ಮೆಕ್ಕೆಜೋಳದ ಬೆಳೆಗೂ ಲದ್ದಿ ಹುಳಕ್ಕೂ ಬಿಡಿಸಲಾಗದ ನಂಟು ಏರ್ಪಟ್ಟಿದ್ದು, ಇದು ಬಹುತೇಕ ಬಯಲು ಸೀಮೆ, ಮಧ್ಯ ಕರ್ನಾಟಕ ಭಾಗದ ವಾಣಿಜ್ಯ ಬೆಳೆಯಾಗಿದೆ. ಮೆಕ್ಕೆಜೋಳದ ಬೆಳೆಯನ್ನೇ ನಂಬಿಕೊಂಡಿರುವ ರೈತರ ಭವಿಷ್ಯವನ್ನು ಕಂಗಾಲಾಗಿಸಿದೆ. ಸೈನಿಕ ಹುಳು ಅಥವಾ ಲದ್ದಿ ಹುಳುವಿನ ವೈಜ್ಞಾನಿಕ ಹೆಸರು ಸ್ಪೋಡೋಪ್ಟೆರಾ ಫ್ರುಗಿಪರ್ಡ(Spodoptera frugiperda). ಈ ಕೀಟವನ್ನು ಫಾಲ್ ಆರ್ಮಿವರ್ಮ್(Fall armyworm) ಎಂದೂ ಕರೆಯುತ್ತಾರೆ.
ಸಾವಿರ, ಲಕ್ಷಾಂತರ ಸಂಖ್ಯೆಯಲ್ಲಿ ಮೆಕ್ಕೆಜೋಳಕ್ಕೆ ದಾಂಗುಡಿ ಇಡುವ ಸೈನಿಕ ಹುಳು ಎಂದೇ ಕರೆಸಿಕೊಳ್ಳುವ ಲದ್ದಿ ಹುಳ ಕಳೆದ ಐದಾರು ವರ್ಷಗಳಿಂದ ಪ್ರತಿ ವರ್ಷ ಪ್ರಬಲವಾಗಿ ವೃದ್ದಿಯಾಗುತ್ತಿದ್ದು, ಮಳೆ ನಂಬಿ ಕೃಷಿ ಮಾಡುವ ರೈತರನ್ನು ನಷ್ಟಕ್ಕೀಡುಮಾಡುತ್ತಿದೆ. ಕೃಷಿ ವಿಜ್ಞಾನ ಮತ್ತು ಸರ್ಕಾರ ರೈತರ ನೆರವಿಗೆ ಬರಬೇಕಿದೆ.

ಮೆಕ್ಕೆಜೋಳದ ಬೆಳೆಗೆ ಈ ವರ್ಷವೂ ಮತ್ತೆ ಲದ್ದಿಹುಳು ಕಾಟ ಶುರುವಾಗಿದೆ. ದಾವಣಗೆರೆ ತಾಲೂಕಿನಲ್ಲಿ ಪೂರ್ವ ಮುಂಗಾರು ಅಂದರೆ ಮೇ, ಜೂನ್ ಪ್ರಾರಂಭದ ತಿಂಗಳಲ್ಲಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ಮೆಕ್ಕೆಜೋಳವನ್ನು ಲದ್ದಿ ಹುಳುಗಳು ಮುಕ್ಕುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಲ್ಲಿ ಔಷಧಿ ಕೂಡ ಸಿಂಪಡಿಸುತ್ತಿದ್ದಾರೆ.

ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಐದಾರು ವರ್ಷಗಳಿಂದ ಮೆಕ್ಕೆಜೋಳ ಬೆಳೆಗೆ ಸೈನಿಕ ಅಥವಾ ಲದ್ದಿ ಹುಳು ಹಾವಳಿ ವಿಪರೀತವಾಗಿದೆ. ಜಿಲ್ಲೆಯಾದ್ಯಂತ ಬಹಳಷ್ಟು ರೈತರು ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ ತಾಲೂಕು ಸೇರಿದಂತೆ ಹಲವೆಡೆ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಬಿತ್ತನೆ ಮಾಡಿ ಗೇಣುದ್ದದಿಂದ ಒಂದೆರಡು ಅಡಿಗಳಷ್ಟು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಬಹುತೇಕ ಲದ್ದಿಹುಳುಗಳಿಗೆ ಆಹುತಿಯಾಗುತ್ತಿದೆ.
