ಕೊಡಗು ಜಿಲ್ಲೆ, ವಿರಾಜಪೇಟೆಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಆಗದೆ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿ ವರ್ತಕರ ಸಂಘದ ವತಿಯಿಂದ ಚೆಸ್ಕಾಂಗೆ ಮನವಿ ಪತ್ರ ಸಲ್ಲಿಸಿದರು.
ವಿರಾಜಪೇಟೆಯ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ವಿರಾಜಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸೂಕ್ತವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ, ಪ್ರತಿಯೊಬ್ಬರೂ ಕೂಡ ನಾನಾ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ವಿದ್ಯುತ್ ಚಾಲಿತ ಯಂತ್ರಗಳನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದಕ್ಕೂ ತೊಂದರೆ ಉಂಟಾಗುತ್ತಿರುತ್ತದೆ.
ಶಾಲಾ,ಕಾಲೇಜು ಮಕ್ಕಳು, ವರ್ತಕರು, ವಯೋವೃದ್ಧರು, ವೆಲ್ಡಿಂಗ್, ಲೇತ್, ಸರ್ವಿಸ್ ಸೆಂಟರ್, ಎಂಟಪ್ರೈಸೆಸ್, ಮಾಂಸದ ಅಂಗಡಿಗಳು ಹಾಗೂ ಇತರೆ ಮಳಿಗೆಯಲ್ಲಿ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದೆ ಆರ್ಥಿಕವಾಗಿ ಹಿನ್ನಡೆಯಲ್ಲಿದ್ದಾರೆ. ಹಾಗಾಗಿ, ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ, ಇಲಾಖೆಯವರು ವಿರಾಜಪೇಟೆಯಲ್ಲಿ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಿಕೊಡಬೇಕು. ಇದಕ್ಕೆ ಸ್ಪಂದಿಸದೆ ಇದ್ದರೆ ಸಾರ್ವಜನಿಕರು ಹಾಗೂ ಎಲ್ಲಾ ವರ್ತಕರು ಸೇರಿ ಬೃಹತ್ ಪ್ರತಿಭಟನೆಯನ್ನು ಚೆಸ್ಕಾಂ ಕಛೇರಿ ಮುಂದೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರ್ತಕರ ಸಂಘದ ಸುರೇಶ್ ಮಾತನಾಡಿ, ಯಾವುದೇ ಮಾಹಿತಿ ನೀಡದೆ ವಿದ್ಯುತ್ ಕಡಿತಗೊಳಿಸಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ವಿದ್ಯುತ್ ಕಡಿತಗೊಳಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಅಥವಾ ಮಾದ್ಯಮದ ಮೂಲಕ ತಿಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸುನಿತಾ ಹಾಗೂ ಸಹಾಯಕ ಇಂಜಿನಿಯರ್ ಸೋಮಶೇಖರ್ ಶೀಘ್ರವೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಾಲು ಮರದ ತಿಮ್ಮಕ್ಕನವರಿಗೆ ಸಂತಾಪ ಸಲ್ಲಿಸಿದ ಪರಿಸರ ಪ್ರೇಮಿಗಳು
ಮನವಿ ನೀಡುವಾಗ ವರ್ತಕರ ಸಂಘದ ನಿರ್ದೇಶಕರಾದ ರಾಜೇಶ್ ಆರ್. ಶೇಠ್, ಮಹಮ್ಮದ್ ಹನೀಫ್ ಸೇರಿದಂತೆ ಇನ್ನಿತರರು ಇದ್ದರು.





