ದಾವಣಗೆರೆ ಮಹಾನಗರ ಪಾಲಿಕೆಯು 41ನೇ ವಾರ್ಡ್‌ನಲ್ಲಿರುವ ಉದ್ಯಾನವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿದೆ. ಪಾಲಿಕೆಯ ಕ್ರಮವನ್ನು ಖಂಡಿಸಿ ಎಸ್.ಎ.ರವೀಂದ್ರನಾಥ್ ನಗರ ನಾಗರಿಕ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿದೆ.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು ಮತ್ತು ಸಮಿತಿ ಸದಸ್ಯರು, “ಉದ್ಯಾನವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೆ, ತೀವ್ರ ಹೋರಾಟ ಎದುರಿಸಬೇಕಾಗುತ್ತದೆ. ಪಾಲಿಕೆ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು. ಉದ್ಯಾನವನ್ನು ಪಾಲಿಕೆ ಅಭಿವೃದ್ಧಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಸ್ಥಳೀಯ ಮುಖಂಡ ಹಾಗೂ ಚೌಡೇಶ್ವರಿ ದೇವಸ್ಥಾನದ ಟ್ರಸ್ಟಿ ಎಂ.ಆನಂದ್ ಮಾತನಾಡಿ, “ಆರೋಗ್ಯ ಮತ್ತು ನೈರ್ಮಲ್ಯ ದೃಷ್ಟಿಯಿಂದ ಮಹಾನಗರ ಪಾಲಿಕೆಯ ಈ ಯೋಜನೆ ಅವೈಜ್ಞಾನಿಕವಾಗಿದೆ. ಎಸ್.ಎ.ರವೀಂದ್ರನಾಥ ನಗರದ ನಿವಾಸಿಗಳಿಗೆ ಹಾಗೂ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತೀವ್ರ ತೊಂದರೆ ಆಗಲಿದ್ದು, ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕು: ಎಂದು ಆಗ್ರಹಿಸಿದರು.
“ಉದ್ಯಾನವನವು ದಾವಣಗೆರೆಯ ನಗರದ ಅತಿದೊಡ್ಡ ಪಾರ್ಕ್ ಆಘಿದೆ. ಪಕ್ಕದಲ್ಲಿಯೇ ಕೈಗಾರಿಕಾ ಪ್ರದೇಶ ಇದೆ. ಚೌಡೇಶ್ವರಿ ದೇವಸ್ಥಾನ, ಭೂತಪ್ಪ ದೇವಸ್ಥಾನ ಇವೆ. ಸುತ್ತಮುತ್ತ ಜನವಸತಿ ಪ್ರದೇಶ ಇದೆ. ಅಲ್ಲದೆ, ಈ ಜಾಗವನ್ನು ಟೌನ್‌ಹಾಲ್ ಮತ್ತು ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಕಾಯ್ದಿರಿಸಲಾಗಿದೆ ಎಂದು ನಕಾಶೆಯಲ್ಲೇ ತಿಳಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ವಸತಿಗೃಹ ನಿರ್ಮಿಸಲು ಸಹ ಯೋಜನೆ ಸಿದ್ಧವಾಗಿತ್ತು. ಅದೂ ಕೂಡ ನೆನೆಗುದಿಗೆ ಬಿದ್ದಿದೆ” ಎಂದು ಆರೋಪಿಸಿದರು.
“ಇಂತಹ ಪ್ರಮುಖ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿರುವುದು ಸ್ಥಳೀಯ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಒಂದು ವೇಳೆ ಹಠಕ್ಕೆ ಬಿದ್ದು ಪಾಲಿಕೆ ಏನಾದರೂ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ, ಸುತ್ತಮುತ್ತಲಿನ ನಿವಾಸಿಗಳು ರೋಗ-ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇದೆ, ಘಟಕದಿಂದ ಹೊರಸೂಸುವ ದುರ್ವಾಸನೆ, ಕ್ರಿಮಿಕೀಟಗಳಿಂದಾಗಿ ಯಾವ ನಾಗರಿಕರು ಇಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಕ್ಷಣ ಪಾಲಿಕೆ ತನ್ನ ನಿರ್ಧಾರವನ್ನು ಕೈಬಿಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಎ.ರವೀಂದ್ರನಾಥ ನಗರ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ಮಲ್ಲನಗೌಡ್ರು, ಅಧ್ಯಕ್ಷ ಎನ್ ಸಿದ್ಧರಾಮಪ್ಪ, ಪದಾಧಿಕಾರಿಗಳಾದ ಎಸ್.ಆರ್.ಸೋಮಶೇಖರಪ್ಪ, ಎನ್.ಎಸ್.ಮಹೇಶ್ವರಪ್ಪ, ಜಿ.ಕರಿಬಸಪ್ಪ, ಸಿ.ಕೆ.ಶಿವಪ್ಪ ಸೇರಿದಂತೆ ಸ್ಥಳೀಯ ನಾಗರಿಕರು ಇದ್ದರು.