ರೈತರಿಗೆ ವಿಸ್ಮಯ ತರಿಸುವಂತಿರುವ ಲದ್ದಿ/ಸೈನಿಕ ಹುಳು ಸಂತತಿ ಜೀವನ ಸಮಯ 18-20 ದಿನಗಳಾದರೂ
ಅದರ ಕಾರ್ಯ ದಿಗ್ಭ್ರಮೆ ಮೂಡಿಸುತ್ತದೆ. 20-22 ದಿನಗಳ ನಂತರ ಚಿಟ್ಟೆಯಾಗಿ ರೂಪಾಂತರ ಹೊಂದಲು ಪ್ರಾರಂಭಿಸುತ್ತದೆ. ಸಾವಿರ, ಲಕ್ಷಗಟ್ಟಲೆ ಹಿಂಡು ಹಿಂಡಾಗಿ ದಾಂಗುಡಿ ಇಡುವ ಹುಳುಗಳು ಮೆಕ್ಕೆಜೋಳದ ಗಿಡಗಳಲ್ಲಿಯೇ ಸೇರಿಕೊಂಡು ಕಣ್ಣಿಗೆ ಬೀಳದಂತೆ ಹಸಿರೆಲೆ ಮತ್ತು ಕಾಂಡವನ್ನು ಕೊರೆದು ತಿನ್ನಲಾರಂಭಿಸಿವೆ.

ಎಲೆಗಳ ಮಧ್ಯೆ ಸುಳಿಯಲ್ಲಿ ಸೇರಿಕೊಳ್ಳುವ ಲದ್ದಿಹುಳುಗಳು ಹಸಿರೆಲೆ ಸೇರಿ ಕಾಂಡದ ಮಟ್ಟಕ್ಕೆ ಕೊರೆದು ತಿನ್ನಲಾರಂಭಿಸುತ್ತವೆ. ಒಂದೇ ರಾತ್ರಿಯಲ್ಲಿ ಸಂಪೂರ್ಣ ಜಮೀನನ್ನೇ ವ್ಯಾಪಿಸುತ್ತಿದ್ದು ಇಡೀ ಬೆಳೆಯನ್ನು ಮುಕ್ಕಿ ಮುಗಿಸುವ ಮಟ್ಟಿಗೆ ದಾಳಿ ಇಡುತ್ತವೆ.
ಮಧ್ಯಕರ್ನಾಟಕದ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯುವ ಮೆಕ್ಕೆಜೋಳವನ್ನು ಸರ್ವನಾಶ ಮಾಡಲೆಂದೇ ಈ ಹುಳುಗಳು ಸೃಷ್ಟಿಯಾಗಿವೆಯೇನೋ ಎನ್ನುವಂತಿದ್ದು, ಮೆಕ್ಕೆಜೋಳಕ್ಕೂ ಈ ಹುಳುವಿಗೂ ಬಿಡಿಸಲಾರದ ನಂಟು ಶುರುವಾಗಿದೆ. ಮೆಕ್ಕೆಜೋಳ ಬಿಟ್ಟು ಹೊಲದಲ್ಲಿರುವ ಬೇರೆ ಬೆಳೆಯನ್ನು ಮುಟ್ಟದ ಈ ಹುಳುಗಳು ರೈತನಿಗೆ ಬೆಳೆ ಕೈಗೆ ಬರದಂತೆ ಮಾಡುವ ಹಾನಿ ದೊಡ್ಡದಿದೆ. ಇವುಗಳ ಹಾವಳಿಯಿಂದ ಗಿಡಗಳಿಗೆ ನೀರು, ಪೋಷಕಾಂಶಗಳು ದೊರೆಯದೇ ಸೊರಗಿ ಇತ್ತ ಸಂಪೂರ್ಣ ಒಣಗದೆ, ಬೆಳೆಯದೆ, ಫಲ ನೀಡದೇ ಸೊರಗಿ ನಿಧಾನವಾಗಿ ಸಾಯುತ್ತವೆ.

