರು ಮತ್ತು ಮಹಿಳೆ ಎಂಬುದನ್ನೆ ಗುರಿಯಾಗಿಸಿಕೊಂಡು ನಾಡಿನ ಕೀರ್ತಿಯನ್ನು ಮುಗಿಲಿನೆತ್ತರಕ್ಕೇರಿಸಿದವರನ್ನು ಅಪಮಾನಿಸಿ, ಅಗೌರವಿಸುವ ಬಿಜೆಪಿ ಮತ್ತಿತರೆ ಮತಾಂಧರ ನಡೆ ನಾಚಿಕೆಗೇಡಿನದ್ದು. ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ನಾಡಹಬ್ಬದಲ್ಲಿ ತನ್ನ ಕೋಮು ದ್ವೇಷದ ರಾಜಕಾರಣವನ್ನು ಮುಂದೆ ಮಾಡುತ್ತಿದೆ. ರಾಜ್ಯದ ಜನತೆ ಬಿ.ಜೆ.ಪಿ.ಯ ಈ ಧರ್ಮದ್ವೇಷದ ಕುಯುಕ್ತಿಯ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದೆ.
ಇದನ್ನು ಓದಿದ್ದೀರಾ? ಹಾಸನ | ಚಾಮುಂಡೇಶ್ವರಿ ದೇವಿಯ ಹರಕೆ ತೀರಿಸಲು ಸದಾವಕಾಶ ದೊರೆತಿದೆ: ಬಾನು ಮುಷ್ತಾಕ್
ನಾಡ ಹಬ್ಬ ದಸರಾವನ್ನು ಈ ಹಿಂದೆ ಖ್ಯಾತ ಕವಿ ನಿಸಾರ್ ಅಹ್ಮದ್ ರವರು ಉದ್ಘಾಟನೆ ಮಾಡಿದ್ದರು. ದಸರಾ ಕನ್ನಡ ನಾಡಿನ ಹಬ್ಬವೇ ಹೊರತೂ ಹಿಂದುತ್ವವಾದಿಗಳ ಪಿತೂರಿಯ ಹಬ್ಬವಲ್ಲ ಎಂಬುದನ್ನು ಅರ್ಥಮಾಡಿಕೊಂಡು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.





