ಮಟ್ಕಾ ಆಡಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ, ಪೊಲೀಸ್ ಠಾಣೆಯಲ್ಲೇ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ನಡೆದಿದೆ. ಆತನನ್ನು ಪೊಲೀಸರೇ ಕೊಂದಿದ್ದಾರೆ. ಇದು ಲಾಕಪ್‌ಡೆತ್ ಎಂದು ಮೃತದ ಸಂಬಂಧಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದು, ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಮಟ್ಕಾ ಆರೋಪದ ಮೇಲೆ ಪೊಲೀಸರು ಆದಿಲ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಆತನಿಗೆ ‘ಬಿ.ಪಿ’ ಕಡಿಮೆಯಾದ ಪರಿಣಾಮ ಕುಸಿದು ಬಿದ್ದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ಇದನ್ನು ಲಾಕಪ್‌ಡೆತ್ ಎಂದು ಆರೋಪಿಸಿರುವ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿ, ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 11 ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್, “ಆದಿಲ್ ಪೊಲೀಸ್ ಠಾಣೆಯಲ್ಲಿ 6-7 ನಿಮಿಷ ಕೂಡ ಇರಲಿಲ್ಲ. ಠಾಣೆಗೆ ಬರುತ್ತಲೇ ಆಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆತನ ಸಂಬಂಧಿಗಳು ಲಾಕಪ್‌ಡೆತ್ ಎನ್ನುತ್ತಿದ್ದಾರೆ. ಠಾಣೆಯಲ್ಲಿ ಸಿಸಿ ಕ್ಯಾಮೆರಾ ಇದೆ. ಪರಿಶೀಲನೆ ಮಾಡುತ್ತೇವೆ. ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಮಾಣಕವಾಗಿ ತನಿಖೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.




