ನಕಲಿ ಪದವಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನಾಡಿನ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಅಲಂಕರಿಸಿರುವ ಆರೋಪ ಹೊತ್ತಿರುವ ಪ್ರೊ. ಸಿ ಎಂ ತ್ಯಾಗರಾಜ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಫ ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ವಿವಿಯ ಕುಲ ಸಚಿವ ಹಾಗೂ ಎಲ್ಲ ಸಿಂಡಿಕೇಟ್ ಸದಸ್ಯರಿಗೆ ಮನವಿ ನೀಡಿದರು. ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, “ಪ್ರೊ. ಸಿ ಎಂ ತ್ಯಾಗರಾಜ ರವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಳ್ಳವ ಮುನ್ನ 2007ರಲ್ಲಿ ತಮ್ಮ ಉಪನ್ಯಾಸಕ ಹುದ್ದೆಗೆ ಸ್ವಯಂ ನಿವೃತ್ತಿ ನೀಡಿರುತ್ತಾರೆ. ಸರ್ಕಾರ ಇದನ್ನು ಒಪ್ಪಿದೆ. ಇಷ್ಟಾದರೂ ಇವರಿಗೆ ಪುನಃ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆ ಮಾಡಿದ್ದು ತಪ್ಪು. ಈಗಾಗಲೇ ಕುಲಪತಿಗಳ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿವೆ. ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಲು ಪ್ರೊ. ತ್ಯಾಗರಾಜ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕುಲಪತಿ ಹುದ್ದೆಯನ್ನು ಪಡೆದಿದ್ದಾರೆ. ಇವರ ವಿರುದ್ಧ ಸಭೆಯಲ್ಲಿ ನಿರ್ಣಯ ಕೈಗೊಂಡು, ಕೊಡಲೇ ಅಮಾನತು ಮಾಡಲು ಸರ್ಕಾರಕ್ಕೆ ಮತ್ತು ರಾಜ್ಯ ಪಾಲರಿಗೆ ಆಗ್ರಹಿಸಬೇಕು” ಎಂದು ಒತ್ತಾಯಿಸಿದರು.
ಪ್ರೊ ತ್ಯಾಗರಾಜ್ ಅವರು ಎಂಬಿಎ ಮೊದಲ ಮತ್ತು ಎರಡನೇ ಸೆಮಿಸ್ಟರುಗಳನ್ನು ರಾಯಪುರದ ಡಾ ಸಿ ವಿ ರಾಮನ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಆದರೆ, ಯುಜಿಸಿ ಪಟ್ಟಿಯಲ್ಲಿ ಈ ಹೆಸರಿನ ವಿವಿಯೇ ಇಲ್ಲ! ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಅನ್ನು ಬಿಲಾಸ್‌ಪುರ್ ಗುರು ಘಾಸಿದಾಸ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ನಿಂದ ದೂರ ಶಿಕ್ಷಣದ ಮೂಲಕ ಪಡೆದಿದ್ದಾರೆ. ಆದರೆ, ಯಾವುದೇ ಪದವಿಯನ್ನು ಭಾಗಶಃ ರೆಗ್ಯುಲರ್, ಭಾಗಶಃ ದೂರ ಶಿಕ್ಷಣದ ಮೂಲಕ ಪಡೆಯಲು ಅವಕಾಶ ಇಲ್ಲ. ಇದಲ್ಲದೆ ಇವರು ಜನವರಿ 2005 ರಲ್ಲಿ ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದಾರೆ ಮತ್ತು 3 ಮತ್ತು 4 ನೇ ಸೆಮಿಸ್ಟರ್ 2005ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪೂರ್ಣಗೊಂಡಿದೆ. ಆದರೆ ತರಗತಿಯ ದಿನಗಳಲ್ಲಿ ಮತ್ತು ಪರೀಕ್ಷಾ ದಿನಗಳಲ್ಲಿ ಅವರು ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ ನಲ್ಲಿ ಹಾಜರಿದ್ದರು.
ನಕಲಿ ದಾಖಲೆ ಸೃಷ್ಟಿಸಿ ಕುಲಪತಿಯಾದ ಆರೋಪ ಹೊತ್ತ ಪ್ರೊ. ಸಿ ಎಂ ತ್ಯಾಗರಾಜ ಹಾಗೂ ಪ್ರಕರಣದ ಕುರಿತು ಈದಿನ ಡಾಟ್ ಕಾಮ್ ವಿವರವಾಗಿ ವರದಿ ಮಾಡಿದೆ. ಲಿಂಕ್ ಇಲ್ಲಿದೆ ನಕಲಿ ಅಂಕಪಟ್ಟಿ, ನಕಲಿ ಪದವಿ, ನಕಲಿ ಸೇವಾ ದಾಖಲೆಯ ಆರೋಪಿ ರಾಣಿ ಚೆನ್ನಮ್ಮ ವಿವಿ ಕುಲಪತಿಯಾದದ್ದಾದರೂ ಹೇಗೆ?
ದಲಿತ ವಿದ್ಯಾರ್ಥಿ ಪರಿಷತ್ ಕಳೆದ ವರ್ಷ ವಿಜಯಪುರ ನಗರದಲ್ಲಿರುವ ಎಸ್‌ಎಂಆರ್‌ಕೆ ಬಿಎಡ್ ಕಾಲೇಜು ಮತ್ತು ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಬಿಎಡ್ ಕಾಲೇಜು ವಿರುದ್ಧ, ʼಹೆಚ್ಚು ಡೊನೇಷನ್ ಪಡೆದು ಗುಣಮಟ್ಟ ಶಿಕ್ಷಣ ನೀಡುತ್ತಿಲ್ಲʼ ಎಂದು ದೂರ ನೀಡಿತ್ತು. ಈ ಬಗ್ಗೆ ವಿಶ್ವವಿದ್ಯಾಲಯ ತನಿಖೆ ಮಾಡಿ ಆರೋಪ ಸಾಬೀತಾದ ಹಿನ್ನೆಲೆ ಎರಡೂ ಕಾಲೇಜುಗಳಿಗೆ 3 ವರ್ಷ ನಿಷೇಧ ಹೇರಿ, 30 ಲಕ್ಷ ದಂಡ ವಿಧಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಣಿ ಚೆನ್ನಮ್ಮ ವಿವಿ ಕುಲಸಚಿವರು ಪ್ರಕಟಿಸಿದರು. ಪ್ರತಿಭಟನಾಕಾರರು ಬಳಿಕ ಪ್ರತಿಭಟನೆಯನ್ನು ಇಲ್ಲಿಗೆ ಮೊಟುಕುಗೊಳಿಸಿದರು.
ಈ ವೇಳೆ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯಕುಮಾರ, ಬೆಳಗಾವಿ ಜಿಲ್ಲಾ ಸಂಚಾಲಕ ಆದರ್ಶ ಗಸ್ತಿ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ವಿಜಯಲಕ್ಷ್ಮಿ ಮುರಗನೂರ, ಪ್ರತಾಪ್, ಪ್ರಜ್ವಲ್, ರಾಜು, ಮುತ್ತು ಪೂಜಾರಿ, ಶಂಕರ ಅಲ್ಲದೇ ಇನ್ನಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





