ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ ವಿನಾಕಾರಣ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಲ್ಲದೇ, ದೂರು ಹಿಂಪಡೆಯಲು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಬೆದರಿಕೆ ಹಾಕಿದವರನ್ನು ಬಂಧಿಸಿ ಎಂದು ಗ್ಲೋಬಲ್ ಪಬ್ಲಿಕ್ ಎಜುಕೇಶನ್ ಅಂಡ್ ವೆಲ್ವೇರ್ ಫೌಂಡೇಶನ್ ಸೈಯದ್ ಅಕ್ಬರ್ ಅಲಿ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಶಾಲೆಯನ್ನು ಕಾನೂನು ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ವಿನಾಕಾರಣ ಹಣಕ್ಕಾಗಿ ಶಿಕ್ಷಣ ಇಲಾಖೆಗೆ ಆಧಾರ ರಹಿತ ಸುಳ್ಳು ದೂರನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಲ್ಲದೆ, ದೂರು ನೀಡಿದ ವ್ಯಕ್ತಿ ಈ ಕುರಿತು ಮಾತುಕತೆ ನಡೆಸಲು ಬಡಾವಣೆ ಪೊಲೀಸ್ ಠಾಣೆಯ ಸಮೀಪದ ಪ್ರವಾಸಿ ಮಂದಿರದ ಬಳಿ ಕರೆಸಿ, ನಾವು ನೀಡಿರುವ ದೂರನ್ನು ಹಿಂಪಡೆಯಬೇಕಾದರೆ ಐದು ಲಕ್ಷ ನೀಡಬೇಕು. ಇಲ್ಲವಾದರೆ ನಿಮ್ಮ ಶಾಲೆಯನ್ನು ಬಂದ್ ಮಾಡಿಸುತ್ತೇವೆ ಎಂದು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನನ್ನ ಜೇಬಿನಲ್ಲಿ ಇದ್ದ ಹಣವನ್ನು ಬಲವಂತವಾಗಿ ಕಿತ್ತುಕೊಂಡಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಮಗೆ ರಾಜಕೀಯ ಹಿನ್ನೆಲೆ ಇದೆ. ನೀವು ಹಣ ಕೊಡಲೇಬೇಕೆಂದು ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ. ನನಗೆ ಜೀವ ಭಯ ಕಾಡುತ್ತಿದೆ ಎಂದು ತಮ್ಮ ಆತಂಕ ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಸಾದುಲ್ಲಾ, ಮಹಮ್ಮದ್ ರಸೂಲ್, ಶಾಹೀದ್ ಆಜಂ, ವಾಹೀದಾ ಬಾಬು ಇದ್ದರು.