ಇದು ಭೂಮಿಯನ್ನು ಉಳುಮೆ ಮಾಡಿ ಹಸನುಗೊಳಿಸಿ, ಬೀಜ ಗೊಬ್ಬರ ಹಾಕಿ ಕೂಲಿ ಸೇರಿದಂತೆ ಕೃಷಿಗಾಗಿ ಖರ್ಚು
ಮಾಡಿದ ರೈತನಿಗೆ ಕೊನೆಗೆ ಬೆಳೆ ಇಲ್ಲದೇ ನಷ್ಟಕ್ಕೀಡುಮಾಡುತ್ತದೆ. ಸರಾಸರಿ ಹೆಕ್ಟೇರಿಗೆ ₹35,000 ₹45,000 ಖರ್ಚು ಮಾಡಿ ಬಿತ್ತನೆ ಮಾಡಿದ ರೈತನಿಗೆ ಸಂಪೂರ್ಣ ನಷ್ಟ ಸಂಭವಿಸಿ, ಆರ್ಥಿಕ ಹೊರೆ ಹೆಚ್ಚುತ್ತದೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ರೈತ ಪ್ರಕಾಶ್ ಈ ಬಗ್ಗೆ ಅಳಲು ತೋಡಿಕೊಂಡಿದ್ದು, “ದುಬಾರಿ ಬೆಲೆಯ ಕಾಲದಲ್ಲಿ ₹45,000 ಖರ್ಚು ಮಾಡಿ 3 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಕಳೆದ ನಾಲ್ಕೈದು ವರ್ಷಗಳಿಂದ ಲದ್ದಿ ಹುಳು ಬಾಧೆ ಇದ್ದು, ಕಳೆದ ವರ್ಷದಿಂದ ಹೆಚ್ಚಾಗಿದೆ. ಔಷಧಿ ಹೊಡೆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಬಿಸಿಲಿರುವ ಕಾಲದಲ್ಲಿ ಬಿತ್ತನೆ ಮಾಡಿದರೆ ಹುಳುಗಳ ಹಾವಳಿ ತಪ್ಪುತ್ತದೆ ಎಂದಿದ್ದರು. ಆ ರೀತಿ ಮುಂಗಡವಾಗಿ ಬಿತ್ತಿದರೂ ಹುಳುಗಳ ಹಾವಳಿ ತಪ್ಪಿಲ್ಲ” ಎಂದು ಸಂಕಟ ತೋಡಿಕೊಂಡರು.
ಕೀಟನಾಶಕ ಅಂಗಡಿಗಳಿಗೆ ಹೋಗಿ ಕೇಳಿದರೆ ದುಬಾರಿ ಔಷಧಿ ಹೇಳುತ್ತಾರೆ. ಅದನ್ನು ಹೊಡೆದರೂ ಗ್ಯಾರಂಟಿ ಕೊಡುವುದಿಲ್ಲ. ಹೀಗಾದರೆ ಬಡ ರೈತರಾದ ನಾವು ಬೇಸಾಯ ಮಾಡುವುದಾದರೂ ಹೇಗೆ. ಕೃಷಿ ಇಲಾಖೆ ಅಧಿಕಾರಿಗಳು ಹುಳು ಬರದಂತೆ ತಡೆಯಲುಕೆಲಸ ಮಾಡಬೇಕು. ಔಷಧಿ ಮತ್ತು ಇತರೆ ಕೃಷಿ ವಸ್ತುಗಳನ್ನು ಕಡಿಮೆ ದುಡ್ಡಿಗೆ ರೈತರಿಗೆ ಕೊಡಬೇಕು. ಇಲ್ಲವಾದಲ್ಲಿ ಈ ಹುಳುಗಳ ಕಾಟಕ್ಕೆ ಬೇಸಾಯ ಕಷ್ಟವಾಗಿ ಬೇರೆ ಕೂಲಿ ಮಾಡಿ ಜೀವನ ಮಾಡಬೇಕಾಗುತ್ತದೆ. ಇಲ್ಲವೇ ಇರುವ ಅಲ್ಪ ಸ್ವಲ್ಪ ಜಮೀನು ಮಾರಾಟ ಮಾಡಿ, ನಗರಗಳಿಗೆ ಹೋಗಿ ಫ್ಯಾಕ್ಟರಿ, ಅಂಗಡಿಗಳ ಕೆಲಸ ನೋಡಿಕೊಳ್ಳಬೇಕು” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ಸೈನಿಕ ಹುಳು ಗುಂಪು