ಎಲ್ಲೆಲ್ಲೂ ಮಕ್ಕಳ ಕಲರವ, ಕಾಲ್ಗೆಜ್ಜೆಗಳ ನಿನಾದ, ವಿವಿಧ ವೇಷಭೂಷಣಗಳು ಸೀರೆಯುಟ್ಟು ಸಡಗರದಿಂದ ಓಡಾಡುವ ಬಾಲೆಯರು, ಬಾಲಕರು. ತಳಿರು ತೋರಣ, ಹಬ್ಬದ ಸಂಭ್ರಮ, ಇವೆಲ್ಲ ಕಂಡುಬಂದಿದ್ದು ದಾವಣಗೆರೆ ನಗರದ ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ. ಮಂಗಳವಾರ ಶಾಲಾ ಆವರಣದಲ್ಲಿ 2025-26 ನೇ ಸಾಲಿನ ಜಿಜಿಎಂಎಸ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು.

ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಹೆಚ್ಆರ್ ವಿಶಾಲಾಕ್ಷಿ ಮಾತನಾಡಿ “ಪ್ರತಿಭಾ ಕಾರಂಜಿ ಮಕ್ಕಳ ಪಾಠದ ಜೊತೆಗೆ ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಕೌಶಲ್ಯ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಮಕ್ಕಳು ಇದರ ಪ್ರಯೋಜನ ಪಡೆಯಬೇಕು” ಎಂದು ಕಾರ್ಯಕ್ರಮದ ಔಚಿತ್ಯವನ್ನು ತಮ್ಮ ಉದ್ಘಾಟನಾ ನುಡಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಫಾಸಿಯುದ್ದಿನ್ ಶಾಕಿರ್ “ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಪಾರದರ್ಶಕವಾದ ತೀರ್ಪನ್ನು ನೀಡಬೇಕು. ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ” ಎಂದು ಕರೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ವಲಯ ಸಿ ಆರ್ ಪಿ ನಾಗರಾಜ್ “ಮಕ್ಕಳ ಪ್ರತಿಭೆ ಅರಳಲು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಮಕ್ಕಳ ಕಲಾ ಕೌಶಲ್ಯ ಬೆಳೆಸಲು ಸಹಕಾರಿಯಾಗಬೇಕು. ಶಿಕ್ಷಕರು , ಪೋಷಕರು ಮಕ್ಕಳಿಗೆ ಆಟಪಾಠದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡಿ ಗುರುತಿಸಬೇಕು. ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದವರಿಗೆ ಕೃತಜ್ಞತೆಗಳು” ಎಂದು ತಿಳಿಸಿದರು.

ಅಕ್ಕಮಹಾದೇವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸುರೇಶ್ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಉತ್ತಮ ಗುಣ ಬೆಳೆಸಿಕೊಳ್ಳಬೇಕು, ಎಂದು ತಿಳಿಸಿ ಕನ್ನಡದ ಎಲ್ಲಾದರು ಇರು, ಎಂತಾದರು ಇರು ಗೀತೆಯಲ್ಲಿ ಹಾಡಿ ಮಕ್ಕಳನ್ನು ರಂಜಿಸಿದರು.

ಕನ್ನಡ ಧ್ವಜದ ಶಾಲುಗಳು, ಕನ್ನಡ ಪುಸ್ತಕಗಳು, ಕನ್ನಡ ಕವಿಗಳ ಪದ್ಯಗಳನ್ನು ಒಳಗೊಂಡ ಶುಭಾಷಯ ಪತ್ರಗಳೊಂದಿಗೆ ಎಲ್ಲರೂ ಸ್ವಾಗತಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ರೈತರ ಭೂಮಿಯೂ ಕಬಳಿಕೆ, ಆರೋಗ್ಯವೂ ಹಾಳು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಂ ಎಚ್ ರವಿಶಂಕರ್ ಕಾರ್ಯದರ್ಶಿಗಳಾದ ಮಹಾರುದ್ರಪ್ಪ ಸಂಘದ ಪ್ರತಿನಿಧಿಗಳಾದ ಶ್ರೀಮತಿ ಶೋಭಾರಾಣಿ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಜಿ ಮಂಜಪ್ಪ, ಶ್ರೀಮತಿ ಶರೀಫ ಮಾಳಗಿ, ಹನುಮಂತಪ್ಪ, ಬಸವರಾಜ್, ದಾವಣಗೆರೆ ಉತ್ತರ ವಲಯದ ಬಿ ಆರ್ ಪಿ ಹಾಗೂ ಸಿ ಆರ್ ಪಿ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ನೂರಾರು ಮಕ್ಕಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.





