ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರಳನ್ನು ಮನೆಗೆ ನುಗ್ಗಿ ಕೊಲೆಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಗಂಗಾಮತ ಸಮಾಜದ ಮುಖಂಡ ಹೆಚ್.ಕೆ ವೆಂಕಟೇಶ್ ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಗಂಗಾಮತ ಸಮಾಜ, ಬೆಸ್ತರ ಚಾರಿಟಬಲ್ ಟ್ರಸ್ಟ್, ಸ್ವಾಮಿ ವಿವೇಕಾನಂದ-ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಉಪ ತಹಶೀಲ್ದಾರ್ ಸುರೇಶ್ ನಾಯ್ಕ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಆರೋಪಿ ಗಿರೀಶ್ ಸಾವಂತ್ ಎಂಬಾನಿಗೆ ಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ರಾಜ್ಯ ಸರ್ಕಾರ ನೊಂದ ಕುಟಂಬಕ್ಕೆ ಪರಿಹಾರ ನೀಡಬೇಕು. ಹೆಣ್ಣು ಮಕ್ಕಳ ಮೇಲೆ ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಗಂಗಾಮತ ಸಮಾಜದ ತಾಲ್ಲೂಕು ಘಟಕದ ಸಂಚಾಲಕ ಕೆ.ದೇವೇಂದ್ರಪ್ಪ ಮಾತನಾಡಿ, “ಅಂಜಲಿ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಮಾಜದ ಬಾಂಧವರಿಂದ ಹಣ ಸಂಗ್ರಹಿಸಿ ನೊಂದ ಕುಟುಂಭಕ್ಕೆ ಕೊಡುವುದಾಗಿ ಗಂಗಾಮತ ಸಮಾಜದ ಸ್ವಾಮೀಜಿ ಹೇಳಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಗಂಗಾಮತ ಸಮಾಜದಿಂದ ಪರಿಹಾರ ನೀಡುತ್ತೇವೆ” ಎಂದರು.
ಬಿಜೆಪಿ ಮುಖಂಡ ಎಂ.ಆರ್. ಮಹೇಶ್ ಮಾತನಾಡಿ, “ರಾಜ್ಯದಲ್ಲಿ ಗಾಂಜಾ ಆಫಿಮು ಸೇವನೆಯಿಂದ ಯುವ ಸಮೂಹ ಹಾಳಾಗುತ್ತಿದೆ. ಹುಬ್ಬಳಿಯ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗರ ಹತ್ಯೆ ಕೊಲೆ ಪ್ರಕರಣಗಳು ನಡೆದಿದ್ದು ಸರ್ಕಾರ ಕಾನೂನು ಪರಿಪಾಲನೆಯಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ, ಕೆ.ವಿ.ಚನ್ನಪ್ಪ, ಗಂಗಾಮತ ಸಮಾಜದ ತಾಲ್ಲೂಕು ಗೌರವಾಧ್ಯಕ್ಷ ಕೆ.ರಾಜಪ್ಪ, ಉಪಾಧ್ಯಕ್ಷ ಜೆ.ಹಳದಪ್ಪ, ಕಾರ್ಯಧರ್ಶಿ ಚೀಲೂರು ಲೋಕೇಶ್, ಪದಾಧಿಕಾರಿಗಳಾದ ನರಸಿಂಹಪ್ಪ, ಮಲ್ಲಿಕಾರ್ಜುನ್, ಶಿವಪ್ಪ, ಹೆಚ್.ಚನ್ನೇಶ್ ಸೇರಿದಂತೆ ಇತರರು ಹಾಜರಿದ್ದರು.