ಗುಂಪಾಗಿ ಮೊಟ್ಟೆಗಳನ್ನು ಇಡುತ್ತದೆ. ನೂರಾರು, ಸಾವಿರ ಲೆಕ್ಕದಲ್ಲಿ ಹುಳುಗಳು ಉತ್ಪತ್ತಿಯಾಗುತ್ತವೆ. ಬಿತ್ತಿದ ನಂತರ ಬಿಸಿಲಿನ ವಾತಾವರಣ ಹೆಚ್ಚಾದಾಗ ಅದರ ಸಂತಾನ ದ್ವಿಗುಣವಾಗುತ್ತದೆ ಮತ್ತು ಹೆಚ್ಚಾಗಿ ಆವರಿಸಿಕೊಳ್ಳುತ್ತವೆ” ಎನ್ನುತ್ತಾರೆ ವಿಜ್ಞಾನಿಗಳು, ಬೇಸಾಯ ತಜ್ಞರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ ಜೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಲದ್ದಿ ಅಥವಾ ಸೈನಿಕ ಹುಳು ಹಲವಾರು ಬೆಳೆಗಳ ಭಕ್ಷಕವಾಗಿದ್ದು, ಮೆಕ್ಕೆಜೋಳ ಪ್ರಮುಖ ಆಹಾರ. ಇಲ್ಲದ ಸಮಯದಲ್ಲಿ ಬೇರೆ ಬೇರೆಯ ನೂರಕ್ಕೂ ಹೆಚ್ಚು ಬೆಳೆಗಳನ್ನು ತಿನ್ನುತ್ತದೆ. ಹಳ್ಳಿ ಪದ್ದತಿಯಲ್ಲಿ ಕೂಳೆಗಳನ್ನು ಪ್ರತಿ ವರ್ಷ ಬದಲಾಯಿಸಿ ಆಳ ಉಳುಮೆ ಮಾಡಿ, ಇಡೀ ಪ್ರದೇಶದಲ್ಲಿ ಎಲ್ಲರೂ ಒಟ್ಟಾಗಿ ಬಿತ್ತನೆ ಕಾರ್ಯ ಕೈಗೊಳ್ಳುವುದು ಹುಳುಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ” ಎಂದು ವಿವರಿಸಿದರು.
“ಕೀಟನಾಶಕ ಔಷಧಿಯಲ್ಲಿ ಬಿತ್ತನೆ ಮಾಡಿದ 10ರಿಂದ 12 ದಿನಗಳಲ್ಲಿ ಇಮಾಮೆಕ್ಟಿನ್ ಬೆಂಜೋವೆಟ್ ಮತ್ತು ಕ್ಲೋರೋಥಿನ್ ದ್ರಾವಣವನ್ನು ಒಂದು ಲೀಟರ್‌ಗೆ 1.5 ಎಂಎಲ್‌ನಂತೆ ಬೆರೆಸಿಕೊಂಡು ಸಿಂಪಡಿಸಬೇಕು. ನೈಸರ್ಗಿಕವಾಗಿ ನಿಯಂತ್ರಿಸುವ ವಿಧಾನಗಳಿದ್ದು, ರೈತರ ಏಕಬೆಳೆ ಪದ್ಧತಿಯಿಂದಾಗಿ ಇವುಗಳ ಸಂತತಿ ಹೆಚ್ಚಲು ಕಾರಣವಾಗಿದೆ. ರೈತರು ಅದಲು ಬದಲು ಪದ್ದತಿಯಲ್ಲಿ ವರ್ಷವೂ ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ಸಂತಾನ ವೃದ್ಧಿ ಸರಪಳಿ ನಿಲ್ಲಲಿದೆ. ಅಲ್ಲದೇ ಹುಳುಗಳು ಮಣ್ಣಿನಲ್ಲಿ ಹುದುಗಿಕೊಂಡಿರುವುದರಿಂದ ಬಿತ್ತನೆ ಮೊದಲು ಆಳ ಉಳುಮೆ ಮಾಡಿದಲ್ಲಿ ಮೇಲೆ ಬಂದ ಹುಳು, ಲಾರ್ವಗಳನ್ನು ಹಕ್ಕಿಪಕ್ಷಿಗಳು ತಿನ್ನುವುದರಿಂದ ಅವುಗಳ ಸಂತಾನ ಕಡಿಮೆಯಾಗುತ್ತದೆ” ಎಂದು ಸಲಹೆ ನೀಡಿದರು.
