ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕ್ವಿಟ್ ಇಂಡಿಯಾ ದಿನದಂದು (ಆಗಸ್ಟ್ 9) ರಾಷ್ಟ್ರವ್ಯಾಪಿ ಕಾರ್ಮಿಕರು ಮಹಾ ಧರಣಿ ನಡೆಸುತ್ತಿದ್ದಾರೆ. ದಾವಣಗೆರೆಯಲ್ಲಿಯೂ ಕಾರ್ಮಿಕ ಐಕ್ಯಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರದ 9 ವರ್ಷಗಳ ಬಿಜೆಪಿ ಸರ್ಕಾರ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಮರಣಾಂತಿಕ ದಾಳಿ ಎಸಗಿದೆ. ಸಂಕಷ್ಟಗಳ ಸರಮಾಲೆಯನ್ನೇ ಜನತೆಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರ ನೀಡಿದೆ. ನಿರುದ್ಯೋಗ ಪೆಡಂಭೂತದಂತೆ ಹೆಚ್ಚುತ್ತಿದೆ. ನೋಟುಗಳ ಅಮಾನೀಕರಣದ ತರುವಾಯ ಜನರು ಅಂಚಿಗೆ ತಳ್ಳಲ್ಪಟ್ಟಿದ್ದರೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
“ದೇಶದಲ್ಲಿ ಬಡತನ ಹೆಚ್ಚಳವಾಗಿ, ಆರ್ಥಿಕ ಕುಸಿತ ತಲೆದೂರಿದೆ. ನಿರುದ್ಯೋಗ ಹೆಚ್ಚಳದಿಂದಾಗಿ ಯುವಕರು ಹತಾಶರಾಗಿದ್ದಾರೆ. ಅಸಹನೀಯವಾದ ಬೆಲೆ ಏರಿಕೆ ಒಂದೆಡೆಯಾದರೆ, ವೇತನ ಹೆಚ್ಚಳವಿಲ್ಲದೆ, ಆಹಾರವನ್ನೂ ಕೊಳ್ಳಲಾಗದೆ, ಹಸಿವಿನ ಸೂಚ್ಯಂಕ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ, ಅವುಗಳನ್ನು ಭರ್ತಿ ಮಾಡಲಾಗಿಲ್ಲ. ಬಿಡಿಗಾಸಿಗೆ ಖಾಸಗಿ ವಲಯದಲ್ಲಿ ಹೆಚ್ಚಿನ ಜನರು ದುಡಿಯುತ್ತಿದ್ದಾರೆ. ಆದರೆ, ಅವರನ್ನು ಮಾಲೀಕರು ಇಷ್ಟಬಂದಾಗ ಕೆಲಸದಿಂದ ವಜಾಗೊಳಿಸಿ, ದೌರ್ಜನ್ಯ ಎಸಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಶಾಸನಬದ್ಧ ಸೌಲಭ್ಯಗಳಾದ ಪಿಎಫ್, ಇಎಸ್‌ಐ ಮತ್ತು ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ. ದೆಹಲಿಯ ಹೊರವಲಯದಲ್ಲಿ ಒಂದು ವರ್ಷಗಳ ಕಾಲ ನಡೆದ ರೈತರ ಹೋರಟಕ್ಕೆ ಮಣಿದ ಕೇಂದ್ರ ಸರ್ಕಾರ ಹಲವು ಭರವಸೆಗಳನ್ನು ನೀಡಿತ್ತು. ಆದರೆ, ಮಾತಿನಿಂದ ಹಿಂದೆ ಸರಿದು ನಂಬಿಕೆ ದ್ರೋಹ ಮಾಡಿದೆ” ಎಂದು ಕಿಡಿಕಾರಿದ್ದಾರೆ.
“ಸಮಸ್ಯೆಗಳು ಮುಗಿಲೆತ್ತರಕ್ಕೆ ಬೆಳೆದಿರುವಾಗ ಕಾರ್ಮಿಕ ವರ್ಗದ ಬೇಡಿಕೆಗಳಿಗೆ ಸ್ಪಂದಿಸದೆ ಕೇಂದ್ರ ಸರ್ಕಾರ ಬಹಿರಂಗವಾಗಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿದೆ. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ದಿನದ ದುಡಿತದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ಕಾರ್ಮಿಕ ಸಮುದಾಯ ಹಲವಾರು ತ್ಯಾಗ ಬಲಿದಾನ ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ಲೇಬರ್ ಕೋಡನ್ನು ತರಲಾಗಿದೆ. ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ದುಡಿತದ ಅವದಿಯನ್ನು 8ರಿಂದ 12 ಕ್ಕೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು.
- ಜೀವನ ಯೋಗ್ಯ ವೇತನ ರೂ. 31,500ಕ್ಕೆ ಹೆಚ್ಚಿಸಬೇಕು.
- ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ರದ್ದು ಪಡಿಸಬೇಕು.
- ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಮಾಸಿಕ 8 ಸಾವಿರ ಪಿಂಚಣಿ ನೀಡಬೇಕು.
- ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು.
- ಉದ್ಯೋಗ ಖಾತ್ರಿ ಯೋಜನೆ, ಮನರೇಗಾ ದುಡಿತದ ದಿನ 200ಕ್ಕೆ ಹೆಚ್ಚಿಸಬೇಕು.
- ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಟ ವೇತನ ವ್ಯಾಪ್ತಿಗೆ ಒಳಪಡಿಸಬೇಕು.
- ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು
- ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ರಚನೆ ಮಾಡಬೇಕು.
- ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿಗೊಳಿಸಿ ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು.
- ವಿದ್ಯುತ್ ಶಕ್ತಿ ಮಸೂದೆ 2020 ಅನ್ನು ಕೈ ಬಿಡಬೇಕು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ನಾಯಕಿ ಜಬೀನಾ ಖಾನಂ, ಉಮೇಶ್ ಆವರಗೆರೆ, ಅವರಗೆರೆ ಚಂದ್ರು, ವಾಸು, ಬ್ಯಾಂಕ್ ನೌಕರರ ಕಾರ್ಮಿಕರ ಒಕ್ಕೂಟದ ರಾಘವೇಂದ್ರ ನಾಯರಿ ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್, ಪವಿತ್ರ, ಆದಿಲ್ ಖಾನ್, ಇತ ರೆ ಕಾರ್ಮಿಕ ಸಂಘಟನೆಗಳ ರಮೇಶ್ ನಾಯ್ಕ ,ಶರೀಫ್ ಅಹಮದ್,ಎಲ್ಲಪ್ಪ ಮುಸ್ತಾಫ ನಾಗಮ್ಮ, ಶಿವಕುಮಾರ್ ಇದ್ದರು.




