ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ದಾವಣಗೆರೆಯ ಗಾಂಧಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 223 ತಾಲೂಕುಗಳಲ್ಲಿ ಬರ ಆವರಿಸಿದ್ದು, ಜನ-ಜಾನುವಾರುಗಳಿಗೆ ನೀರು, ಮೇವಿಗಾಗಿ ಹಾಹಾಕಾರ ಆರಂಭವಾಗಿದೆ. ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಕಳೆದ ವರ್ಷವೂ ಕೂಡ ಸರಿಯಾದ ಬೆಳೆಯಾಗದೇ ರೈತರಿಗೆ ಮೇವು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೇವಿನ ಲಭ್ಯತೆಯ ಕೊರತೆಯ ಜೊತೆಗೆ ವಿಪರೀತ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ರೈತರಿಗೆ ಮೇವು ಸರಿಯಾಗಿ ವಿತರಣೆಯಾಗುತ್ತಿಲ್ಲ. ಜಾನುವಾರುಗಳಿಗೆ ಪಶು ಆಹಾರ ನೀಡುವುದಕ್ಕೂ ಸರ್ಕಾರದ ಖಜಾನೆ ಖಾಲಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲುಷಿತ ನೀರು ಸೇವನೆ | ಕೆ.ಸಾಲುಂಡಿ ಗ್ರಾಮದ ಯುವಕ ಸಾವು; ಕಾರಣ ಪತ್ತೆ ಹಚ್ಚಲು ಸಿಎಂ ಸೂಚನೆ
ಪ್ರತಿಭಟನೆಯಲ್ಲಿ ಭಾರತ ಉಪಾಧ್ಯಕ್ಷ ಡಾ ಬಿ ಎಸ್ ಸುನಿತ್ ಕುಮಾರ್, ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿಗಳಾದ ನಾಗಸ್ಮಿತಾ, ಮಂಜುನಾಥ್ ರೆಡ್ಡಿ, ಚೌಡಪ್ಪ ಹುಣೆಕಟ್ಟೆ, ರುದ್ರಪ್ಪ, ಭೀಮಣ್ಣ ಈ ಮಾಯಕೊಂಡ, ನಾಗರಾಜ್ ನಲ್ಕುಂದ, ಶಿವಲಿಂಗಪ್ಪ ನಲ್ಕುಂದ ಸೇರಿದಂತೆ ಇತರರು ಇದ್ದರು.