ಸೈನಿಕ ಹುಳುಗಳ ನೈಸರ್ಗಿಕ ನಿಯಂತ್ರಣಕ್ಕೆ ಬಿತ್ತಿದ 10-12ನೇ ದಿನಕ್ಕೆ ವಿಶೇಷ ಮೋಹಕ ಬಲೆಗಳನ್ನು ಎಕರೆಗೆ 7–8 ಬಲೆಗಳನ್ನು ಅಳವಡಿಸಿದರೆ ಅವು ಆಕರ್ಷಿತವಾಗಿ ಬಿದ್ದು ಸಾಯುತ್ತವೆ. ನಂತರ 10 ಸಾವಿರ ಪಿಪಿಎಂ ಗ್ರೇಡಿನ ಬೇವಿನ ಎಣ್ಣೆಯನ್ನು ಲೀಟರಿಗೆ 4ಎಂಎಲ್ ನಂತೆ ಸಿಂಪಡಿಸಿದರೆ ಮೊಟ್ಟೆಗಳು ಹುಳುಗಳಾಗುವುದನ್ನು ತಡೆಗಟ್ಟುತ್ತದೆ. ಹುಳುಗಳನ್ನು ನಾಶಪಡಿಸುತ್ತದೆ. ಈ ರೀತಿಪರಿಸರಕ್ಕೆ ಪೂರಕವಾದ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು” ಎಂದು ತಿಳಿಸಿದರು

“ಲದ್ದಿ ಹುಳುಗಳು ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಹೊರಬಂದು ಎಲೆಗಳನ್ನು ವೇಗವಾಗಿ ತಿನ್ನುತ್ತವೆ. ಹಗಲು ಹೊತ್ತಿನಲಿ ಕಾಣಿಸಿಕೊಳ್ಳುವುದಿಲ್ಲ. ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿಯ ಪ್ರಮಾಣ ಹೆಚ್ಚಾಗುತ್ತದೆ. ಮಳೆ ಬಂದರೆ ಸುಳಿಗೆ ನೀರು ತುಂಬಿಕೊಂಡು ನೈಸರ್ಗಿಕವಾಗಿ ಅವುಗಳು ಸಾವನ್ನಪ್ಪುತ್ತವೆ. ನಿಯಂತ್ರಣಕ್ಕೆ ರೈತರು ಕೃಷಿ ಇಲಾಖೆಯಲ್ಲಿ ದೊರೆಯುವ ಇಮಾಮೆಕ್ಸಿನ್ ಬೆಂಜೋವೆಟ್ ದ್ರಾವಣ ಸಿಂಪಡಿಸಬೇಕು” ಎಂದು ಕೃಷಿ ಅಧಿಕಾರಿ ಶ್ವೇತ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೆಂಗಳೂರಿಗೆ ಹೋಗುವ ವಂದೇಭಾರತ್ ರೈಲಿನಲ್ಲಿ ಬೆಂಕಿ ಅವಘಡ; ಯಾವುದೇ ಅಪಾಯವಿಲ್ಲ ರೈಲ್ವೆ ಇಲಾಖೆ ಸ್ಪಷ್ಟನೆ
ಬರ, ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಒಳಸುರಿಗಳ ಬೆಲೆ ಹೆಚ್ಚಿ, ಕೃಷಿ ಉತ್ಪನ್ನಗಳಿಗೆ ನಿಗದಿತ, ಬೆಂಬಲ ಬೆಲೆ ಇಲ್ಲದೆ ಮಾರುಕಟ್ಟೆಯ ತಾರತಮ್ಯಕ್ಕೆ ಗುರಿಯಾಗಿ ಸದಾ ಭವಿಷ್ಯದ ತೂಗುಯ್ಯಾಲೆಯಲ್ಲಿ ಬಸವಳಿವ ರೈತರಿಗೆ ಪ್ರಕೃತಿ, ಸರ್ಕಾರ, ಮಾರುಕಟ್ಟೆ ಮತ್ತು ಪ್ರಾಣಿಗಳ ಜತೆಗೆ ಕೀಟಗಳೂ ಇತ್ತೀಚೆಗೆ ವೈರಿಗಳಾಗಿ ಹೆಚ್ಚುತ್ತಿವೆ. ಇದಕ್ಕೆ ಕೃಷಿಕರು ಸೇರಿದಂತೆ ಕೃಷಿ ವಿಜ್ಞಾನಿಗಳು, ಸರ್ಕಾರ ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳುವ ದಾರಿ ಹುಡುಕಬೇಕಿದೆ. ಇಲ್ಲವಾದಲ್ಲಿ ಅನ್ನ ಬೆಳೆಯುವ ರೈತ ಕೃಷಿ ಕಾಯಕದಿಂದ ದೂರವಾಗಿ ಕೃಷಿ ಕಾರ್ಪೊರೇಟ್ ವಲಯಗಳ ಪಾಲಾಗುವ ದಿನಗಳು ದೂರವಿಲ್ಲ ಎನ್ನುವುದು ರೈತರು, ರೈತ ಹೋರಾಟಗಾರರು ಮತ್ತು ಸಾರ್ವಜನಿಕರ ಅಭಿಮತವಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




