ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್‌ಗಳು ಸಾಲ ಮರುಪಾವತಿಗೆ ರೈತರಿಗೆ ನೀಡುತ್ತಿರುವ ನೊಟೀಸ್ ತಡೆಹಿಡಿಯುವಂತೆ, ನೊಟೀಸ್‌ಗಳಿಗೆ ಬೆಂಕಿಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಣ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ಪ್ರತಿಭಟಿಸಿದೆ.
ಜಗಳೂರು ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ್ದ ಪ್ರತಿಭಟನಾಕಾರರು ಬ್ಯಾಂಕ್ ಹಾಗೂ ಫೈನಾನ್ಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿದರು. ನಂತರ ತಹಸೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಬರ ಆವರಿಸಿ ಬೆಳೆದ ಬೆಳೆಗಳು ಕೈಗೆಟಕುದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲಮರುಪಾವತಿಗೆ ಕಾಲಾವಕಾಶ ನೀಡದೆ ಟ್ರ್ಯಾಕ್ಟರ್ ಹಾಗೂ ಜಮೀನುಗಳಲ್ಲಿ ಬೆಳೆ ಬೆಳೆಯಲು ಸಾಲಮಾಡಿರುವುದು. ಆದರೆ, ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿಗೊಳಿಸಿ, ಬಲವಂತದಿಂದ ವಸೂಲು ಮಾಡಲು ಕಿರುಕುಳ ನೀಡುತ್ತಿದ್ದಾರೆ. ರೈತರು ಎದೆಗುಂದದೆ ಸಾಲವನ್ನು ಸವಾಲಾಗಿ ಸ್ವೀಕರಿಸಬೇಕು. ರೈತ ಸಂಘಟನೆಗಳ ಬಳಿ ಬರಬೇಕು ಎಂದು ಕರೆ ನೀಡಿದರು.
ರೈತಕಾರ್ಮಿಕರ ಖಾತೆಗೆ ವೃದ್ಧಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆ, ಬೆಳೆಪರಿಹಾರ ಸೇರಿದಂತೆ ವಿವಿಧ ಸಾಮಾಜಿಕ ಭದ್ರತೆಯಡಿ ಸರ್ಕಾರ ಜಮಾ ಮಾಡುವ ಹಣವನ್ನು ಕೂಡಲೇ ಸಾಲ ಮರುಪಾವತಿಗೆ ಜಮಾ ಮಾಡಬಾರದು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿ ಮಾತನಾಡಿ, ಮುಂದಿನ ಸೋಮವಾರದಂದು ತಾಲೂಕಿನ ಎಲ್ಲಾ ಮೈಕ್ರೋ ಫೈನಾನ್ಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ವ್ಯವಸ್ಥಾಪಕರನ್ನು ರೈತ ಸಂಘಟನೆ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಿ ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ, ಪದಾಧಿಕಾರಿಗಳಾದ ಸತೀಶ್ ಗೌಡಗೊಂಡನಹಳ್ಳಿ, ದಕಾನನಕಟ್ಟೆ ತಿಪ್ಪೇಸ್ವಾಮಿ, ರಾಜನಹಟ್ಟಿರಾಜು, ಸಹದೇವರೆಡ್ಡಿ, ಅಂಜಿನಪ್ಪ, ತಿಪ್ಪಣ್ಣ, ಸಣ್ಣಪಾಲಯ್ಯ, ತಿಪ್ಪೇಶ್, ಲೋಕಣ್ಣ, ಮಂಜುನಾಥ್ ರೆಡ್ಡಿ, ಅಶೋಕ, ಚಿದಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.





