ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಯೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ.
ಮಾರುಕಟ್ಟೆಯ ಬಾಂಬೆ ಬಿಗ್ ಬಜಾರ್ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಇಡೀ ಬಟ್ಟೆ ಅಂಗಡಿ ಸುಟ್ಟು ಹೋಗಿದೆ. ಇಂದು(ಅ.25) ಮುಂಜಾನೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ತಂತಿಗೆ ಹಕ್ಕಿಯೊಂದು ತಾಗಿದ್ದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಇಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿ ಬಟ್ಟೆ ಅಂಗಡಿಗೆ ತಗುಲಿದೆ. ಇದು ಬೆಂಕಿ ಅವಘಡ ಸಂಭವಿಸಲು ಪ್ರಮುಖ ಕಾರಣ ಎನ್ನುತ್ತಿದ್ದಾರೆ ಪ್ರತ್ಯಕ್ಷದರ್ಶಿಗಳು. ಬೆಂಕಿ ಹೊತ್ತಿಕೊಂಡ ವೇಳೆ ಅಂಗಡಿಯಲ್ಲಿ ನಾಲ್ಕುಜನ ಕೆಲಸದವರಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಅವರು ಪ್ರಾಣ ರಕ್ಷಣೆಗಾಗಿ ಓಡಿಹೋಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೆಂಕಿ ಬಟ್ಟೆಗಳಿಗೆ ಸಂಪೂರ್ಣ ಆವರಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಬಟ್ಟೆ ಅಂಗಡಿ ಸಂಪೂರ್ಣ ಸುಟ್ಟು, ಪಕ್ಕದ ಹೊಟೆಲ್ಗೂ ಸಣ್ಣಪುಟ್ಟ ಹಾನಿಯಾಗಿದೆ ಎಂದು ಸಂತೆಬೆನ್ನೂರು ಗ್ರಾ.ಪಂ ಸದಸ್ಯ ಆಸೀಪ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.




