ಬೆಳೆ ಸಮೀಕ್ಷೆದಾರರಿಗೆ ಮಾಸಿಕ ಗೌರವ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ಬೆಳೆ ಸಮೀಕ್ಷೆದಾರರ ತಂಡ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿತು.
ʼಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಋತುವಿನಲ್ಲಿ ಬೆಳೆ ಸಮಿಕ್ಷೆ ಕಾರ್ಯಕೈಗೊಳ್ಳುತ್ತೇವೆ. ಆದರೆ ಸದರಿ ಬೆಳೆ ಸಮೀಕ್ಷೆ ಕಾರ್ಯ ಸುಗಮ ರೀತಿಯಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಲ್ಲಿ ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕುʼ ಎಂದು ಆಗ್ರಹಿಸಿದರು.
ʼಸರಕಾರದ ಆದೇಶದಂತೆ ಪ್ರತಿ ವರ್ಷ ಜಿಲ್ಲೆಯ ರೈತರ ಪಹಣಿ ಪ್ರತಿಕೆಯಲ್ಲಿ ಬೆಳೆ ನಮೂದಿಸಲು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪರಿಹಾರ ಸೇರಿ ವಿವಿಧ ಬೆಳೆ ಹಾನಿ ಪ್ರಸಂಗಗಳಲ್ಲಿ ಬೆಳೆ ಹಾನಿ ಪರಿಹಾರ ಧನ ಪಡೆಯಲು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಬೆಳೆ ಸಮೀಕ್ಷೆ ಅತ್ಯಗತ್ಯವಾಗಿರುತ್ತದೆ. ಸರ್ಕಾರದ ಯೋಜನೆಗಳಿಗೆ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾದ್ಯಂತ ಸುಮಾರು ಐನೂರಕ್ಕೂ ಅಧಿಕ ಸಮೀಕ್ಷೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆʼ ಎಂದು ಹೇಳಿದರು.
ʼಎಲ್ಲ ಋತುಮಾನದಲ್ಲಿ ಬೆಳೆ ಸಮೀಕ್ಷೆ ನಡೆಸುವ ನಮಗೆ ಇಲಾಖೆಯಾಗಲಿ, ಸರ್ಕಾರವಾಗಲಿ ಯಾವುದೇ ಸಂರಕ್ಷಣೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಕನಿಷ್ಠ ಗೌರವಧನ ಕೂಡ ನೀಡುತ್ತಿಲ್ಲ. ಪಿಯುಸಿ, ಪದವಿ ಮುಗಿಸಿದ ನಮಗೆ ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದೇವೆʼ ಎಂದು ದೂರಿದರು.
ʼಬೆಳೆ ಸಮೀಕ್ಷೆದಾರರಿಗೆ ಸುರಕ್ಷಿತ ಕವಚ ಹಾಗೂ ಗುರುತಿನ ಚೀಟಿ ನೀಡಬೇಕು. ಬೆಳೆ ಸಮೀಕ್ಷೆಗೆ ಜಿ.ಪಿ.ಎಸ್ ನಕ್ಷೆ ವ್ಯವಸ್ಥೆ ಮಾಡಿಕೊಡಬೇಕು. ಸಮೀಕ್ಷೆದಾರರಿಗೆ ಜೀವ ಹಾನಿ ಸಂಭವಿಸಿದಲ್ಲಿ 5 ಲಕ್ಷ ರೂ. ಜೀವ ವಿಮೆ ನೀಡಬೇಕು. ಪ್ರತಿ ಪ್ಲಾಟ್ ಬೆಳೆಗೆ 50 ರೂ. ಅಥವಾ ಪಿಆರ್ ಗಳಿಗೆ ಪ್ರತಿ ತಿಂಗಳಿಗೆ 10 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು. ಸಮೀಕ್ಷೆ ನಡೆಸಲು ಪ್ರತಿಯೊಬ್ಬರಿಗೆ ಹೊಸ ಮೊಬೈಲ್ ಫೋನ್ ಕೊಡುವುದು ಸೇರಿದಂತೆ ಇತರೆ ಸೌಲಭ್ಯಗಳು ಒದಗಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಹಿಳಾ ಉದ್ಯಮಶೀಲತೆ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಸಮೀಕ್ಷೆದಾರರಾದ ಲೋಕೇಶ ಕಾಂಬಳೆ, ಏಕನಾಥ ಮೇತ್ರೆ, ಶಿವಕುಮಾರ್ ಶಿವಗೊಂಡ, ಮೋಹನ್ ಮಾನೆ, ಮಾಣಿಕ್ ಬಂಗಾರೆ, ಅವಿನಾಶ್, ಸುಜೀತ್, ಮಲಗೊಂಡ, ಸುಂದರ್, ಲೋಕೇಶ್ ಕುಂಟೆ, ರತಿಕಾಂತ್ ಕಾಂಬಳೆ, ರವಿ ಶಿಂಧೆ, ಷಡಕ್ಷರಿ, ಮಚೇಂದ್ರ, ವಿನೋದ್, ಬಸವರಾಜ್ ಸೇರಿದಂತೆ ಇತರರಿದ್ದರು.





