ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವವು ಕೊಳೆತ ಸ್ಥಿತಿಯಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಮೀಪದ ಇಂದ್ರಾಣಿ ನದಿಯಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಸುಬ್ರಹ್ಮಣ್ಯನಗರ ಅಂಬಾಗಿಲಿನ ನಿವಾಸಿ ಸುರೇಶ್ ಪೂಜಾರಿ (54) ಎಂದು ಗುರುತಿಸಲಾಗಿದೆ. ಇವರು ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಡವೂರು ಶಂಕರನಾರಾಯಣ ದೇವಸ್ಥಾನದ ಹಿಂಭಾಗದಿಂದ ಹರಿಯುವ ಡ್ರೈನೇಜ್ ನೀರಿನ ಇಂದ್ರಾಣಿ ನದಿಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಕೆ. ಮಹಜರು ಪ್ರಕ್ರಿಯೆ ನಡೆಸಿದರು.
ಕೊಳೆತ ಶವದ ದುರ್ವಾಸನೆ ಹಾಗೂ ಡ್ರೈನೇಜ್ ನೀರಿನ ಗಬ್ಬು ವಾಸನೆಯ ನಡುವೆಯೇ ಕಂದಕದಲ್ಲಿದ್ದ ಕಳೇಬರವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬಳಿಕ ಶವವನ್ನು ಉಡುಪಿ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಯಿತು.
ಸಮಾಜಸೇವಕ ನಿತ್ಯಾನಂದ ಒಳಕಾಡುವವರ ನೇತೃತ್ವದಲ್ಲಿ ಶವ ಮೇಲಕ್ಕೆತ್ತುವ ಮತ್ತು ಸಾಗಿಸುವ ಕಾರ್ಯ ನಡೆಯಿತು. ಮಲ್ಪೆಯ ಶಬೀರ್ ಹಾಗೂ ಮುಸ್ತಾಕ್ ಸಹಕರಿಸಿದರು.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.






